Advertisement

ಶಾರೂಕ್‌ ಅಕ್ರಮ ಕ್ಯಾಂಟೀನ್‌ ಧ್ವಂಸ

12:21 PM Oct 07, 2017 | Team Udayavani |

ಮುಂಬಯಿ:ನಟ ಶಾರೂಕ್‌ ಖಾನ್‌ ತನ್ನ ಸಿನೇಮಾ ನಿರ್ಮಾಣ ಸಂಸ್ಥೆಯಾಗಿರುವ ರೆಡ್‌ ಚಿಲ್ಲೀಸ್‌ನ ಕಚೇರಿಯ ಪಕ್ಕದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕ್ಯಾಂಟೀನ್‌ ಅನ್ನು ಬಎಂಸಿ ನೆಲಸಮಗೊಳಿಸಿದೆ. ಮಲಾಡ್‌ ಪಶ್ಚಿಮದಲ್ಲಿ ರೆಡ್‌ ಚಿಲ್ಲೀಸ್‌ ಕಚೇರಿಯಿದ್ದು, ಇದಕ್ಕೆ ಒತ್ತಿಕೊಂಡಿರುವ ಖಾಲಿ ಟೆರೇಸ್‌ನ್ನು  ಶಾರೂಕ್‌  ಕ್ಯಾಂಟೀನ್‌ ಆಗಿ ಪರಿವರ್ತಿಸಿದ್ದರು. 

Advertisement

ಮಲಾಡ್‌ ಪಶ್ಚಿಮದ ಸುಂದರ್‌ ನಗರದಲ್ಲಿರುವ 16 ಮಹಡಿಯ ಡಿಎಲ್‌ಎಚ್‌ ಪಾರ್ಕ್‌ ಬಿಲ್ಡಿಂಗ್‌ನ ನಾಲ್ಕನೇ ಮಹಡಿಯನ್ನು ಇಡಿಯಾಗಿ ಶಾರೂಕ್‌ ಖರೀದಿಸಿ ಅದನ್ನು ರೆಡ್‌ ಚಿಲ್ಲೀಸ್‌ನ ನಿರ್ಮಾಣ ಪೂರ್ವ ಕೆಲಸಗಳಿಗಾಗಿ ಬಳಸುತ್ತಿದ್ದರು. ಶಾರೂಕ್‌ ಮತ್ತು ಅವರ ಪತ್ನಿ ಗೌರಿ ಖಾನ್‌ ರೆಡ್‌ ಚಿಲ್ಲೀಸ್‌ನ ಮಾಲಕರಾಗಿದ್ದಾರೆ. ನಾಲ್ಕನೇ ಮಹಡಿಗೆ ಒತ್ತಿಕೊಂಡಂತೆ ಇರುವ ಸುಮಾರು 2000 ಚದರ ಅಡಿ ಟೆರೇಸನ್ನು ರೆಡ್‌ ಚಿಲ್ಲೀಸ್‌ ಸಿಬಂದಿಗಳಿಗೆ ಮತ್ತು ಸಂದರ್ಶಕರಿಗೆ ತಿಂಡಿ ಊಟ ಪೂರೈಸುವ ಕ್ಯಾಂಟೀನ್‌ ಆಗಿ ಪರಿವರ್ತಿಸಲಾಗಿತ್ತು. 

ರೆಡ್‌ ಚಿಲ್ಲೀಸ್‌ನಲ್ಲಿ ಸುಮಾರು 316 ಸಿಬಂದಿಗಳಿದ್ದಾರೆ ಹಾಗೂ ನಿತ್ಯ ಅನೇಕ ಸಂದರ್ಶಕರು ಇಲ್ಲಿಗೆ ಬರುತ್ತಿರುತ್ತಾರೆ. ಆದರೆ ಈ ಕ್ಯಾಂಟೀನ್‌ ಬೆಂಕಿಯ ಬಲೆಯಂತಿದೆ. ಯಾವ ಕ್ಷಣದಲ್ಲಾದರೂ ಅಪಾಯಕ್ಕೆ ಆಹ್ವಾನವೀಯಬಹುದು ಎಂದು ಬಿಎಂಸಿ ಎಚ್ಚರಿಸಿತ್ತು. ನೆಲಸಮ ಕಾರ್ಯಾಚರಣೆಗೆ ಹೈಕೋರ್ಟಿನಿಂದ ತಡೆ ತರಲು ಶಾರೂಕ್‌ ಪ್ರಯತ್ನಿಸಿದ್ದರು. ಆದರೆ ನ್ಯಾಯಾಲಯ ಅವರ ಅರ್ಜಿಯನ್ನು ತಿರಸ್ಕರಿಸಿದೆ. 

ರೆಡ್‌ ಚಿಲ್ಲೀಸ್‌ ಬಾಡಿಗೆ ಆಧಾರದಲ್ಲಿ ನಾಲ್ಕನೇ ಮಹಡಿಯನ್ನು ತೆಗೆದುಕೊಂಡಿದೆಯೇ ಹೊರತು ಮಾಲಕರಲ್ಲ. ಖಾಲಿ ಟೆರೇಸಿನಲ್ಲಿ ಸಿಬಂದಿಗಳು ಮನೆಯಿಂದ ತಂದು ಬುತ್ತಿಯನ್ನು ಬಿಚ್ಚಿ ಊಟ ಮಾಡುತ್ತಿದ್ದರು. ಆದರೆ ನಗರಪಾಲಿಕೆ ಇದನ್ನೇ ಕ್ಯಾಂಟೀನ್‌ ಎಂದು ತಪ್ಪು ಭಾವಿಸಿ ನೆಲಸಮಗೊಳಿಸಿದೆ ಎಂದು ರೆಡ್‌ ಚಿಲ್ಲೀಸ್‌ ವಕ್ತಾರ ಹೇಳಿದ್ದಾರೆ. 

ಟೆರೇಸ್‌ ಮುಕ್ತವಾಗಿರಬೇಕಿತ್ತು. ಆದರೆ ರೆಡ್‌ ಚಿಲ್ಲೀಸ್‌ ಟೆರೇಸ್‌ಗೆ ಮಾಡು ಕಟ್ಟಿ ಆ ಜಾಗವನ್ನು ಬಳಕೆ ಮಾಡುತ್ತಿತ್ತು. ಇದು ಎಫ್ಎಸ್‌ಸಿ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿರುವುದರಿಂದ ನೆಲಸಮಗೊಳಿಸಿದ್ದೇವೆ ಎಂದು ವಾಡ್‌ ಅಧಿಕಾರಿ ಚಂದಾ ಜಾಧವ್‌ ಹೇಳಿದ್ದಾರೆ. 

Advertisement

ಬಿಎಸಿ ಸಿನೇಮಾ ತಾರೆಯರ ಅಕ್ರಮ ನಿರ್ಮಾಣಗಳನ್ನು ಕೆಡವಿ ಹಾಕುತ್ತಿರುವುದು ಇದೇ ಮೊದಲಲ್ಲ. ಕೆಲ ಸಮಯದ ಹಿಂದೆ ನಟಿ ರಾಣಿ ಮುಖರ್ಜಿ ಮತ್ತು ನಟ ಸೋನು ಸೂದ್‌ಗೆ ಷಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲು ನೋಟಿಸ್‌ ಜಾರಿಯಾಗಿತ್ತು. ರಾಣಿ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದಾರೆ ಹಾಗೂ ಸೂದ್‌ ತಡೆಯಾಜ್ಞೆ ತಂದಿದ್ದಾರೆ. 

ಇದೇ ವೇಳೆ ಬಿಎಂಸಿ ಸೆಲೆಬ್ರಿಟಿಗಳ ಅಕ್ರಮ ನಿರ್ಮಾಣಗಳನ್ನು ಮಾತ್ರ ಕೆಡವಿ ಹಾಕುವುದರ ಹಿಂದೆ ಪ್ರಚಾರ ಪಡೆದುಕೊಳ್ಳುವ ಉದ್ದೇಶ ಇದೆ ಎಂಬ ಆರೋಪವೂ ಇದೆ. ನಗರಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ತೋರಿಸಿಕೊಳ್ಳಲು ಬಿಎಂಸಿ ಸಿಬಂದಿಗಳ ಸೆಲೆಬ್ರಿಟಿಗಳ ಅಕ್ರಮ ನಿರ್ಮಾಣಗಳನ್ನು ಹುಡುಕಿ ತೆಗೆದು ಧ್ವಂಸ ಮಾಡುತ್ತಿದ್ದಾರೆ. ಆದರೆ ನಗರಾದ್ಯಂತ ಈ ಮಾದರಿಯ ಅಕ್ರಮ ನಿರ್ಮಾಣಗಳು ಅನೇಕ ಇವೆ. ಆದರೆ ಅವುಗಳ ತಂಟೆಗೆ ಹೋಗುವುದಿಲ್ಲ ಎಂದು ಕಾರ್ಯಕರ್ತರೊಬ್ಬರು ದೂರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next