Advertisement
ತಣ್ಣೀರುಬಾವಿ ಬೀಚ್‌ನ 1 ಕಿ.ಮೀ ವ್ಯಾಪ್ತಿಯಲ್ಲಿ ಬ್ಲೂ ಫ್ಲ್ಯಾಗ್ ಮಾನ್ಯತೆಯ ಯೋಜನ ಕಾಮಗಾರಿ ಹಿನ್ನೆಲೆಯಲ್ಲಿ ಮಂಗಳವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಯಿತು. ಬೀಚ್ ಅಭಿವೃದ್ಧಿ ದೃಷ್ಟಿಯಿಂದ ಬ್ಲೂ ಫ್ಲ್ಯಾಗ್ ಮಾನ್ಯತೆ ದೊರೆತರೆ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ದೊರೆಯಬಹುದು ಎಂದು ಜಿಲ್ಲಾಡಳಿತದ ಅಧಿಕಾರಿ ವರ್ಗ ಯೋಜನೆ ಬಗ್ಗೆ ಪೂರಕವಾಗಿ ಮಾತನಾಡಿದರು. ಆದರೆ ಸ್ಥಳೀಯ ಮೀನುಗಾರರು ಸಹಿತ ಇತರರಿಗೆ ಆಗುವ ಸಮಸ್ಯೆ ಮತ್ತು ದುಬಾರಿ ವೆಚ್ಚ ಅನಗತ್ಯ ಎಂದು ಸ್ಥಳೀಯರು ಆಕ್ಷೇಪಿಸಿದರು.
Related Articles
ಕಡಲ ತೀರ (ಬೀಚ್)ಗಳಲ್ಲಿನ ಸ್ವಚ್ಛತೆ, ಪರಿಸರ ಸ್ನೇಹಿ ವಾತಾವರಣ ಮತ್ತಿತರ ಅಂಶಗಳನ್ನು ಪರಿಗಣಿಸಿ ಪರಿಸರ ಶಿಕ್ಷಣ ವೇದಿಕೆ (ಎಫ್. ಇ.ಇ-ಫೌಂಡೇಶನ್ ಫಾರ್ ಎನ್ವಿರಾನ್ಮೆಂಟ್ ಎಜುಕೇಷನ್) ಬ್ಲೂ ಫ್ಲ್ಯಾಗ್ ಪ್ರಮಾಣ ಪತ್ರ ನೀಡುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಡೆನ್ಮಾರ್ಕ್‌ನಲ್ಲಿರುವ ಈ ಸಂಸ್ಥೆಯು ಪರಿಸರ ಶಿಕ್ಷಣ ಹಾಗೂ ಮಾಹಿತಿ, ನೀರಿನ ಗುಣಮಟ್ಟ, ಪರಿಸರ ನಿರ್ವಹಣೆ, ಸಂರಕ್ಷಣೆ, ಭದ್ರತೆ ಹಾಗೂ ಸೇವೆ ಎಂಬ ಪ್ರಮುಖ ಭಾಗಗಳಲ್ಲಿ 33 ಮಾನದಂಡಗಳನ್ನಿಟ್ಟುಕೊಂಡು ಈ ಮಾನ್ಯತೆ ನೀಡುತ್ತದೆ. ಇದನ್ನು ಭಾರತ ಸಹಿತ 47 ರಾಷ್ಟ್ರಗಳು ಮಾನ್ಯ ಮಾಡಿವೆ. ಇಂತಹ ಪ್ರಮಾಣಪತ್ರ ಪಡೆದ ಬೀಚ್‌ಗಳಲ್ಲಿ ನೀಲಿ ಬಣ್ಣದ ಧ್ವಜ ಆರೋಹಣ ಮಾಡಲಾಗುತ್ತದೆ. ವಿದೇಶಗಳಲ್ಲಿ ಇಂತಹ ಪ್ರಮಾಣಪತ್ರ ಪಡೆದ ಬೀಚ್‌ಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗಾಗಿ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಇಂತಹ ಪ್ರಮಾಣಪತ್ರ ಪಡೆಯುವುದು ಅತ್ಯಂತ ಪ್ರಮುಖವಾಗಿದೆ.
Advertisement
ಟೆಂಡರ್ ಕರೆದ ಬಳಿಕ ಸಮಾಲೋಚನ ಸಭೆ ಯಾಕೆ?ಸ್ಥಳೀಯ ಪ್ರಮುಖರಾದ ಯತೀಶ್ ಬೈಕಂಪಾಡಿ ಅವರು ಸಮಾಲೋಚನೆ ಸಭೆಯಲ್ಲಿ ಮಾತನಾಡಿ, “ಪಡುಬಿದ್ರಿ ಬೀಚ್‌ನ ಹೆಸರಿನಲ್ಲಿ ಅನಗತ್ಯವಾಗಿ ದುಂದುವೆಚ್ಚ ಮಾಡಲಾಗಿದೆ. ಅಲ್ಲಿನ ಮೀನುಗಾರರು ಮೀನುಗಾರಿಕೆ ನಡೆಸಲೂ ಅವಕಾಶ ನೀಡಿರಲಿಲ್ಲ. ಜತೆಗೆ ಬ್ಯಾರಿಕೇಡ್ ಮೂಲಕ ನಿರ್ಬಂಧ ಹಾಕಲಾಗಿತ್ತು. ಇಂತಹ ನಿಲುವಿಗೆ ತಣ್ಣೀರುಬಾವಿಯಲ್ಲಿ ಅವಕಾಶ ನೀಡುವುದಿಲ್ಲ. ಸ್ಥಳೀಯರ ಅಹವಾಲು ಕೇಳುವ ಮೊದಲೇ ಯೋಜನೆಗೆ ಟೆಂಡರ್ ಕರೆದಿರುವುದು ಸರಿಯಲ್ಲ. ಜತೆಗೆ ದೇಶಾದ್ಯಂತ ಎಲ್ಲ ಬ್ಲೂ ಫ್ಲ್ಯಾಗ್‌ಗೆ ಒಂದೇ ರೀತಿಯ ಯೋಜನಾ ಕಾಮಗಾರಿ ವಹಿಸಿರುವುದು ಸರಿಯಲ್ಲ. ಯಾಕೆಂದರೆ ಸ್ಥಳೀಯ ಜನರ ಭಾವನೆ ಹಾಗೂ ಸ್ಥಳೀಯ ಪ್ರವಾಸೋದ್ಯಮಕ್ಕೆ ಪೂರಕವಾಗಿ ಯೋಜನೆ ರೂಪಿಸಬೇಕಿತ್ತು’ ಎಂದರು. ಜಿಲ್ಲಾಧಿಕಾರಿಯವರು ಮಾತನಾಡಿ “ಈ ಬಗ್ಗೆ ಟೆಂಡರ್ ಪಡೆದವರಲ್ಲಿ ಪ್ರಸ್ತಾವಿಸಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.