Advertisement

ನಾಮ ಗೋರೆ- ನೀಲಿರೆಕ್ಕೆ ಬಾತು 

02:36 PM May 06, 2017 | Team Udayavani |

 ನಲವತ್ತೂಂದು ಸೆಂ.ಮೀ ದೊಡ್ಡದಿರುವ ಸುಂದರ ಬಾತುಕೋಳಿ ಇದು.  ಅನಾಟಿಡೇ ಎಂಬ ಕುಟುಂಬಕ್ಕೆ ಸೇರಿದ್ದಾಗಿದೆ. ಇದನ್ನು ಗಾರ್ಗನೀಟೇಲ್‌ ಎಂದು ಸಹ ಕರೆಯುತ್ತಾರೆ.BLUE WINGED TEAL – GARGGANY (AnasQuerquedula ) M Duck ರೆಕ್ಕೆ  ನೀಲಿ ಬಣ್ಣದಿಂದ ಕೂಡಿದೆ.  ಹಾಗಾಗಿ ಇದನ್ನು ನೀಲಿ ರೆಕ್ಕೆ ಬಾತು ಎಂದೂ ಕರೆಯುವುದಿದೆ.  ಚಳಿಗಾಲ ಈ ಸಮಯದಲ್ಲಿ ಕರ್ನಾಟಕದ ದಕ್ಷಿಣ, ಉತ್ತರ ಭಾಗದಲ್ಲಿ ಈ ಹಕ್ಕಿಯನ್ನು ನೋಡಬಹುದು. ನೀರಿನ ಹೊಂಡ ಹಾಗೂ ಬದುಗಳನ್ನು ಮಾಡಿ ನೀರನ್ನು ತುಂಬಿಸಿರುವ ಹೊಂಡಗಳಲ್ಲಿ ಇದು ಹಗಲು ಹೊತ್ತು ವಿಶ್ರಾಂತಿ ಪಡೆಯುತ್ತಿರುವುದು ಸಾಮಾನ್ಯ. ಹಿನ್ನೀರಿನ ಪ್ರದೇಶ, ಜವಗುತೀರ, ನದಿ ಹಿನ್ನೀರು, ಗಜನೀ ಪ್ರದೇಶಗಳಲ್ಲೂ ಇದು ಕಾಣಸಿಗುತ್ತದೆ. 

Advertisement

ಕಿತ್ತಳೆ ಮಿಶ್ರಿತ ಕೆಂಪು ಬಣ್ಣದತಲೆ, ಕಣ್ಣಿನ ಮೇಲೆ ಇರುವದೊಡ್ಡ ಬಿಳಿ ಪಟ್ಟೆ ಇದನ್ನು ಗುರುತಿಸಲು ಅನುಕೂಲವಾಗಿದೆ. ಪಕ್ಷಿಯ ಚುಂಚು ಕಂದು ಬಣ್ಣದಿಂದ ಕೂಡಿರುತ್ತದೆ.  ರೆಕ್ಕೆಯ ಮೇಲಿನ ಗರಿಗಳಲ್ಲಿ ಕೆಲವು ಬಿಳಿ ಗರಿಗಳು ಇರುತ್ತದೆ. ಇದರ ರೆಕ್ಕೆ ಅಂಚಿನಲ್ಲಿ ಮತ್ತು ಭುಜದ ಮೇಲಿರುವ ನೀಲಿ ಬಣ್ಣ ಇದು ಹಾರುವಾಗ ಎದ್ದು ಕಾಣುತ್ತದೆ. ಹುಲ್ಲು ಬೆಳೆಯುವ ಜಾಗದಲ್ಲಿ ಹಸಿರು ಹುಲ್ಲನ್ನು ಇದು ತಿನ್ನುತ್ತಿರುತ್ತದೆ. ರೈತರು ತಮ್ಮ ಗದ್ದೆ ಕೆಲಸ ಮುಗಿಸಿ ಹೊರಟಾಗ ಗದ್ದೆಗಳಿಗೆ ಬಂದು ಅಲ್ಲಿ ಉದುರಿರುವ ಕಾಳುಗಳನ್ನು ಅರಸಿ ತಿನ್ನುತ್ತದೆ. ಹೊಸದಾಗಿ ಬಿತ್ತಿದ ಗದ್ದೆಗಳಲ್ಲೂ ಇಳಿದು ಅಂತಹ ಕಳುಗಳನ್ನು ತಿಂದು ರೈತರ ಕೆಂಗಣ್ಣಿಗೂ ಗುರಿಯಾಗುವುದಿದೆ. ಆದರೂ ರೈತರಿಗೆ ಈ ಪುಟ್ಟ ಬಾತು ಮಾಡುವ ಉಪಕಾರ ನೆನೆದರೆ ಅದು ತಿನ್ನುವ ಕಾಳಿ ಕಡಿಮೆ ಎಂದೇ ಹೇಳಬಹುದು. ರೈತರ ಗದ್ದೆಗಳಿಗೆ ಬರುವ ಅದೆಷ್ಟೋ ಕ್ರಿಮಿ, ಹುಳ ಹುಪ್ಪಡಿಗಳನ್ನು ತಿಂದು ಬೆಳೆ ಉಳಿಸುವಲ್ಲಿ ಇದರ ಪಾತ್ರ ತುಂಬಾದೊಡ್ಡದು. ಕೆಲವರು ಇದನ್ನು ಬೇಟೆ ಆಡುವುದರಿಂದ ಇದರ ರಕ್ಷಣೆ ಮಾಡುವುದು ತುಂಬಾ ಕಷ್ಟ ಸಾಧ್ಯ. ಆದರೂ ಇಂತಹ ಬಾತುಗಳ ಉಳಿವಿಗಾಗಿ ಬೇಟೆ ಮಾಡದೇ ಕಾಪಾಡಬೇಕಾಗಿದೆ. ಇಲ್ಲವಾದರೆ ಕೊಂಡಿಯಲ್ಲಿ ಇವು ಅಳಿಯುವ ಭಯ ಇದ್ದೇ ಇದೆ. ಇದು ಯುರೋಪಿನಿಂದ ಇಲ್ಲಿಗೆ ವಲಸೆ ಬರುವ ಹಕ್ಕಿ. ಇದು ಪ್ರಧಾನವಾಗಿ ಸಸ್ಯಾಹಾರಿ. 

ಸಸ್ಯ, ಸಸ್ಯದದೇಟು, ಚಿಗುರೆಲೆ, ಕಮಲ, ಕವಳೆ ಮೊದಲಾದ ಜಲಸಸ್ಯಗಳ ಚಿಗುರು ಇದಕ್ಕೆ ತುಂಬಾ ಪ್ರಿಯ. ಭಾರತ, ಪಾಕಿಸ್ಥಾನ, ಸಿಲೋನ್‌, ಬಾಂಗ್ಲಾದೇಶ, ಬರ್ಮಾದಲ್ಲೂ ಕಾಣಬಹುದು. ಪೂರ್ವಯುರೋಪ್‌-ಸೈಬೀರಿಯಾದಲ್ಲಿ ಗೂಡು ಮಾಡಿ ಮರಿಮಾಡುತ್ತವೆ. ಇವು ವಲಸೆ ಬರಲು ಮರಿ ಎಷ್ಟು ದೊಡ್ಡದಾಗಬೇಕು? ಮರಿ ಮತ್ತು ತಾಯಿ ಒಟ್ಟಾಗಿ ಎಲ್ಲೂ ನಿಲ್ಲದೇ ಹಾರಿ ಭಾರತಕ್ಕೆ ಬರುವವೋ? ಹೀಗೆ ಬರಲು ಎಷ್ಟು ಸಮಯ ಬೇಕಾಗುವುದು. ವಲಸೆ ಬರುವಾಗ ಸಂಭವಿಸುವ ಅವಗಡಗಳಿಂದ ಹೇಗೆ ಪಾರಾಗುತ್ತವೆ? ಈ ಬಗ್ಗೆ ಅಧ್ಯಯನ ನಡೆಯಬೇಕಿದೆ. ಉತ್ತರಕರ್ನಾಟಕದ ಬಂಕಾಪುರ, ಅಕ್ಕಿಆಲೂರು, ಹಾವಣಗಿ, ಸವಣೂರು, ದುಂಡಸಿ, ತಡಸ, ಕಲಘಟಗಿ, ಮಾಸೂರು ಕೆರೆಗಳ ಸುತ್ತ ಮುತ್ತ ಇವು ಕಾಣುತ್ತವೆ. ಇವು ಸಾವಿರಾರು ಮೈಲು ದೂರ ಹಾರಿ ಇಲ್ಲಿಗೆ ಚಳಿಗಾಲ ಕಳೆಯಲು ಬರುತ್ತವೆ. ರಾಜಸ್ತಾನದ ಭರತ್‌ಪುರ, ಮಹಾರಾಷ್ಟ್ರದ ಸಾಂಗ್ಲಿ, ಕೇರಳದ ವೈನಾಡು ಸರೋವರಗಳಲ್ಲೂ ಇದನ್ನುಗುರುತಿಸಲಾಗಿದೆ. ಇವು ಸುಮಾರು 5000 ದಿಂದ 6,500 ಕಿಲೋ. ಪ್ರಯಾಣ ಮಾಡುತ್ತವೆ. ಇವು ಹೆಚ್ಚು ಮೌನವಾಗಿಯೇ ಇರುತ್ತವೆ. 

ಯುರೋಪಿನಲ್ಲಿ ಇದು ಸಂತೋನೋತ್ಪತ್ತಿ ಮಾಡುತ್ತವೆ. ಮೇ ನಿಂದ ಜೂನ್‌ ಅವಧಿಯಲ್ಲಿ ಇದು ಮರಿ ಮಾಡುತ್ತವೆ. ನೆಲದಲ್ಲಿರುವ ತಗ್ಗಿನಲ್ಲಿ ಸುಮಾರ 7 ರಿಂದ 16 ಬಿಳಿ ತತ್ತಿಗಳನ್ನು ಇಡುವುದು. 21 ರಿಂದ 23 ದಿನ ಕಾವು ಕೊಡುತ್ತವೆ. ಗಂಡು, ಹೆಣ್ಣು ಎರಡೂ ಸೇರಿ ಪೋಷಣೆ ಮಾಡುತ್ತವೆ.  ಇತರೆ ವಲಸೆ ಹಕ್ಕಿಗಳಾದ ಕೆಂಪುತಲೆ ಬಾತು, ಪಟ್ಟೆತಲೆ ಬಾತು, ಬುಕುಟ ಕೊಕ್ಕಿನ ಬಾತು ಇವು ಸಹ ಭಾರತಕ್ಕೆ ವಲಸೆ ಬರುತ್ತವೆ.  ಇವೆಲ್ಲಾ ಒಂದೇ ಮಾರ್ಗ ಅನುಸರಿಸಿ ಬರುತ್ತವೋ  ಅಥವಾ ಬೇರೆ-ಬೇರೆ ಮಾರ್ಗವಾಗಿ ಬರುತ್ತವೋ?  ಎಂಬುದು ಅಧ್ಯಯನದ ವಿಷಯ.

ಪಿ.ವಿ.ಭಟ್‌ ಮೂರೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next