ಬೆಂಗಳೂರು : ಹೆಚ್ಚುತ್ತಿರುವ ಕೋವಿಡ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿತ್ತಿದೆ. ಈಗಾಗಲೇ ಲಾಕ್ ಡೌನ್ ಮೂಲಕ ಒಂದು ಹಂತದಲ್ಲಿ ಚೈನ್ ಕತ್ತರಿಸುವ ಪ್ರಕ್ರಿಯೆ ಯಶಸ್ವಿಯಾಗಿದ್ದು, ಗ್ರಾಮೀಣ ಭಾಗದಲ್ಲಿಯೂ ಮೊಬೈಲ್ ಕ್ಲಿನಿಕ್, ಮನೆ, ಮನೆಯಲ್ಲಿಯೂ ಲಕ್ಷಣವುಳ್ಳವರ ಕೋವಿಡ್ ಪರೀಕ್ಷೆ ಸೇರಿದಂತೆ ಸೋಂಕಿತರನ್ನ ಗುರುತಿಸಿ ಚಿಕಿತ್ಸೆ ನೀಡುವಲ್ಲಿ ಪರಿಣಾಮಕಾರಿ ಮಾರ್ಗಗಳನ್ನ ಅನುಸರಿಸುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ಭಾಗದಲ್ಲಿ ಮತ್ತೊಂದು ವಿಶಿಷ್ಟ ಮಾರ್ಗ ಅನುಸರಿಸುತ್ತಿದ್ದು, ಆ ಮೂಲಕ ಸೋಂಕಿನ ಪ್ರಭಾವವನ್ನ ನಿರ್ದಿಷ್ಟವಾಗಿ ಗುರುತಿಸುವಲ್ಲಿ ಇದು ನೆರವಾಗಲಿದೆ.
ಈ ಕುರಿತು ಮಾಹಿತಿ ಹಂಚಿಕೊಂಡ ಕಂದಾಯ ಸಚಿವ ಆರ್ ಅಶೋಕ,”ಆರ್ ಟಿ ಪಿ ಸಿ ಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರಿಗೆ ಹೆಚ್ಷುವರಿಯಾಗಿ ರಕ್ತ ಪರೀಕ್ಷೆಯನ್ನು ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ಸೋಂಕಿನ ತೀವ್ರತೆಯನ್ನ ನಿರ್ಧರಿಸುವುದು ಸುಲಭವಾಗಲಿದೆ ಎಂಬ ವೈದ್ಯಕೀಯ ಅಭಿಪ್ರಾಯದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಭಾಗದಲ್ಲಿ ಆರ್ ಟಿ ಪಿ ಸಿ ಆರ್ ಪರೀಕ್ಷೆಯ ನಂತರದಲ್ಲಿ ರಕ್ತ ಪರೀಕ್ಷೆಯನ್ನು ಕೂಡಾ ಮಾಡಲು ನಿರ್ಧರಿಸಲಾಗಿದೆ. ಎರಡು ದಿನದಲ್ಲಿ ಎರಡು ಬಾರಿ ರಕ್ತ ಪರೀಕ್ಷೆ ಮಾಡುವ ಮೂಲಕ ಸೋಂಕಿನ ತೀವ್ರತೆಯನ್ನ ಸ್ಪಷ್ಟವಾಗಿ ಪತ್ತೆ ಹಚ್ಚಬಹುದಾಗಿದೆ. ಇದರಿಂದ ಸೋಂಕಿತರಿಗೆ ಯಾವ ಹಂತದ ಚಿಕಿತ್ಸೆ ತಕ್ಷಣಕ್ಕೆ ಅವಶ್ಯಕ ಎಂಬುದನ್ನು ತಿಳಿಯಬಹುದಾಗಿದೆ”, ಎಂದು ತಿಳಿಸಿದರು.
ಇದನ್ನೂ ಓದಿ :ದಾವಣಗೆರೆ ಜಿಲ್ಲೆಯಲ್ಲಿ 574 ಮಂದಿ ಗುಣಮುಖ: 633 ಹೊಸ ಪ್ರಕರಣ
ಇದರ ಅನುಸಾರ ಸೋಂಕಿನ ಪ್ರಮಾಣ ಮೊದಲೇ ತಿಳಿದುಕೊಂಡರೆ ಸೋಂಕಿತರಿಗೆ ತಕ್ಷಣಕ್ಕೆ ಆಕ್ಸಿಜನ್, ಐಸಿಯೂ ಅಥವಾ ವೆಂಟಿಲೇಟರ್ ಇವುಗಳಲ್ಲಿ ಎಲ್ಲಿ ದಾಖಲಿಸಿ ಚಿಕಿತ್ಸೆ ನೀಡಬೇಕು ಎಂಬುದನ್ನ ತಿಳಿಯಬಹುದಾಗಿದೆ. ಹಾಗೆಯೇ ಈ ರಕ್ತ ಪರೀಕ್ಷೆ ಕೂಡಾ ಸಂಪೂರ್ಣ ಉಚಿತವಾಗಿದ್ದು, ಇದು ಸೋಂಕಿತರ ಜೀವ ರಕ್ಷಣೆಯಲ್ಲಿಯೂ ಮಹತ್ವದ ಪಾತ್ರ ವಹಿಸಲಿದೆ, ಎಂದು ಸಚಿವರು ತಿಳಿಸಿದ್ದಾರೆ.
ಪ್ರಸ್ತುತ ಈ ವಿಶಿಷ್ಟ ನಿರ್ಧಾರವು ಬೆಂಗಳೂರು ದಕ್ಷಿಣ ಭಾಗದಲ್ಲಿ ಮಾತ್ರ ಜಾರಿಯಾಗಲಿದ್ದು, ಬರುವ ದಿನಗಳಲ್ಲಿ ಇದನ್ನು ಬೇರೆ, ಬೇರೆ ಭಾಗಗಳಲ್ಲಿ ಜಾರಿಗೊಳಿಸುವ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.