ಬೆಂಗಳೂರು: ರಕ್ತದಾನ ಶಾಂತಿ ಸಂಕೇತವಾಗಿದ್ದು, ದೇಶದಲ್ಲಿ ಹೆಚ್ಚೆಚ್ಚು ರಕ್ತದಾನ ಶಿಬಿರಗಳು ನಡೆಯಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಹಾಲಕ್ಷ್ಮೀಪುರದ ಶ್ರೀನಿವಾಸ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಗಿರಿಧಾಮ ಡಯಾಗ್ನಾಸ್ಟಿಕ್ ಸೆಂಟರ್’ ಉದ್ಘಾಟಿಸಿ ಅವರು ಮಾತನಾಡಿದರು. ಯಾವು ದೇಶಕ್ಕೆ ರಕ್ತಪಾತ ಒಳ್ಳೆಯದಲ್ಲ. ಅದರ ಬದಲು ಶಾಂತಿಯ ಸಂಕೇತವಾಗಿರುವ ರಕ್ತದಾನ ನಡೆಯಲಿ ಎಂದರು.
ವೈದ್ಯಕೀಯ ಸೇವೆಯಲ್ಲಿ ಭಗವಂತನನ್ನು ಕಾಣಬೇಕು ಎಂದು ಹೇಳಿದ ಪೇಜಾವರ ಶ್ರೀಗಳು, ಈ ನಿಟ್ಟಿನಲ್ಲಿ ಶ್ರೀನಿವಾಸ ದೇವಸ್ಥಾನ ಸೇವಾ ಸಮಿತಿಯ ಸಾಮಾಜಿಕ ಕಾರ್ಯ ಶ್ಲಾಘನೀಯ. ಹೊಸ ಡಯಾಗ್ನಾಸಿcಕ್ ಸೆಂಟರ್‌ನಲ್ಲಿ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ತಪಾಸಣೆ ಲಭ್ಯವಿದ್ದು, ಇದರ ಸದುಪಯೋಗ ಪಡೆಯುವಂತೆ ಜನರಲ್ಲಿ ಮನವಿ ಮಾಡಿದರು.
ಮೈಕ್ರೋ ಬಯೋಲಾಜಿಕಲ್ ಲ್ಯಾಬೋರೇಟರಿ ಸಂಸ್ಥಾಪಕ ಎಂ.ಮಣಿ ಮಾತನಾಡಿ, ಸಮಾಜದ ಕಡು ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ಈ ಡಯಾಗ್ನಾಸ್ಟಿಕ್ ಸೆಂಟರ್ ಸ್ಥಾಪಿಸಲಾಗಿದೆ. ಆಧುನಿಕ ಗುಣಮಟ್ಟದ ಪರೀಕ್ಷೆಗಳನ್ನ ಇಲ್ಲಿ ಕಡಿಮೆ ದರದಲ್ಲಿ ಜನರಿಗೆ ನೀಡಲಾಗುವುದು ಎಂದರು.
ನೂತನ ಆರೋಗ್ಯ ತಪಾಸಣಾ ಕೇಂದ್ರದ ಉದ್ಘಾಟನೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸಂಜೆ 5ರವರೆಗೆ ಸಾರ್ವಜನಿಕರ ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಬೆಂಗಳೂರು ನಿರ್ದೇಶಕ ನಾಗೇಶ್ ಬಿಜಾಪುರ್, ರೋಟರಿ ಬೆಂಗಳೂರು ಅಧ್ಯಕ್ಷ ಎಸ್.ಬಿ.ಉದಯ ಕುಮಾರ್, ಕಾರ್ಯದರ್ಶಿ ಎಚ್.ಸಿ.ಶಿವಕುಮಾರ್, ಶ್ರೀನಿವಾಸ ದೇವಸ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ಸಿ.ಡಿ.ಕೆಂಪರಾಜ್ ಮತ್ತಿತರರು ಉಪಸ್ಥಿತರಿದ್ದರು.