Advertisement
“ನೀಲಿಕ್ರಾಂತಿ’ ಯೋಜನೆಯಡಿ ಕರಾವಳಿ ಭಾಗದ ಮೀನುಗಾರರಿಗೆ ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಆರ್ಥಿಕ ಸೌಲಭ್ಯ ನೀಡುವ “ಮೀನುಗಾರರ ಉಳಿತಾಯ ಹಾಗೂ ಪರಿಹಾರ’ ಯೋಜನೆ ಜಾರಿಯಲ್ಲಿದೆ. 2022-23ರಲ್ಲಿ ರಾಜ್ಯದ (ದ.ಕ., ಉಡುಪಿ ಹಾಗೂ ಉ.ಕ.)ಒಟ್ಟು 22,158 ಫಲಾನುಭವಿಗಳ ಪೈಕಿ 12,053 ಮಂದಿಗೆ ಮಾತ್ರ ಪರಿಹಾರ ಮೊತ್ತ ದೊರಕಿದೆ. 10,105 ಮಂದಿಗೆ ಪರಿಹಾರ ಸಿಕ್ಕಿಲ್ಲ. 2021-22ರಲ್ಲಿ 22,566 ಫಲಾನುಭವಿಗಳ ಪೈಕಿ 3,759 ಹಾಗೂ 2020-21ರಲ್ಲಿ 18,745 ಮಂದಿಯ ಪೈಕಿ 1,766 ಮಂದಿಗೆ ಪರಿಹಾರ ಸಿಕ್ಕಿಲ್ಲ.
ಕೆಲವು ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಪಾವತಿಸಿದ್ದರೂ ಸಹ ಅವರು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡದಿರುವುದರಿಂದ ಅಂತಹ ಫಲಾನುಭವಿಗಳಿಗೆ ಆರ್ಥಿಕ ಪರಿಹಾರ ಸಿಕ್ಕಿಲ್ಲ ಎಂಬುದು ಅಧಿಕಾರಿಗಳ ವಾದ. ಜತೆಗೆ, ಅನುದಾನ ನೀಡುವಿಕೆಯಲ್ಲಿ ಕೇಂದ್ರ-ರಾಜ್ಯದ ಪಾಲಿನ ಅನುದಾನ ಸರಿಯಾದ ಸಮಯಕ್ಕೆ ದೊರೆಯದೆ ಉಳಿತಾಯ ಕಟ್ಟಿದವರಿಗೆ ಪರಿಹಾರ ಪೂರ್ಣ ಸಿಕ್ಕಿಲ್ಲ.
Related Articles
Advertisement
ನೀಲಿಕ್ರಾಂತಿ ಸ್ಥಗಿತ; ಅತಂತ್ರ!2019-20ನೇ ಸಾಲಿಗೆ “ನೀಲಿಕ್ರಾಂತಿ’ ಯೋಜನೆ ಅಂತ್ಯವಾಗಿದ್ದು, 2020-21ನೇ ಸಾಲಿನಿಂದ “ಪಿಎಂಎಂಎಸ್‌ವೈ’ ಯೋಜನೆಯಡಿ ಮೀನುಗಾರರಿಗೆ ಆರ್ಥಿಕ ಪರಿಹಾರ ನೀಡಲಾಗುತ್ತಿದೆ. “ನೀಲಿ ಕ್ರಾಂತಿ’ ಇಲ್ಲದ ಕಾರಣದಿಂದ 2019-20ಕ್ಕೆ ಸಂಬಂಧಪಟ್ಟಂತೆ ಯಾವುದೇ ಅನುದಾನ ಬಿಡುಗಡೆ ಸಾಧ್ಯವಿಲ್ಲವೆಂದು ಈಗಾಗಲೇ ಕೇಂದ್ರದಿಂದ ಸೂಚನೆ ಬಂದಿದೆ. ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಫಲಾನುಭವಿಗಳಿಗೆ ಹಾಗೂ ಮೀನುಗಾರರ ಸಹಕಾರ ಸಂಘದವರಿಗೆ ಯೋಜನೆ ಅಂತ್ಯವಾಗಿರುವ ಬಗ್ಗೆ ಮಾಹಿತಿ ನೀಡುವಂತೆಯೂ ಇಲಾಖೆಗೆ ಸೂಚನೆ ನೀಡಲಾಗಿದೆ. ಜತೆಗೆ “ನೀಲಿಕ್ರಾಂತಿ’ ಯೋಜನೆಯೇ ಅಂತ್ಯವಾಗಿರುವ ಕಾರಣದಿಂದ ಅನುದಾನ ಬಿಡುಗಡೆ ಮಾಡುವಂತೆ ಯಾವುದೇ ಪತ್ರ ವ್ಯವಹಾರವನ್ನು ಕೇಂದ್ರದೊಂದಿಗೆ ಮಾಡದಂತೆ ಮೀನುಗಾರಿಕೆ ಇಲಾಖಾ ನಿರ್ದೇಶಕರು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕಾರಣದಿಂದ ಅಂದಿನ ಸಂದರ್ಭದ ಬಾಕಿ ಇದ್ದವರಿಗೆ ಪರಿಹಾರ ಸಿಗುವ ಸಾಧ್ಯತೆ ಕ್ಷೀಣಿಸಿದೆ. ಏನಿದು ಯೋಜನೆ?
ಉಳಿತಾಯ ಹಾಗೂ ಪರಿಹಾರ ಯೋಜನೆಯಡಿ ಕರಾವಳಿ ಮೀನುಗಾರರಿಂದ 1,500 ರೂ.ಗಳನ್ನು ಪಡೆದು ಈ ಮೊತ್ತಕ್ಕೆ ಕೇಂದ್ರ ಸರಕಾರ 1,500 ರೂ. ಹಾಗೂ ರಾಜ್ಯ ಸರಕಾರ 1,500 ರೂ. ಸೇರಿಸಿ ಒಟ್ಟು 4,500 ರೂ.ಗಳನ್ನು ಮೀನುಗಾರಿಕೆ ಇಲ್ಲದ 3 ತಿಂಗಳಲ್ಲಿ
ಪ್ರತೀ ತಿಂಗಳಿಗೆ 1,500 ರೂ.ಗಳಂತೆ ವಿಂಗಡಿಸಿ ಮೀನುಗಾರರಿಗೆ ನೀಡುವುದು ಈ ಯೋಜನೆಯ ಉದ್ದೇಶ. ಅಂದರೆ, ವರ್ಷಕ್ಕೆ ಮೀನುಗಾರರು ಕೇವಲ 1.500 ರೂ. ಪಾವತಿಸಿದರೆ 3 ಸಾವಿರ ರೂ. ಕೇಂದ್ರ-ರಾಜ್ಯ ಸರಕಾರ ನೀಡಲಿದೆ. ಈ ಮಧ್ಯೆ 1,500 ರೂ. ಇದ್ದ ಅನುದಾನವನ್ನು ಈ ಬಾರಿಯಿಂದ 3,000 ರೂ.ಗೆ ಏರಿಕೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ಬಾಕಿ ಪಾವತಿ ನಿರೀಕ್ಷೆ
ಉಳಿತಾಯ ಹಾಗೂ ಪರಿಹಾರ ಯೋಜನೆಯಡಿ ಕರಾವಳಿ ಮೀನು ಗಾರರಿಂದ 1,500 ರೂ.ಗಳನ್ನು ಮೀನುಗಾರಿಕೆ ಅವಧಿಯಲ್ಲಿ ಪಡೆದು ಈ ಮೊತ್ತಕ್ಕೆ ಕೇಂದ್ರ-ರಾಜ್ಯ ಸರಕಾರದ ಅನುದಾನ ಸೇರಿಸಿ ನೀಡುವ ಯೋಜನೆ ನಡೆಯುತ್ತಿದೆ. ಆದರೆ, ಕೆಲವರಿಗೆ ಆಧಾರ್ ಲಿಂಕ್ ಆಗದೆ ಹಣ ಬಂದಿಲ್ಲ. ಜತೆಗೆ ಹಿಂದಿನ ಬಾಕಿಯ ಕಾರಣದಿಂದ ಅನುದಾನ ಹಂಚಿಕೆಯಲ್ಲಿ ಕಡಿಮೆ ಆಗಿತ್ತು. ಈ ಕುರಿತ ವರದಿಯನ್ನು ಸರಕಾರ ಪಡೆದುಕೊಂಡಿದೆ. ಬಾಕಿ ಪಾವತಿ ನಡೆಯುವ ನಿರೀಕ್ಷೆಯಿದೆ. – ದಿಲೀಪ್ ಕುಮಾರ್, ಉಪ ನಿರ್ದೇಶಕರು, ಮೀನುಗಾರಿಕಾ ಇಲಾಖೆ
-ದಿನೇಶ್ ಇರಾ