ನವದೆಹಲಿ: ಶಾಂಘೈ ಸಹಕಾರ ಸಂಸ್ಥೆ ವೇದಿಕೆ(ಎಸ್ ಸಿಒ)ಯಲ್ಲಿ ದ್ವಿಪಕ್ಷೀಯ ವಿಚಾರಗಳನ್ನು ಎತ್ತಬಾರದು ಎಂದು ಹೇಳುವ ಮೂಲಕ ರಷ್ಯಾ ಭಾರತವನ್ನು ಬಹಿರಂಗವಾಗಿ ಬೆಂಬಲಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಪಾಕಿಸ್ತಾನ ಏಕಾಏಕಿ ಭಾರತ, ಪಾಕ್ ನಡುವಿನ ವಿಷಯ ಎತ್ತಲು ಮುಂದಾದಾಗ ಈ ಬೆಳವಣಿಗೆ ನಡೆದಿರುವುದಾಗಿ ವರದಿ ತಿಳಿಸಿದೆ.
ದೆಹಲಿಯಲ್ಲಿರುವ ರಷ್ಯಾದ ಡೆಪ್ಯುಟಿ ರಾಯಭಾರಿ ರೋಮನ್ ಎನ್ ಬಾಬುಷ್ಕಿನ್ ಅವರು, ವಿಯೋನ್ ಪ್ರಶ್ನೆಗೆ ಉತ್ತರಿಸುತ್ತ, ಇದು ಎಸ್ ಸಿಒ ಚಾರ್ಟರ್ ಮತ್ತು ಎಸ್ ಸಿಒ ಮೂಲ ದಾಖಲೆಗಳ ಭಾಗವಾಗಿದ್ದು, ಇಲ್ಲಿ ದ್ವಿಪಕ್ಷೀಯ ವಿಚಾರ ಎಳೆದು ತರುವುದು ನಮ್ಮ ಅಜೆಂಡಾದಲ್ಲಿ ಇಲ್ಲ. ಇದನ್ನು ಎಲ್ಲಾ ಸದಸ್ಯ ರಾಷ್ಟ್ರಗಳು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದ್ದರು.
ಶಾಂಘೈ ಸಹಕಾರ ವೇದಿಕೆಯ ಮುಖ್ಯವಾಗಿ ಪ್ರಾದೇಶಿಕ ಸಮಸ್ಯೆ, ಆರ್ಥಿಕ ಚೇತರಿಕೆ, ಹಣಕಾಸು, ಮಾನವೀಯತೆಯ ಸಹಭಾಗಿತ್ವ ಮುಂತಾದವು ಸೇರಿವೆ. ಈ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ವಿಚಾರಗಳ ಬಗ್ಗೆ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದು ರಷ್ಯಾ ಹೇಳುವ ಮೂಲಕ ಚೀನಾ ಮತ್ತು ಪಾಕಿಸ್ತಾನಕ್ಕೆ ಮುಖಭಂಗವಾಗಿರುವುದಾಗಿ ವರದಿ ತಿಳಿಸಿದೆ.
ನಮ್ಮ ಸ್ಥಾನ ಸ್ಥಿರವಾಗಿದ್ದು ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಇನ್ಮುಂದೆ ಇಂತಹ ವರ್ತನೆ ಪುನರಾವರ್ತನೆಯಾಗುವುದಿಲ್ಲ ಎಂದು ಭರವಸೆ ಹೊಂದಿರುವುದಾಗಿ ರಷ್ಯಾ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೊಂದು ದುರದೃಷ್ಟಕರ ಅನಾವಶ್ಯಕವಾಗಿ ಎಸ್ ಸಿಒ ವೇದಿಕೆಯಲ್ಲಿ ದ್ವಿಪಕ್ಷೀಯ ವಿಚಾರಗಳನ್ನು ಎಳೆದು ತರಲಾಗುತ್ತಿದೆ. ಇದು ಎಸ್ ಸಿಒ ಚಾರ್ಟರ್ ಉಲ್ಲಂಘನೆ ಮತ್ತು ಶಾಂಘೈ ವೇದಿಯ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಮೋದಿ ತಿಳಿಸಿದ್ದರು.