ಬೆಂಗಳೂರು : ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದಿಂದ ಕಣಕ್ಕಿಳಿಯಲು ಸಜ್ಜಾಗಿದ್ದ ಫೈಟರ್ ರವಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಶನಿವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಿ.ಎಂ.ಮಲ್ಲಿಕಾರ್ಜುನ್ (ಅಲಿಯಾಸ್ ಫೈಟರ್ ರವಿ) ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಗೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಸೇರ್ಪಡೆಯಾದಾಗಿನಿಂದ ರೌಡಿ ಶೀಟರ್ ಹಿನ್ನೆಲೆಯ ಕುರಿತು ಫೈಟರ್ ರವಿ ಹೆಸರು ವ್ಯಾಪಕ ವಾಗಿ ಚರ್ಚೆಗೊಳಗಾಗಿತ್ತು, ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಭೇಟಿ ನೀಡಿದ್ದ ವೇಳೆ ಅವರನ್ನು ಸ್ವಾಗತಿಸಿದ ಫೋಟೋ ಕುರಿತಾಗಿಯೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಒಂದೆರಡು ವರ್ಷಗಳಿಂದ ಜನಪರ ಕೆಲಸ ಮಾಡುವ ಮೂಲಕ ಜನರ ಅನುಕಂಪ ಗಳಿಸಿ ಇತ್ತೀಚಿಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಅವರಿಗೆ ಬಿಜೆಪಿ ಟಿಕೆಟ್ ನೀಡುವ ಭರವಸೆಯನ್ನೂ ನೀಡಿತ್ತು. ಸಚಿವರಾದ ಅಶ್ವತ್ಥ ನಾರಾಯಣ, ಗೋಪಾಲಯ್ಯ, ಡಾ. ನಾರಾಯಣಗೌಡ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದರು. ನಾಗಮಂಗಲದಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಫೈಟರ್ ರವಿ ಅವರ ಗೆಲುವು ನಿಶ್ಚಿತ ಎಂದೂ ಹೇಳಿದ್ದರು. ಆದರೆ ಬದಲಾದ ಸಮಯದಲ್ಲಿ ಮಾಜಿ ಶಾಸಕ, ಸಂಸದ ಶಿವರಾಮೇ ಗೌಡ ಅವರ ಪತ್ನಿ ಸುಧಾ ಅವರಿಗೆ ಬಿಜೆಪಿ ನಾಗಮಂಗಲ ಕ್ಷೇತ್ರದ ಟಿಕೆಟ್ ನೀಡಿದೆ.