ಕೋಲಾರ: ತಾಲೂಕಿನ ಬೆಳಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 3 ಸಾವಿರ ಲೀಟರ್ ಸಾಮರ್ಥ್ಯದ ನೂತನ ಬಿಎಂಸಿ ಘಟಕವನ್ನು ಕೋಚಿ ಮುಲ್ ನಿರ್ದೇಶಕ ಡಿ.ವಿ.ಹರೀಶ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹರೀಶ್, ತಾಲೂಕಾದ್ಯಂತ ಕ್ಯಾನ್ ಮುಕ್ತವಾಗಿ ಹಾಲು ಶೇಖರಣೆ ಮಾಡಿ ಬಿಎಂಸಿ ಟ್ಯಾಂಕರ್ ಮೂಲಕ ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡಲಾಗುತ್ತದೆಂದು ತಿಳಿಸಿದರು.
ಹೈನುಗಾರಿಕೆ ಜೀವಂತ ಉಳಿಸಿ: ಒಕ್ಕೂಟದಿಂದ ರಿಯಾಯ್ತಿ ದರದಲ್ಲಿ ಅನೇಕ ಸೌಲಭ್ಯ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಾಲು ಉತ್ಪಾದನೆ, ಗುಣಮಟ್ಟ ಹಾಲು ಪೂರೈಸಲು ಹೆಚ್ಚಿನ ಆದ್ಯತೆ ನೀಡಿ ಹೈನುಗಾರಿಕೆ ಜೀವಂತವಾಗಿ ಉಳಿಸಬೇಕೆಂದು ತಿಳಿಸಿದರು. ರಾಸುಗಳಿಗೆ ವರ್ಷದಲ್ಲಿ 2 ಬಾರಿ ವಿಮಾ ಸೌಲಭ್ಯ, ಕಾಲುಬಾಯಿ ಜ್ವರ ಲಸಿಕೆ ಮಾಡಿಸುವುದು, ಬರಡು ರಾಸುಗಳ ಶಿಬಿರ ಏರ್ಪಡಿಸುವುದು, ಅರಿವು ಕಾರ್ಯಕ್ರಮಗಳನ್ನು ಮಾಡುವುದರಿಂದ ರಾಸುಗಳ ಸಾಕಾಣಿಕೆಗೆ ಅನುಕೂಲವಾಗುತ್ತದೆಂದು ತಿಳಿಸಿದರು.
ಒಕ್ಕೂಟದ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ ಮಾತನಾಡಿ, ಸರ್ಕಾರದಿಂದ 5 ರೂ. ಪ್ರೋತ್ಸಾಹ ಧನ ಬರಬೇಕಾದರೆ ಹಾಲಿನ ಗುಣಮಟ್ಟ 3.5 ಪ್ಯಾಟ್, 8.5 ಎಸ್‌ಎನ್‌ಎಫ್ ಇರಬೇಕೆಂದು ತಿಳಿಸಿ, ರಾಸುಗಳಿಗೆ ಪಶು ಆಹಾರ, ಖನಿಜ ಮಿಶ್ರಣ ನೀಡಬೇ ಕೆಂದು ತಿಳಿಸಿದರು. ಸಮಾರಂಭದಲ್ಲಿ ಕೋಲಾರ ತಾಲೂಕಿನ ಉಪವ್ಯಸ್ಥಾಪಕ ಡಾ.ಮಹೇಶ್, ಬಿಎಂಸಿ ಸಹಾಯಕ ವ್ಯವಸ್ಥಾಪಕ ಮೊಹನ್‌ಬಾಬು, ಸಂಘದ ಅಧ್ಯಕ್ಷ ಸುರೇಶ್, ತಾಂತ್ರಿಕರಾದ ತಿಪ್ಪಾರೆಡ್ಡಿ, ವಿಸ್ತರಣಾಧಿಕಾರಿಗಳು, ಗ್ರಾಪಂ, ಕಾರ್ಯಕಾರಿ ಮಂಡಳಿ ಸದಸ್ಯರು, ಸಂಘದ ಕಾರ್ಯದರ್ಶಿ ದೇವರಾಜ್, ಹಾಲು ಉತ್ಪಾದಕರು, ಗ್ರಾಮಸ್ಥರು ಉಪಸ್ಥಿತರಿದ್ದರು