Advertisement
ಈಗ ಮದುವೆಯ ಸೀಸನ್ ಆಗಿರುವ ಕಾರಣ, ಎಷ್ಟು ಚೆನ್ನಾಗಿ ಡ್ರೆಸ್ ಅಪ್ ಮಾಡಿಕೊಂಡರೂ ಸಾಲದು ಎಂಬಂತಿರುತ್ತದೆ ಹೆಣ್ಣುಮಕ್ಕಳ ಮನಸ್ಸು. ಲೇಟೆಸ್ಟ್ ಟ್ರೆಂಡ್‌ಗಳನ್ನು ತಿಳಿದುಕೊಂಡು, ಅಂಥವುಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದೇ ಸವಾಲಿನ ಕೆಲಸ. ಮೊದಲೆಲ್ಲ ಸೀರೆಯುಡುವ ನಾರಿಯರು ಬ್ಲೌಸ್ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸೀರೆಯ ತುದಿಯಲ್ಲಿ ಹೆಚ್ಚುವರಿಯಾಗಿ ಬರುವ ಬ್ಲೌಸ್ ಪೀಸ್‌ಗಳನ್ನೇ ಕತ್ತರಿಸಿ, ದರ್ಜಿಗೆ ಕೊಟ್ಟು ರವಿಕೆ ಹೊಲಿಸಿಕೊಳ್ಳುತ್ತಿದ್ದರು. ಈಗ ಹಾಗಲ್ಲ, ಸೀರೆಯಲ್ಲಿನ ಬ್ಲೌಸ್ ಪೀಸ್ ಯಾರಿಗೂ ಬೇಡ ಎಂಬಂತೆ ಮಾರುಕಟ್ಟೆಯಲ್ಲಿ ಥರ ಥರದ ವಿನ್ಯಾಸಗಳುಳ್ಳ ರೆಡಿಮೇಡ್ ಬ್ಲೌಸ್‌ಗಳದ್ದೇ ದರ್ಬಾರು. ಸ್ಟೈಲಿಶ್ ಆಗಿಯೂ, ಟ್ರೆಂಡಿಯಾಗಿಯೂ ಕಾಣುವ ಡಿಸೈನರ್ ಬ್ಲೌಸ್‌ಗಳು ಹೆಂಗಳೆಯರ ಮನಸೂರೆಗೊಳಿಸುತ್ತಿವೆ.
ಚೈನೀಸ್ ಕಾಲರ್ ಬ್ಲೌಸ್‌ಗಳು ನಮ್ಮ ದೇಶಕ್ಕೆ ಹೊಸದೇನೂ ಅಲ್ಲ. ಅಫೀಶಿಯಲ್ ಲುಕ್ ಬಯಸುವವರು ಹಿಂದೆಯೂ ಈ ರೀತಿಯ ರವಿಕೆಗಳನ್ನು ಧರಿಸುತ್ತಿದ್ದರು. ಈಗ ವಿನ್ಯಾಸದಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆಗಳನ್ನು ಮಾಡಿ, ಹೊಸದೊಂದು ಹೆಸರಿಟ್ಟಿದ್ದಾರೆ ಅಷ್ಟೇ. ಕಾಟನ್ ಸೀರೆಗಳಿಗೆ ಚೈನೀಸ್ ಕಾಲರ್ ಬ್ಲೌಸ್ ಅದ್ಭುತವಾಗಿ ಕಾಣುತ್ತದೆ. ಬೋಟ್ ನೆಕ್
ರವಿಕೆಯ ಕತ್ತಿನ ಭಾಗದಲ್ಲಿ ದೋಣಿಯಾಕಾರದ ವಿನ್ಯಾಸವಿರುವ ಕಾರಣ, ಇದಕ್ಕೆ ಬೋಟ್‌ನೆಕ್ ಬ್ಲೌಸ್ ಎಂದು ಹೆಸರು. ಕಳೆದ ಒಂದು ವರ್ಷದಿಂದೀಚೆಗೆ ಬೋಟ್ ನೆಕ್ ಬ್ಲೌಸ್‌ಗೆ ಭಾರೀ ಡಿಮ್ಯಾಂಡ್ ಇದೆ. ಕಾಟನ್ ಮಾತ್ರವಲ್ಲದೆ, ಡಿಸೈನರ್ ಸೀರೆಗಳಿಗೂ ಈ ರವಿಕೆ ಹೊಂದುತ್ತದೆ. ಇದನ್ನು ಧರಿಸಿದರೆ ಕುತ್ತಿಗೆ ಭಾಗ ಬಹುತೇಕ ಮುಚ್ಚುವ ಕಾರಣ, ಆಭರಣವೂ ತೊಡಬೇಕಾದ ಅವಶ್ಯಕತೆಯಿಲ್ಲ.
Related Articles
ಹೆಚ್ಚು ಆಭರಣಗಳನ್ನು ಧರಿಸಲು ಬಯಸದೇ ಇರುವವರು ಇಂಥ ಬ್ಲೌಸ್‌ಗಳ ಮೊರೆ ಹೋಗಬಹುದು. ಏಕೆಂದರೆ, ಇಲ್ಲಿ ರವಿಕೆಯೇ ಆಭರಣ. ಕುತ್ತಿಗೆಯ ಭಾಗದಲ್ಲಿ ಸ್ಟೋನ್ ವರ್ಕ್ ಅಥವಾ ಪೂರ್ಣ ಎಂಬ್ರಾಯಿಡರಿ ವಿನ್ಯಾಸ ಮಾಡಿರಲಾಗುತ್ತದೆ. ಈ ಬ್ಲೌಸ್ ಧರಿಸಿದಾಗ, ಕುತ್ತಿಗೆಗೆ ಅದ್ಧೂರಿ ನೆಕ್ಲೇಸ್ ಧರಿಸಿದಂತೆಯೇ ಕಾಣುತ್ತದೆ.
Advertisement
ವೆಲ್ವೆಟ್ ಚೋಲಿಒಂದು ಕಾಲದಲ್ಲಿ ಹೆಂಗಳೆಯರ ಅಚ್ಚುಮೆಚ್ಚು ಎನಿಸಿದ್ದ ವೆಲ್ವೆಟ್ ಚೋಲಿ ಮತ್ತೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಕಪ್ಪು ಬಣ್ಣ ಅಥವಾ ಚಿನ್ನದ ಬಣ್ಣದ ವೆಲ್ವೆಟ್ ಬ್ಲೌಸ್ ಇದ್ದರೆ, ಯಾವ ಸೀರೆಗಾದರೂ ಧರಿಸಬಹುದು. ಫುಲ್ ಸ್ಲಿàವ್ ಅಥವಾ ಹಾಫ್ ಸ್ಲಿàವ್ಸ್‌ನಲ್ಲೂ ವೆಲ್ವೆಟ್ ಚೋಲಿ ಲಭ್ಯವಿದೆ. ಡಿಸೈನರ್ ಬ್ಲೌಸ್
ಇಡೀ ಬ್ಲೌಸ್‌ನಲ್ಲಿ ಎಂಬ್ರಾಯಿಡರಿ ವಿನ್ಯಾಸ ತುಂಬಿ ತುಳುಕುತ್ತಿರುತ್ತದೆ. ಇದನ್ನು ಧರಿಸುವಾಗ, ಸೀರೆಯಲ್ಲಿ ಹೆವಿ ಡಿಸೈನ್ ಇಲ್ಲದಂತೆ ನೋಡಿಕೊಳ್ಳಿ. ಸೀರೆ ಪ್ಲೇನ್ ಇದ್ದಾಗ ಡಿಸೈನರ್ ಬ್ಲೌಸ್ ತೊಟ್ಟರೆ ಕ್ಲಾಸಿ ಲುಕ್ ಖಂಡಿತಾ. ನೆಟ್ ವಿತ್ ಎಂಬ್ರಾಯಿಡರಿ
ರವಿಕೆಯ ತೋಳುಗಳು ಪೂರ್ತಿ ನೆಟ್ ಹೊಂದಿರುವ, ಫುಲ್ ಸ್ಲಿàವ್ಸ್ ಬ್ಲೌಸ್ ಅನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಇದು ಸೀರೆಯುಟ್ಟ ನಾರಿಯನ್ನು ಸ್ಟೈಲಿಶ್ ಆಗಿ ಕಾಣಿಸುವುದರಲ್ಲಿ ಸಂಶಯವೇ ಇಲ್ಲ. ಮಿರರ್ ವರ್ಕ್
ಕನ್ನಡಿಯ ಚೂರುಗಳ ಮೂಲಕ ವಿನ್ಯಾಸಗೊಳಿಸಲಾದ ಬ್ಲೌಸ್. ರವಿಕೆಯ ತೋಳುಗಳಲ್ಲಿ ಅಥವಾ ಬೆನ್ನಿನ ಭಾಗದಲ್ಲಿ ಪುಟ್ಟ ಪುಟ್ಟ ಕನ್ನಡಿಗಳನ್ನು ಅಂದವಾಗಿ ಜೋಡಿಸಿ, ವಿನ್ಯಾಸ ಮಾಡಿರಲಾಗುತ್ತದೆ. ಪ್ಲೇನ್ ಸೀರೆಗಳಿಗೆ ಈ ಬ್ಲೌಸ್ ಚೆನ್ನಾಗಿ ಒಪ್ಪುತ್ತದೆ. – ಹಲೀಮತ್ ಸ ಅದಿಯಾ