Advertisement

Udupi ಪ್ರಾಂಶುಪಾಲರ ಪ್ರಶಸ್ತಿಗೆ ತಡೆ: ಸಿಎಂ ಪ್ರತಿಕೃತಿ ದಹಿಸಿ ಬಿಜೆಪಿ ಪ್ರತಿಭಟನೆ

11:34 PM Sep 06, 2024 | Team Udayavani |

ಮಣಿಪಾಲ: ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಕೊಡಮಾಡುವ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಕುಂದಾಪುರ ಪ.ಪೂ. ಕಾಲೇಜಿನ ಪ್ರಾಂಶುಪಾಲರನ್ನು ಆಯ್ಕೆ ಮಾಡಿ, ಪ್ರಶಸ್ತಿ ಪ್ರದಾನಕ್ಕೆ ಕೆಲವು ಗಂಟೆಗಳ ಮೊದಲು ತಡೆ ಹಿಡಿದಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಜಿಲ್ಲಾ ಹಾಗೂ ವಿವಿಧ ಮೋರ್ಚಾಗಳ ವತಿಯಿಂದ ಮಣಿಪಾಲದ ಸಿಂಡಿಕೇಟ್‌ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ, ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲಕಾಲ ಈ ಪರಿಸರದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ಅನಂತರ ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.

ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ವಿದ್ಯೆ ಕಲಿಸಿದ ಗುರುಗಳಿಗೆ ಅಪಮಾನ ಮಾಡುವ ಸರಕಾರದಿಂದ ರಾಜ್ಯದ ಜನತೆ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸರಕಾರದಿಂದ ಆಗುವ ಅನ್ಯಾಯಗಳ ವಿರುದ್ಧ ಬಿಜೆಪಿ ಸಮರ್ಥ ಹೋರಾಟ ನೀಡಲಿದೆ. ಶಿಕ್ಷಕರಿಗೆ ನ್ಯಾಯ ದೊರಕುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.

ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಶಿಕ್ಷಕರಿಗೆ ಅವಮಾನ ಮಾಡಿ ಕಾಂಗ್ರೆಸ್‌ ದಾಖಲೆ ಸೃಷ್ಟಿಸಿದೆ. ಶಾಲಾ ಸಮವಸ್ತ್ರ ಹೊರತುಪಡಿಸಿ ಯಾವುದೇ ಧರ್ಮಕ್ಕೆ ಸಂಬಂಧಿಸಿ ವಸ್ತ್ರ, ಹಿಜಾಬ್‌ ಧರಿಸಬಾರದು ಎಂದು ಹೈಕೋರ್ಟ್‌ ಆದೇಶವನ್ನು ಅಂದಿನ ಸರಕಾರ ಪಾಲಿಸಿದೆ.

ಸರಕಾರದ ಆದೇಶವನ್ನು ಪ್ರಾಂಶುಪಾಲರು ಪಾಲಿಸಿದ್ದಾರೆ. ಈ ಘಟನೆಯನ್ನು ಇಟ್ಟುಕೊಂಡು ದ್ವೇಷ ಸಾಧಿಸುತ್ತಿರುವುದು ಅಕ್ಷಮ್ಯ ಎಂದರು.

Advertisement

ಶಾಸಕರಾದ ಕಿರಣ್‌ ಕೊಡ್ಗಿ, ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಸರಕಾರವೇ ಉತ್ತಮ ಶಿಕ್ಷಕ ಎಂಬ ಪ್ರಶಸ್ತಿ ಆಯ್ಕೆ ಮಾಡಿ, ಏಕಾಏಕಿ ಆದೇಶವನ್ನು ತಡೆ ಹಿಡಿದಿರುವುದು ಯಾಕೆ ಎಂದು ಉತ್ತರಿಸಬೇಕು. ಜಿಲ್ಲೆಯ ಐದು ಶಾಸಕರು ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದು, ಖುದ್ದು ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಲಿದ್ದೇವೆ ಎಂದರು.

ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ, ಪ್ರಮುಖರಾದ ಕಿರಣ್‌ ಕುಮಾರ್‌ ಬೈಲೂರು, ಪ್ರಭಾಕರ್‌ ಪೂಜಾರಿ, ರಜನಿ ಹೆಬ್ಟಾರ್‌, ಸಂಧ್ಯಾ ರಮೇಶ್‌, ವೀಣಾ ಶೆಟ್ಟಿ, ವಿಜಯ್‌ ಕೊಡವೂರು, ವಿಖ್ಯಾತ್‌ ಶೆಟ್ಟಿ, ಪೃಥ್ವಿರಾಜ್‌ ಶೆಟ್ಟಿ ಬಿಲ್ಲಾಡಿ, ಜಿತೇಂದ್ರ ಶೆಟ್ಟಿ, ಸುರೇಶ್‌ ಶೆಟ್ಟಿ ಗೋಪಾಡಿ, ರಾಜೇಶ್‌ ಕಾವೇರಿ, ಅಭಿರಾಜ್‌ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ಪ್ರಾಂಶುಪಾಲರಿಗೆ ಅವಮಾನ ಖಂಡನೀಯ
ಮಂಗಳೂರು: ಸಿದ್ದರಾಮಯ್ಯ ಅವರ ಸರಕಾರ ಒಬ್ಬ ಪ್ರಾಮಾಣಿಕ ಪ್ರಾಂಶುಪಾಲರಿಗೆ ಶಿಕ್ಷಕರ ದಿನಾಚರಣೆ ಯ ದಿನವೇ ಅವಮಾನ ಮಾಡುವ ಕೆಲಸ ಮಾಡಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಈ ನಿಲುವನ್ನು ಭಾರತೀಯ ಜನತಾ ಪಕ್ಷ ತೀವ್ರವಾಗಿ ಖಂಡಿಸುತ್ತದೆ.

ಗುರುಗಳಿಗೆ ಮಾಡಿದ ಅವಮಾನಕ್ಕೆ ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ. ಆದಷ್ಟು ಬೇಗ ತಮ್ಮ ತಪ್ಪನ್ನು ತಿದ್ದಿಕೊಂಡು ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಜಿ.ಬಿ.ಅವರಿಗೆ ಸಲ್ಲಬೇಕಾದ ಪ್ರಶಸ್ತಿ ಮತ್ತು ಗೌರವ ನೀಡಬೇಕು ಎಂದು ಬಿಜೆಪಿ ಯುವ ಮೋರ್ಚಾ ದ.ಕ. ಜಿಲ್ಲಾಧ್ಯಕ್ಷ ಉಳ್ಳಾಲ್‌ ನಂದನ್‌ ಮಲ್ಯ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next