ನವದೆಹಲಿ:ನಾವೆಲ್ಲರೂ 2020ರ ಅಕ್ಟೋಬರ್ 31ರಂದು ಬಾನಂಗಳದಲ್ಲಿ ನಡೆಯಲಿರುವ ಅಪರೂಪದ (ಬ್ಲೂ ಮೂನ್) ಚಂದ್ರದರ್ಶನಕ್ಕೆ ಸಾಕ್ಷಿಯಾಗಲಿದ್ದೇವೆ. ಇದು ಒಂದೇ ತಿಂಗಳಿನಲ್ಲಿ ನಡೆಯುವ 2ನೇ ಪೂರ್ಣಚಂದ್ರ ದರ್ಶನವಾಗಿದ್ದು, ಇದನ್ನು ಬ್ಲೂ ಮೂನ್ ಎಂದು ಕರೆಯಲಾಗುತ್ತದೆ.
“ಬ್ಲೂ ಮೂನ್ ಅನ್ನು “ಹಂಟರ್ ಮೂನ್” ಎಂದೂ ಕೂಡಾ ಕರೆಯುತ್ತಾರೆ. ಯಾಕೆಂದರೆ ಚಳಿಗಾಲದಲ್ಲಿ ಬೇಟೆಯಾಡಲು ಹೋಗುವ ಬೇಟೆಗಾರರಿಗೆ ಪೂರ್ಣ ಪ್ರಮಾಣದ ಬೆಳಕನ್ನು (ಪೂರ್ಣ ಚಂದ್ರ) ಚೆಲ್ಲುತ್ತದೆ. ಇದು ಬೇಟೆಗಾರರಿಗೆ ಅನುಕೂಲ ಕಲ್ಪಿಸಿಕೊಡುತ್ತದೆ ಎಂದು ವರದಿ ತಿಳಿಸಿದೆ.
ಅಕ್ಟೋಬರ್ 31ರಂದು ವಿಶ್ವಾದ್ಯಂತ ಈ ಬ್ಲೂಮೂನ್ ದರ್ಶನವಾಗಲಿದೆ. ಅಂದಹಾಗೆ ಬ್ಲೂಮೂನ್ ಅಂದ ಕೂಡಲೇ ನೀಲಿ ಬಣ್ಣದಲ್ಲಿ ಚಂದ್ರ ಗೋಚರಿಸಲಿದ್ದಾನೆ ಎಂದರ್ಥವಲ್ಲ. ಇದು ಅಪರೂಪವಾಗಿ ನಡೆಯುವ ವಿದ್ಯಮಾನವಾಗಿದೆ. ಆಕಾಶದಲ್ಲಿ ಅಪರೂಪಕ್ಕೆ ಎಂಬಂತೆ 2,3 ವರ್ಷಗಳಿಗೊಮ್ಮೆ ನಡೆಯುತ್ತದೆ. 2018ರಲ್ಲಿಯೂ ಬ್ಲೂಮೂನ್ ಗೋಚರಿಸಿತ್ತು.
ಇದನ್ನೂ ಓದಿ:ಉಡುಪಿ ವಿಜಯ ಕುಮಾರ್, ದ.ಕನ್ನಡದ ವೆಲೇರಿಯನ್ ಡಿಸೋಜ ಸೇರಿ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ
ನಾಸಾ ಬ್ಲಾಗ್ ನಲ್ಲಿ ವಿವರಿಸಿರುವಂತೆ, ಬ್ಲೂಮೂನ್ (ನೀಲಿ) ಅಂದರೆ ಒಂದೇ ತಿಂಗಳಿನಲ್ಲಿ ಎರಡು ಬಾರಿ ಕಾಣಿಸಿಕೊಳ್ಳಲಿರುವ ಪೂರ್ಣ ಚಂದ್ರ ದರ್ಶನ. ಸಾಂಪ್ರದಾಯಿಕವಾಗಿ 29 ದಿನಗಳ ನಂತರ ಪೂರ್ಣ ಚಂದ್ರ ಕಾಣಿಸಿಕೊಳ್ಳುತ್ತಾನೆ. ಆದರೆ ಅಪರೂಪಕ್ಕೆ ಒಂದೇ ತಿಂಗಳಿನಲ್ಲಿ ಎರಡನೇ ಬಾರಿ ಪೂರ್ಣ ಚಂದ್ರ ಗೋಚರಿಸಲಿದ್ದು, ಅದಕ್ಕೆ ಬ್ಲೂ ಮೂನ್ ಎಂದು ಕರೆಯುತ್ತಾರೆ.
ಅಕ್ಟೋಬರ್ 1ರಂದು ಹುಣ್ಣಿಮೆ ಚಂದ್ರ ಕಾಣಿಸಿಕೊಂಡಿದ್ದು, ಇದೀಗ ಅಕ್ಟೋಬರ್ 31ರಂದು ಎರಡನೇ ಬಾರಿ ಪೂರ್ಣ ಚಂದ್ರ (ಬ್ಲೂಮೂನ್) ಗೋಚರಿಸುತ್ತಿದೆ. ಇನ್ನು ಮುಂದಿನ ಬ್ಲೂಮೂನ್ 2050ರ ಸೆಪ್ಟೆಂಬರ್ 30ರಂದು ಕಾಣಿಸಲಿದೆ ಎಂದು ವಿವರಿಸಿದೆ.