ಇಸ್ಲಾಮಾಬಾದ್ : ಆಕ್ಷೇಪಾರ್ಹ, ಹಾನಿಕಾರಕ ಮತ್ತು ಸಾರ್ವಜನಿಕ ಸ್ವಾಸ್ಥ್ಯಕ್ಕೆ ಅಪಥ್ಯವೆನಿಸುವ ಹೂರಣಗಳನ್ನು ತಡೆಯದಿದ್ದರೆ ಪಾಕಿಸ್ಥಾನದಲ್ಲಿ ಟ್ಟಿಟರ್ ಮುಚ್ಚಲಾಗುವುದು ಎಂಬ ಖಡಕ್ ಎಚ್ಚರಿಕೆಯನ್ನು ಸರಕಾರ ಈ ಮೈಕ್ರೋ ಬ್ಲಾಗಿಂಗ್ ವೆಬ್ ಸೈಟಿಗೆ ನೀಡಿದೆ ಎಂದು ವರದಿಗಳು ಇಂದು ಗುರವಾರ ತಿಳಿಸಿವೆ.
ಸಾರ್ವಜನಿಕರು ಓದುದಕ್ಕೆ ತಕ್ಕುದಲ್ಲದ ಹೂರಣಗಳನ್ನು ತಡೆಯುವಂತೆ ಪಾಕ್ ಸರಕಾರ ಟ್ವಿಟರ್ ಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಡಾನ್ ದೈನಿಕ ವರದಿ ಮಾಡಿದೆ.
ಸಾರ್ವಜನಿಕರಿಗೆ ಅತ್ಯಂತ ಹಾನಿಕಾರವಾಗಿರುವ ಹೂರಣವನ್ನು ತಡೆಯುವಲ್ಲಿ ಟ್ವಿಟರ್ ವಿಫಲವಾಗಿದೆ ಎಂದು ಹೇಳಿರುವ ಪಾಕ್ ಸರಕಾರ, ಆ ಕಾರಣಕ್ಕೆ ಈ ಮೈಕ್ರೋ ಬ್ಲಾಗಿಂಗ್ ಸೈಟಿನ ಮೇಲೆ ತೀವ್ರ ನಿಗಾ ಇರಿಸಿದೆ.
ಫೇಸ್ ಬುಕ್ ಮತ್ತು ಯೂ ಟ್ಯೂಬ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳಿಗೆ ಕೂಡ ಇದೇ ರೀತಿಯ ಎಚ್ಚರಿಕೆಯನ್ನು ನೀಡಲಾಗಿದ್ದು ಅವುಗಳು ಧನಾತ್ಮಕವಾಗಿ ಸ್ಪಂದಿಸಿವೆ ಎಂದು ಪಾಕಿಸ್ಥಾನದ ದೂರಸಂಪರ್ಕ ಪ್ರಾಧಿಕಾರ ಸಂಪುಟ ಸಚಿವಾಲಯದ ಸೆನೆಟ್ ಸ್ಥಾಯೀ ಸಮಿತಿಗೆ ನಿನ್ನೆ ಬುಧವಾರ ಹೇಳಿದೆ.
ಆದರೆ ನಮ್ಮ ಸೂಚನೆಯನ್ನು ಟ್ವಿಟರ್ ಮನ್ನಿಸಿಲ್ಲ ಮತ್ತು ಸರಕಾರ ಪದೇ ಪದೇ ಎಚ್ಚರಿಕೆ ನೀಡಿದ ಹೊರತಾಗಿಯೂ ಅದು ಆಕ್ಷೇಪಾರ್ಹ, ಹಾನಿಕಾರಕ, ಸಾರ್ವಜನಿಕ ಸ್ವಾಸ್ಥ್ಯಕ್ಕೆ ಅಪಥ್ಯವೆನಿಸುವ ಹೂರಣಗಳನ್ನು ತಡೆಯುವಲ್ಲಿ ಅದು ವಿಫಲವಾಗಿದೆ ಎಂದು ಪ್ರಾಧಿಕಾರ ಸ್ಥಾಯೀ ಸಮಿತಿಗೆ ಹೇಳಿದೆ.