Advertisement

ಶಾಲೆಗಳಲ್ಲೇ ರಕ್ತ ಪರೀಕ್ಷೆ ಪ್ರಕ್ರಿಯೆ

04:08 PM Jul 31, 2022 | Team Udayavani |

ಕಾರವಾರ: ಜಿಲ್ಲೆಯಾದ್ಯಂತ ಆ.1 ರಿಂದ 15 ರವರೆಗೆ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಹಾಗೂ ಆ.10 ರಂದು ರಾಷ್ಟೀಯ ಜಂತು ಹುಳು ನಿವಾರಣಾ ದಿನವನ್ನು ನಡೆಸಲಾಗುವುದು ಎಂದು ಜಿಪಂ ಸಿಇಒ ಹೇಳಿದರು.

Advertisement

ಜಿಪಂ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯಡಿ ಎಲ್ಲಾ ಆಶಾ ಕಾರ್ಯಕರ್ತೆಯರ ಮೂಲಕ ತಮ್ಮ ವ್ಯಾಪ್ತಿಯಲ್ಲಿನ 5 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿರುವ ಮನೆಗೆ ಭೇಟಿ ನೀಡಿ ಒಂದು ಒಆರ್‌ಎಸ್‌ ಹಾಗೂ 14 ಝಿಂಕ್‌ ಮಾತ್ರೆಗಳನ್ನು ಹಂಚಲಿದ್ದಾರೆ. ಮಕ್ಕಳಿಗೆ ಅತಿಸಾರ ಭೇದಿ ಉಂಟಾದಾಗ ಅದನ್ನು ಉಪಯೋಗಿಸಲು ತಿಳಿಸಲಾಗುವುದು ಎಂದರು.

ಸ್ವಚ್ಛತೆ, ಶುದ್ಧ ನೀರು ಹಾಗೂ ಬಯಲು ಶೌಚವನ್ನು ತಡೆಯುವ ಕುರಿತು ಮಾಹಿತಿ ನೀಡಿ, ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಅತಿಸಾರ ಭೇದಿ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಿ, ಒಆರ್‌ಎಸ್‌ ಝಿಂಕ್‌ ಕಾರ್ನರ್‌ ಗಳನ್ನು ಸ್ಥಾಪಿಸಲಾಗುವುದು ಎಂದರು.

ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹಾಗೂ ವಸತಿ ಶಾಲೆ, ವಸತಿ ನಿಲಯ, ಅಂಗನವಾಡಿ ಕೇಂದ್ರಗಳಲ್ಲಿನ ನೀರಿನ ತೊಟ್ಟಿಗಳನ್ನು ಸ್ವತ್ಛಗೊಳಿಸಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಂಡು, ವಿದ್ಯಾರ್ಥಿಗಳಿಗೆ ಕೈತೊಳೆಯುವ ವಿಧಾನದ ಕುರಿತು ಶಿಕ್ಷಕರ ಮೂಲಕ ತಿಳಿಸಲಾಗುವುದು ಎಂದು ಹೇಳಿದರು.

ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ, ಸ್ತ್ರೀ ಶಕ್ತಿ ಗುಂಪು ಹಾಗೂ ಅಂಗನವಾಡಿಯಲ್ಲಿ ತಾಯಂದಿರ ಸಭೆಗಳನ್ನು ನಡೆಸಿ ಅತಿಸಾರ ಭೇದಿ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲಾಗುವುದು ಎಂದು ಹೇಳಿದರು.

Advertisement

10 ರಂದು ರಾಷ್ಟೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ 1 ರಿಂದ 19 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಶಾಲೆಗಳಲ್ಲಿ ಮತ್ತು ಅಂಗನವಾಡಿ ಕೆಂದ್ರಗಳಲ್ಲಿ ಜಂತು ಹುಳುಗಳ ನಿಯಂತ್ರಣಕ್ಕೆ ಅಲ್ಬೆಂಡಜೋಲ್‌ ಮಾತ್ರೆಗಳನ್ನು ನೀಡಲಾಗುವುದು. 10 ನೇ ತಾರೀಖೀನಂದು ಮಾತ್ರೆ ಪಡೆಯಲು ಬಿಟ್ಟು ಹೋದ ಮಕ್ಕಳಿಗೆ 17 ನೇ ತಾರೀಖೀನಂದು ಮಾಪ ಅಪ್‌ ರೌಂಡ್‌ ಮಾಡಿ ನೀಡಲಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ 2019 ರಿಂದ 2021 ರ ವರೆಗೆ ನಡೆದ ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆಯ ಪ್ರಕಾರ 0-59 ತಿಂಗಳ ಮಕ್ಕಳಲ್ಲಿ ಶೇ. 67, ಹದಿಹರೆಯದ 15 ರಿಂದ 19 ಹೆಣ್ಣು ಮಕ್ಕಳಲ್ಲಿ ಶೇ.59 ಹದಿಹರೆಯದ ಗಂಡು ಮಕ್ಕಳಲ್ಲಿ ಶೇ.31, 19 ರಿಂದ 49 ವರ್ಷದ ವಯಸ್ಸಿನ ಹೆಂಗಸರಲ್ಲಿ ಶೇ. 57, ಗರ್ಭಿಣಿಯರಲ್ಲಿ ಶೇ. 52 ಹಾಗೂ ಗರ್ಭಿಣಿಯಲ್ಲದ ಹೆಂಗಸರಲ್ಲಿ ಶೇ. 57 ರಕ್ತಹೀನತೆ ಇರುವುದು ಕಂಡುಬರುತ್ತಿದೆ ಎಂದು ಸಿಇಒ ವಿವರಿಸಿದರು.

ಶಾಲಾ ಆರೋಗ್ಯ ಕಾರ್ಯಕ್ರಮದಲ್ಲಿ ಈಗಾಗಲೇ ಎಲ್ಲಾ ಶಾಲಾ ಮಕ್ಕಳಿಗೆ ವಾರಕ್ಕೊಂದು ಬಾರಿ ಕಬ್ಬಿಣಾಂಶ ಹಾಗೂ ಫೋಲಿಕ್‌ ಆ್ಯಸಿಡ್‌ ಅನ್ನಾಂಗ ಇರುವ ಮಾತ್ರೆಗಳನ್ನು ವಿತರಿಸಲಾಗುತ್ತದೆ, ಶಾಲಾ ಮಕ್ಕಳಲ್ಲಿ ರಕ್ತಹೀನತೆ ಇರುವುದನ್ನು ಮನಗಂಡು ಉತ್ತರ ಕನ್ನಡ ಜಿಲ್ಲೆಯನ್ನು ಅನಿಮಿಯಾ ಮುಕ್ತ ಮಾಡುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಪಂ ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಪ್ರಾಥಮಿಕ ಹಂತದಲ್ಲಿ 13 ರಿಂದ 18 ವರ್ಷ ವಯಸ್ಸಿನ ಹೆಣ್ಣು ಮಕ್ಕಳನ್ನು ಆಯ್ಕೆ ಮಾಡಿಕೊಂಡು ಮೇ 15 ರಂದು ಸರ್ಕಾರಿ ಪ್ರೌಢ ಶಾಲೆ ಕಾರವಾರದಲ್ಲಿ ಮೊದಲ ಕಾರ್ಯಕ್ರಮ ಮಾಡುವುದರ ಮೂಲಕ ಮಾನ್ಯ ಮುಖ್ಯಕಾರ್ಯ ನಿರ್ವಹಣಾ ಕಾರಿಯವರಿಂದ ಅಭಿಯಾನಕ್ಕೆ ಚಾಲನೆ ನೀಡಿದ್ದೆವು ಎಂದು ಸ್ಮರಿಸಿದರು.

ಈ ಅಭಿಯಾನದಲ್ಲಿ 13 ರಿಂದ 18 ವರ್ಷ ವಯಸ್ಸಿನ ಒಟ್ಟೂ 49.262 ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ಕಂಡುಹಿಡಿಯಲು ಮಾಡಲಾಗುವ ಹಿಮೊಗ್ಲೋಬಿನ್‌ ಪರೀಕ್ಷೆಯನ್ನು ಅವರುಗಳು ಕಲಿಯುತ್ತಿರುವ ಶಾಲೆಗಳಲ್ಲಿಯೇ ಆರೋಗ್ಯ ಇಲಾಖೆಯ ಸಿಬ್ಬಂದಿ ಮೂಲಕ ನಡೆಸಲಾಗುತ್ತದೆ ಎಂದು ಹೇಳಿದರು.

ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಕ್ಷೇತ್ರ ಸಿಬ್ಬಂದಿ ಜಂತು ಹುಳು ನಿವಾರಣೆಗೆ ಮಾತ್ರೆಯನ್ನು ಹಾಗೂ ಅನಿಮಿಯಾ ಪತ್ತೆಯಾದ ಮಕ್ಕಳಿಗೆ ಔಷಧಿಯನ್ನು ನೀಡಲು ಪ್ರಾರಂಭ ಮಾಡಲಾಗಿದ್ದು, ಆಯಾ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಮಕ್ಕಳ ಅನುಸರಣೆ ಜವಾಬ್ದಾರಿಯನ್ನು ನೀಡಲಾಗಿದೆ. ಹಾಗೂ ಅವರುಗಳಿಗೆ ಹೆಲ್ತ್‌ ಕಾರ್ಡ್‌ಗಳನ್ನು ನೀಡಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರ್‌ಸಿಎಚ್‌ಒ ಡಾ| ರಮೇಶ್‌ರಾವ್‌, ಡಿಎಚ್‌ಒ ಶರದ್‌ ನಾಯಕ್‌ ಇನ್ನಿತರ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next