Advertisement

“ಅಂಧ’ಚೆಂದದ ಹಾಡು

04:20 PM Mar 08, 2018 | Team Udayavani |

ಅಲ್ಲಿ ಯಾರಿಗೂ ಕಣ್ಣಿಲ್ಲ. ಸ್ವರಸಾಗರದಲ್ಲಿ ಮಿಂದೇಳಲು ಕಣ್ಣು ಬೇಕಂತಲೂ ಇಲ್ಲ. ರಾಗಗಳಲ್ಲಿಯೇ ಜಗವ ತೋರಿಸುವ ಜಾದೂ ಕಲೆ ಅದು ಎನ್ನುವುದನ್ನು ಬಲ್ಲವರು ರಾಧಿಕಾ ಆರ್‌.ಕಾಂತನವರ್‌. ರಾಯಚೂರಿನ ಮಾಣಿಕ್‌ ಪ್ರಭು ಅಂಧಮಕ್ಕಳ ಶಾಲೆಗೆ ಹೋದರೆ ಅಲ್ಲಿವರು, ಲೋಕ ನೋಡದ ಜೀವಗಳೆದುರು ರಾಗಾಲಾಪದಲ್ಲಿ ತಲ್ಲೀನರು.

Advertisement

ಸತತ 17 ವರ್ಷಗಳಿಂದ ಅಂಧ ಮಕ್ಕಳಿಗೆ ಉಚಿತ ಸಂಗೀತ ಕಲಿಸುತ್ತಿದ್ದಾರೆ, ರಾಧಿಕಾ. ಕೀಲುನೋವಿನಿಂದ ಹಾಸಿಗೆ ಹಿಡಿದು, ಖನ್ನತೆಗೆ ಜಾರಿದ್ದ ಇವರನ್ನು ಮತ್ತೆ ಚೈತನ್ಯಶೀಲರನ್ನಾಗಿಸಿದ್ದು ಕೂಡ ಇದೇ ಸಂಗೀತವೇ. ತಮ್ಮಿಂದ ಏನೂ ಸಾಧಿಸಲಾಗದು ಎಂದು ಕೈಕಟ್ಟಿ ಕುಳಿತಾಗ, ಪತಿ ರಾಘವೇಂದ್ರ ವಿ. ಕಾಂತನವರ್‌, “ಅಸಹಾಯಕ ಸ್ಥಿತಿಯಲ್ಲೂ ನೀನು ಸಾಧಿಸಬಲ್ಲೆ’ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದೇ, ಇವರ ಬದುಕಿನ ಟರ್ನಿಂಗ್‌ ಪಾಯಿಂಟ್‌. ಮನೆಯಲ್ಲಿನ ಸಂಗೀತದ ವಾತಾವರಣ ಅವರ ಕೈಹಿಡಿಯಿತು. ಮೂಲತಃ ಹುಬ್ಬಳ್ಳಿಯ ರಾಧಿಕಾ, ಹಿಂದೂಸ್ಥಾನಿ ಸಂಗೀತದಲ್ಲಿ ವಿದ್ವತ್‌ ಸಾಧಿಸಿದಾಕೆ. ಅಂಧ ಮಕ್ಕಳಿಗೆ ನಯಾಪೈಸೆ ಗುರುದಕ್ಷಿಣೆ ಪಡೆಯದೇ, ಸಂಗೀತ ಹೇಳಲು ನಿರ್ಧರಿಸಿಬಿಟ್ಟರು.

ಅಂದಹಾಗೆ, ರಾಧಿಕಾ ದಂಪತಿ ತಮಗೆ ಮಕ್ಕಳೇ ಬೇಡವೆಂದು, ಈ ಅಂಧಮಕ್ಕಳನ್ನೇ ಸ್ವಂತ ಮಕ್ಕಳಂತೆ ಕಾಣುತ್ತಿದ್ದಾರೆ. ಸಂಗೀತದಲ್ಲಿ ವಿದ್ವತ್‌ ಪಡೆದ ರಾಧಿ ಕಾ ಅವರು ದೊಡ್ಡ ಸಂಗೀತ ಸಾಧಕಿಯಾಗುವ ಕನಸು ಹೊತ್ತಿದ್ದರು. ಅವರ ಕನಸನ್ನು ಅವರ ಶಿಷ್ಯರು ಈಡೇರಿಸುವ ಹಾದಿಯಲ್ಲಿದ್ದಾರೆ. 22 ಅಂಧ ಮಕ್ಕಳು ಜ್ಯೂನಿಯರ್‌ ಪರೀಕ್ಷೆ ಪಾಸಾದರೆ, ಒಬ್ಬ ವಿದ್ಯಾರ್ಥಿ ಸೀನಿಯರ್‌ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದಾನೆ.

– ಸಿದ್ಧಯ್ಯಸ್ವಾಮಿ ಕುಕನೂರು, ರಾಯಚೂರು

Advertisement

Udayavani is now on Telegram. Click here to join our channel and stay updated with the latest news.

Next