Advertisement

1200ಕ್ಕೂ ಹೆಚ್ಚು ನೌಕರರಿಂದ ರಕ್ತದಾನ

05:16 PM Oct 04, 2018 | Team Udayavani |

ಬಳ್ಳಾರಿ: ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಬೇಕು. ಹಿಂದಿನ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ಸದಸ್ಯರು ನಗರದ
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ “ರಕ್ತಕೊಟ್ಟೇವು ಪಿಂಚಣಿ- ಬಿಡೆವು, ನಿಶ್ಚಿತ ಪಿಂಚಣಿ ನಮ್ಮ ಹಕ್ಕು ಎಂದು’ ಬುಧವಾರ ರಕ್ತದಾನ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

Advertisement

ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘವು ಕಳೆದ ನಾಲ್ಕು ವರ್ಷಗಳಿಂದ ಯೋಜನೆಯ ಕರಾಳತೆಯ ಬಗ್ಗೆ
ನೌಕರರಲ್ಲಿ ಜಾಗೃತಿ ಮೂಡಿಸುತ್ತಿವೆ. ಜತೆಗೆ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ನಡೆಸಲಾಗಿದೆ. ಪ್ರಧಾನಮಂತ್ರಿ, ಮುಖ್ಯಮಂತ್ರಿ, ಶಾಸಕರು, ಸಂಸದರಿಗೆ ಮನವಿ ಸಲ್ಲಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಅಲ್ಲದೇ, ನಿಶ್ಚಿತ ಪಿಂಚಣಿ ನಮ್ಮ ಹಕ್ಕು ದಿನ, ಕರಾಳ ದಿನಾಚರಣೆ, ಪ್ರತಿಭಟನೆ, ಸಭೆ ಮತ್ತು ರ್ಯಾಲಿಗಳನ್ನು ಹಮ್ಮಿಕೊಳ್ಳುವ ಮೂಲಕ ಎನ್‌ಪಿಎಸ್‌ ಪದ್ಧತಿ ರದ್ದುಪಡಿಸುವಂತೆ ರಾಜ್ಯ ಸರ್ಕಾರದ ಮೇಲೆ ಹಲವು ಬಾರಿ ಒತ್ತಡ ಹೇರಲಾಗಿದೆ. ಆದರೂ, ರಾಜ್ಯ ಸರ್ಕಾರ ಎನ್‌ಪಿಎಸ್‌ ನೌಕರರನ್ನು ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಪ್ರತಿಭಟನಾರರು ಆರೋಪಿಸಿದರು.

ಶಾಸಕ ಜಿ.ಸೋಮಶೇಖರರೆಡ್ಡಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನೌಕರರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ
ಮಾತನಾಡಿದ ಅವರು, ನೌಕರರ ವೇತನದ ಹಣವನ್ನು ಷೇರು ಮಾರುಕಟ್ಟೆಗೆ ಹಾಕುವ ಮೂಲಕ ರಾಜ್ಯ ಸರ್ಕಾರ ನಾಮ ಹಚ್ಚುವ ಹುನ್ನಾರ ನಡೆಸಿದೆ. ನೌಕರರಿಗೆ ಮುಪ್ಪಿನಲ್ಲಿ ಅನುಕೂಲವಾಗಲೆಂದೇ ಪಿಂಚಣಿ ಸೌಲಭ್ಯ ಜಾರಿಗೆ ತರಲಾಗಿತ್ತು. ಆದರೆ, ಹಿಂದಿನ ನಿಶ್ಚಿತ ಪಿಂಚಣಿ ಸೌಲಭ್ಯ ರದ್ದುಗೊಳಿಸಿದ ರಾಜ್ಯ ಸರ್ಕಾರ, ನೌಕರರ ವೇತನದಲ್ಲೇ
ಕಡಿತಗೊಳಿಸಿದ ಹಣವನ್ನು ಷೇರು ಮಾರುಕಟ್ಟೆಗೆ ಹಾಕಲು ಹೊರಟಿದ್ದು, ನೌಕರರ ಹೊಟ್ಟೆ ಮೇಲೆ ಒಡೆಯುತ್ತಿದೆ. ಸರಕಾರಕ್ಕೆ ಏನು ಕಡಿಮೆಯಾಗಿದೆ? ಎಂದು ಪ್ರಶ್ನಿಸಿದ ಸೋಮಶೇಖರರೆಡ್ಡಿ, ಇಂತಹ ದುಃಸಾಹಸಕ್ಕೆ ಕೈ ಹಾಕಬಾರದು. ಸರ್ಕಾರ ಯಾವುದಾದರೂ ಸರಿ, ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಬಿಜೆಪಿ ಸರ್ಕಾರ ಇದ್ದಿದ್ದರೆ 15 ದಿನಗಳಲ್ಲಿ ಯೋಜನೆ ಜಾರಿಯಾಗುತ್ತಿತ್ತು ಎಂದು ತಿಳಿಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎನ್‌ಜಿಒ ಕಚೇರಿ ಬಳಿ ಡ್ಯಾಪ್ಕೊ ಸಹಯೋಗದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಕಮ್ಮರಚೇಡು ಮಠದ  ಲ್ಯಾಣಸ್ವಾಮಿಗಳು ಚಾಲನೆ ನೀಡಿ ಮಾತನಾಡಿದರು.

ಎನ್‌ಪಿಎಸ್‌ ಸಂಘದ ಜಿಲ್ಲಾಧ್ಯಕ್ಷ ಜಿ.ವೈ.ತಿಪ್ಪಾರೆಡ್ಡಿ ಮಾತನಾಡಿ, ನೂತನ ಪಿಂಚಣಿ ಯೋಜನೆ ವಿರೋಧಿಸಿ ಹಳೆಯ ಪಿಂಚಣಿ ಪದ್ಧತಿಯನ್ನೇ ಜಾರಿಗೊಳಿಸುವಂತೆ ಆಗ್ರಹಿಸಿ ರಕ್ತ ಕೊಟ್ಟೇವು ಪಿಂಚಣಿ ಬಿಡೇವು ಹೋರಾಟ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಯೊಂದಿಗೆ ರಕ್ತದಾನವೂ ನಡೆಯುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಹೋರಾಟಕ್ಕೆ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆಗಳನ್ನು ಬದಲಾಯಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ಸಂಘದ ಗೌರವ ಸಲಹೆಗಾರ ರಾಜಶೇಖರ್‌ ಗಾಣಿಗೇರ್‌, ಪಾಲಿಕೆ ಸದಸ್ಯರಾದ ಮಲ್ಲನಗೌಡ, ಶ್ರೀನಿವಾಸ್‌
ಮೋತ್ಕರ್‌, ಸಂಘದ ತಾಲೂಕು ಅಧ್ಯಕ್ಷ ಎನ್‌.ರಮೇಶ್‌, ಪ್ರಧಾನ ಕಾರ್ಯದರ್ಶಿ ಕೆ.ಹೊನ್ನೂರಸ್ವಾಮಿ, ಉಪಾಧ್ಯಕ್ಷ ಗಿರೀಶ್‌, ಹನುಮಂತಪ್ಪ, ಮುಖಂಡರಾದ ನಂದೀಶ್‌ಪುಂಡಿ, ಶಾಂತಮ್ಮ, ಬಸವರಾಜ್‌ ಸೇರಿದಂತೆ ನೂರಾರು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next