Advertisement

ಕೋಟಿ ಉದ್ಯೋಗ ಕಲ್ಪಿಸಲು ನೀಲನಕ್ಷೆ: ಅನಂತಕುಮಾರ್‌ ಹೆಗಡೆ

11:34 AM Oct 08, 2017 | Team Udayavani |

ಬೆಂಗಳೂರು: ಯುವಜನರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಕೌಶಲ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ಮೂಲಕ ಪ್ರತಿ ವರ್ಷ ಕನಿಷ್ಠ ಒಂದು ಕೋಟಿ ಉದ್ಯೋಗಾವಕಾಶ ಒದಗಿಸುವ ಗುರಿ ಮುಟ್ಟಲು ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ಹೇಳಿದ್ದಾರೆ.

Advertisement

ನಗರದ ಪದ್ಮನಾಭನಗರ ಕಾರ್ಮೆಲ್‌ ಸ್ಕೂಲ್‌ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉದ್ಯೋಗ ಮತ್ತು ಕೌಶಲ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಉದ್ಯೋಗಾವಕಾಶ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಆದರೆ, ಮುದ್ರಾ ಬ್ಯಾಂಕ್‌ ಮೂಲಕ 5 ಕೋಟಿ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಂಡಿದ್ದರೂ ಕೇಂದ್ರದ ಮೇಲೆ ವೃಥಾರೋಪ ಮಾಡಲಾಗುತ್ತಿದೆ ಎಂದು ತಿಳಿಸಿದರು. 

ಉದ್ಯೋಗಕ್ಕೆ ಬೇಕಾದ ಕೌಶಲ ಇಲ್ಲದ ಕಾರಣ ಶಿಕ್ಷಣಕ್ಕೆ ತಕ್ಕ ಉದ್ಯೋಗ ಸಿಗುತ್ತಿಲ್ಲ. ಇದಕ್ಕಾಗಿ ಕೌಶಲ ಯೋಜನೆ ಜಾರಿಗೆ ತಂದಿದ್ದು, ಈ ಮೂಲಕ ಯುವಜನರ  ಆಸಕ್ತಿಗೆ ತಕ್ಕಂತೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ. ಪ್ರತಿ ವರ್ಷ ಒಂದು ಕೋಟಿ ಮಂದಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಒದಗಿಸಲು ಸಿದ್ಧವಾಗುತ್ತಿರುವ ಕ್ರಿಯಾಯೋಜನೆ ಮುಂದಿನ 18 ತಿಂಗಳಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದರು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್‌, ಸಂಸದ ಪಿ.ಸಿ.ಮೋಹನ್‌, ವಿಧಾನಸಭೆ ಪ್ರತಿಪಕ್ಷ ಉಪನಾಯಕ ಆರ್‌.ಅಶೋಕ್‌ ಉಪಸ್ಥಿತರಿದ್ದರು.

1600 ಮಂದಿಗೆ ಸ್ಥಳದಲ್ಲೇ ಉದ್ಯೋಗ 
ಉದ್ಯೋಗ ಮೇಳಕ್ಕೆ ಆನ್‌ಲೈನ್‌ ಮೂಲಕ 10,500 ಮಂದಿ ನೋಂದಣಿ ಮಾಡಿಕೊಂಡಿದ್ದು, 7400 ಮಂದಿ ಮೇಳದಲ್ಲಿ ಪಾಲ್ಗೊಂಡಿದ್ದರು. 1600 ಮಂದಿಗೆ ಸ್ಥಳದಲ್ಲೇ ಉದ್ಯೋಗ ಸಿಕ್ಕಿದೆ. ಉಳಿದವರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ಭರವಸೆ ನೀಡಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ವಿನೋದ್‌ ಕೃಷ್ಣಮೂರ್ತಿ ಉದಯವಾಣಿಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next