Advertisement
ಬೆಳ್ತಂಗಡಿ: ಹಳ್ಳಿ ಅಭಿವೃದ್ಧಿ ವೇಗ ಪಡೆಯುತ್ತಿರುವ ಕಾಲಘಟ್ಟದಲ್ಲಿ ತಾಲೂಕಿನ ಕೇಂದ್ರ ಸ್ಥಾನವಾಗಿರುವ ಬೆಳ್ತಂಗಡಿ ಪ.ಪಂ. ಮಾತ್ರ ಗತಕಾಲದಿಂದ ಹೊರಬಂದಂತೆ ಕಾಣುತ್ತಿಲ್ಲ. ಇನ್ನೂ ನಗರದ ಒಳಚರಂಡಿ ವ್ಯವಸ್ಥೆ, ಪಾರ್ಕಿಂಗ್ ಸಮಸ್ಯೆ ಕಗ್ಗಂಟಾಗಿ ಪರಿಣಮಿಸಿದ್ದರಿಂದ ಇದೀಗ ನಗರ ಸೌಂದರ್ಯ ವೃದ್ಧಿಗಾಗಿ ಚಿಂತನೆ ನಡೆಸಿದೆ.
Related Articles
Advertisement
ಯುಜಿಡಿ ಕಾಮಗಾರಿಗೆ ಅಡ್ಡಿ :
ನಗರದಲ್ಲಿ ಒಳಚರಂಡಿ ವ್ಯವಸ್ಥೆ ಸಾಕಷ್ಟು ಹಳೆಯದಾಗಿದ್ದು, ಬದಲಾವಣೆ ಅನಿವಾರ್ಯವಾಗಿದೆ. ಮಂಗಳೂರು- ವಿಲ್ಲುಪುರಂ ತೆರಳುವ ರಾಷ್ಟ್ರೀಯ ಹೆದ್ದಾರಿ 2ನೇ ಹಂತದಲ್ಲಿ ಪೂಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಚತುಷ್ಪಥ ರಸ್ತೆ ಯೋಜನೆ ಅತ್ಯಂತ ಪ್ರಚಾರದಲ್ಲಿದೆ. ಒಂದೊಮ್ಮೆ ಕಾಮಗಾರಿ ಆರಂಭಿಸಿದೆ ನಗರದಲ್ಲಿ ಯುಜಿಡಿ ಯೋಜನೆ ಚಿಂತಿಸುವಂತಿಲ್ಲ. ಬೆಳ್ತಂಗಡಿ ಅಭಿವೃದ್ಧಿ ದೃಷ್ಟಿಯಿಂದಲೂ ಪೇಟೆಯಾಗಿ ಚತುಷ್ಪಥ ರಸ್ತೆ ಸಾಗುವುದು ಅನಿವಾರ್ಯವೇ ಆಗಿದೆ. ಹೀಗಾಗಿ ಯುಜಿಡಿ ಯೋಜನೆಗೆ ದಿನದೂಡುವಂತಾಗಿದೆ.
15ನೇ ಹಣಕಾಸು ಯೋಜನೆ ಬಳಕೆ :
ಮುಖ್ಯ ರಸ್ತೆಯಿಂದ ಮೂರು ಮಾರ್ಗವಾಗಿ ಪ.ಪಂ. ವರೆಗಿನ ತೆರೆದ ಚರಂಡಿ ಹೂಳೆತ್ತಿ, ಮುಚ್ಚುವ ಸಲುವಾಗಿ ಪ್ರಸಕ್ತ ಸಾಲಿನಲ್ಲಿ 15ನೇ ಹಣಕಾಸು ಯೋಜನೆಯಡಿ 2.30 ಲಕ್ಷ ರೂ. ಗುತ್ತಿಗೆ ನೀಡಲಾಗಿದೆ. ಉಳಿದಂತೆ ಪ.ಪಂ. 11 ವಾರ್ಡ್‌ಗಳ ಜಂಗಲ್ ಕಟ್ಟಿಂಗ್‌ಗಾಗಿ 2020-21ನೇ ಸಾಲಿನಲ್ಲಿ ಪ್ರತಿ ವಾರ್ಡ್ ಗೆ 20 ಸಾವಿರದಂತೆ 2.20 ಲಕ್ಷ ರೂ. ಇರಿಸಲಾಗಿದೆ. 2019-20ರಲ್ಲಿ ಕೇವಲ 10 ಸಾವಿರ ರೂ.ನಂತೆ 11 ವಾರ್ಡ್‌ಗೆ 1.10 ಲಕ್ಷ ರೂ. ಇರಿಸಲಾಗಿತ್ತು. 2018-19ರಲ್ಲಿ 11 ವಾರ್ಡ್‌ಗೆ 8.50 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತುವ ಯೋಜನೆ ನಡೆಸಿದರೂ ನಗರದ ಚರಂಡಿಗಳ ಸ್ಥಿತಿ ಬದಲಾಗಿಲ್ಲ. ಮುಂದಿನ ದಿನಗಳಲ್ಲಿ ಸ್ಮಾರ್ಟ್ ಯೋಜನೆ ಮೂಲಕ ನಗರದ ಸೌಂದರ್ಯದ ಬದಲಾವಣೆ ಕಾದುನೋಡಬೇಕಿದೆ.
ನಗರದಲ್ಲಿ ಹೊಟೇಲ್, ಮನೆಗಳ ಕೊಳಚೆ ನೀರು, ಶೌಚಾಲಯ ಪಿಟ್ ಪ್ರತ್ಯೇಕವಾಗಿ ರಚಿಸಬೇಕು. ಯಾವುದೇ ಕಾರಣಕ್ಕೂ ಚರಂಡಿಗೆ ಬಿಡದಂತೆ ಈಗಾಗಲೆ ಪಟ್ಟಣ ಪಂಚಾಯತ್ ನೋಟಿಸ್ ನೀಡುತ್ತಿದೆ. ಆದರೆ ಪ್ರತ್ಯೇಕ ಪಿಟ್ ತೆರೆದೂ ತ್ಯಾಜ್ಯ ಡಂಪಿಂಗ್‌ಗೆ ಜಾಗದ ಅವಶ್ಯಕತೆ ಇದೆ. ನಗರದ ಸಕ್ಕಿಂಗ್ ಯಂತ್ರಕ್ಕೆ ಇಂತಿಷ್ಟು ನಿಗದಿ ಪಡಿಸಿದೆ. ಆದರೆ ತ್ಯಾಜ್ಯ ಡಂಪಿಂಗ್ ಸ್ಥಳವಕಾಶದ ಕೊರತೆಯಿದೆ. ಇದಕ್ಕಾಗಿ ಈಗಾಗಲೇ ಸ್ಥಳ ಗುರುತಿಸಲಾಗಿದೆ ಎಂದು ಪಟ್ಟಣ ಪಂಚಾಯತ್ ತಿಳಿಸಿದೆ.
ಅಗತ್ಯ ಬದಲಾವಣೆ :
ಪ.ಪಂ. 11 ವಾರ್ಡ್‌ಗಳಿದ್ದು, ಪ್ರಮುಖವಾಗಿ ನಗರ ಕೇಂದ್ರೀಕೃತವಾಗಿ ಹಲವು ಬದಲಾವಣೆಗಳ ಅನಿವಾರ್ಯತೆ ಇದ್ದು, ಈಗಾಗಲೇ ಮಂಗಳೂರು ಸ್ಮಾರ್ಟ್‌ಸಿಟಿ ಎಂಜಿನಿಯರ್‌ಗಳನ್ನು ಕರೆಸಲಾಗಿದೆ. ಅಗತ್ಯ ಬದಲಾವಣೆಗಳು ತರುವ ಮೂಲಕ ನಗರದ ಸೌಂದರೀಕರಣ ಹಾಗೂ ಭವಿಷ್ಯದ ಬೆಳ್ತಂಗಡಿಗೆ ಟೌನ್ ಪ್ಲಾನ್ ಅವಶ್ಯವಾಗಿರುವುದನ್ನು ಮನಗಂಡು ಚಿಂತಿಸಲಾಗಿದೆ ಎಂದು ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ್ ಗೌಡ ತಿಳಿಸಿದ್ದಾರೆ.
-ಚೈತ್ರೇಶ್ ಇಳಂತಿಲ