Advertisement

ರಾಜಸ್ಥಾನ: ಬ್ಲೂವೇಲ್‌ಗೆ ಬಲಿಯಾಗಲಿದ್ದ ಹುಡುಗಿಯ ರಕ್ಷಣೆ

03:42 PM Sep 05, 2017 | Team Udayavani |

ಹೊಸದಿಲ್ಲಿ : ರಾಜಸ್ಥಾನದ ಜೋಧ್‌ಪುರದಲ್ಲಿ  ಬ್ಲೂವೇಲ್‌ ಚ್ಯಾಲೆಂಜ್‌ ಗೆ ತನ್ನ ಪ್ರಾಣವನ್ನು ಅರ್ಪಿಸಲಿದ್ದ 17 ವರ್ಷ ಪ್ರಾಯದ ಹುಡುಗಿಯನ್ನು ಪೊಲೀಸರು ಹಾಗೂ ವಾಹನ ಚಾಲಕರು ಕೊನೇ ಕ್ಷಣದಲ್ಲಿ ರಕ್ಷಿಸಿದ್ದಾರೆ. 

Advertisement

ಹುಡುಗಿಯ ಕೈಯಲ್ಲಿ ಬ್ಲೂವೇಲ್‌ ಚಿತ್ರ ಕೊರೆದಿರುವುದು ಕಂಡು ಬಂದಿದೆ. ಕಡಿದಾದ ಎತ್ತರದ ಪ್ರದೇಶದಿಂದ ಕೆಳಗೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಆಕೆ ಸಜ್ಜಾಗಿದ್ದಳು.

ನಿನ್ನೆ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಬ್ಲೂ ವೇಲ್‌ ಗೆ ತನ್ನ ಜೀವ ಅರ್ಪಿಸಲು ಸಜ್ಜಾಗಿದ್ದ ಹುಡುಗಿಯ ತಂದೆ ಓರ್ವ ಬಿಎಸ್‌ಎಫ್ ಯೋಧನೆಂದು ಗೊತ್ತಾಗಿದೆ. ಈಕೆ ಸೋಮವಾರ ರಾತ್ರಿ ತಾನು ಮಾರ್ಕೇಟಿಗೆ ಹೋಗಿ ಬರುವುದಾಗಿ ಹೆತ್ತವರಿಗೆ ಹೇಳಿ ಮನೆಯಿಂದ ಹೊರ ಹೋಗಿದ್ದಳು. 

ಬಹಳ ಹೊತ್ತಾದರೂ ಆಕೆ ಮರಳದಿದ್ದಾಗ ಗಾಬರಿಗೊಂಡ ಹೆತ್ತವರು ಆಕೆಯ ಮೊಬೈಲ್‌ಗೆ ಫೋನ್‌ ಮಾಡಿದರು. ಆಕೆಯ ಫೋನ್‌ ಕರೆಯನ್ನು ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಸ್ವೀಕರಿಸಿದಾಗ ಹೆತ್ತವರು ಗಾಬರಿಗೊಂಡು ಆಕೆಗಾಗಿ ಹುಡುಕಾಡತೊಡಗಿದರು. 

ಈ ನಡುವೆ ಓಂ ಪ್ರಕಾಶ್‌ ಎಂಬ ವ್ಯಕ್ತಿಯೋರ್ವ ಹುಡುಗಿಯನ್ನು ಗುರುತಿಸಿದ. ಆಕೆ ಅಲ್ಲೇ ಸಮೀಪ ತನ್ನ ಸ್ಕೂಟರ್‌ ನಿಲ್ಲಿಸಿ ಅಳುತ್ತಾ ಕುಳಿತಿದ್ದಳು. ಆತ್ಮಹತ್ಯೆಗೆ ಸಜ್ಜಾಗಿದ್ದ ಆಕೆಯನ್ನು ಆತ ತಡೆದು ಪ್ರಶ್ನಿಸಿದಾಗ “ಬ್ಲೂವೇಲ್‌ ಆಟವನ್ನು ನಾನು ಮುಗಿಸದೇ ಹೋದರೆ ನನ್ನ ತಾಯಿ ಸಾಯುತ್ತಾಳೆ” ಎಂದಾಕೆ ಹೇಳಿದರು. 

Advertisement

ಘಟನೆಯ ಬಗ್ಗೆ ಮಾತನಾಡಿದ ಪೊಲೀಸ್‌ ಅಧಿಕಾರಿ ಲೇಖರಾಜ್‌ ಸಿಹಾಗ್‌ ಅವರು “ರಾತ್ರಿ 11 ಗಂಟೆ ನಮಗೆ ಹುಡುಗಿಯೊಬ್ಬಳು ಕಲ್ಯಾಣ್‌ ಲೇಕ್‌ ಬಳಿ ಸ್ಕೂಟರ್‌ ಚಲಾಯಿಸಿಕೊಂಡು ಹೋಗುತ್ತಿದ್ದಾಳೆ ಎಂಬ ಮಾಹಿತಿ ದೊರಕಿತು. ಆಕೆ ಇನ್ನೇನು ಕಲ್ಯಾಣ್‌ ಲೇಕ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂಬ ಕ್ಷಣದಲ್ಲಿ ನಾವು ಆಕೆಯನ್ನು ಹಿಂದಕ್ಕೆಳೆದೆವು; ಅದೃಷ್ಟವಶಾತ್‌ ಆಕೆ ಬದುಕಿದಳು’ ಎಂದು ಹೇಳಿದರು. 

ಪುದುಚೇರಿಯಲ್ಲಿ 2 ದಿನಗಳ ಹಿಂದಷ್ಟೇ 21ರ ಹರೆಯದ ಯುವತಿಯೋರ್ವಳು ಬ್ಲೂವೇಲ್‌ ಆಟದಲ್ಲಿ ಸಾಯುವುದನ್ನು ಕೊನೇ ಕ್ಷಣದಲ್ಲಿ ಪಾರು ಮಾಡಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next