Advertisement

Sports: ಬಾಳೂರು: ಅಂಧ ಕ್ರೀಡಾಪಟು ರಕ್ಷಿತಾರಾಜುಗೆ ಸ್ವಗ್ರಾಮದಲ್ಲಿ ಭವ್ಯ ಸ್ವಾಗತ, ಸನ್ಮಾನ

09:47 AM Nov 21, 2023 | Team Udayavani |

ಕೊಟ್ಟಿಗೆಹಾರ: ಬಾಳೂರಿನ ಗುಡ್ನಳ್ಳಿಯ ಅಂಧ ಕ್ರೀಡಾಪಟು ರಕ್ಷಿತಾರಾಜುಗೆ ಸನ್ಮಾನ, ಪ್ರೋತ್ಸಾಹಗಳೇ ಚಿನ್ನ ಗೆಲ್ಲಲು ಸಾಧ್ಯವಾಯಿತು ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

Advertisement

ಅವರು ಬಾಳೂರಿನ ನಾಗರೀಕರ ವೇದಿಕೆ, ಬಾಳೂರು ಗ್ರಾ.ಪಂ ಹಾಗೂ ಗ್ರಾಮಸ್ಥರ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಗುರಿ ಮುಟ್ಟಲು ಗುರುವಿನ ಪಾತ್ರ ಮುಖ್ಯವಾಗಿದ್ದು, ಅದನ್ನು ಅವರ ಕೋಚ್ ರಾಹುಲ್ ಬಾಲಕೃಷ್ಣ ಅವರ ಪರಿಶ್ರಮದಿಂದ ಇವೆಲ್ಲವೂ ಸಹಕಾರಿಯಾಗಿದೆ. ಅದರಲ್ಲೂ ಜನರ ಪ್ರೋತ್ಸಾಹದ ಸನ್ಮಾನ, ಆರ್ಥಿಕ ಸಹಕಾರ ಎರವಲು ಮಾರ್ಗದರ್ಶನ ದೊರೆತರೆ ಕ್ರೀಡಾಪ್ರತಿಭೆಗಳಿಗೆ ಸಾಧನೆ ಮಾಡಲು ಮತ್ತಷ್ಟು ಪ್ರೋತ್ಸಾಹ ದೊರೆತಂತಾಗುತ್ತದೆ. ನಾವು ಸಮಾಜದಲ್ಲಿ ಜೀವಿಸುವಾಗ ಸ್ವಾರ್ಥತೆಯಿಂದ ಬದುಕದೇ ನಿಸ್ವಾರ್ಥತೆಯಿಂದ ಛಲದಿಂದ ಬದುಕಬೇಕು’ ಎಂದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ ‘ಗ್ರಾಮೀಣ ಪ್ರತಿಭೆಯೋರ್ವರು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದು  ಸಾಧನೆ ಮಾಡಿರುವುದು ಸುಲಭದ ಮಾತಲ್ಲ. ದೇಶಕ್ಕೆ ಕೀರ್ತಿ ತಂದ ಗ್ರಾಮೀಣ ಪ್ರತಿಭೆಯ ಸಾಧನೆ ಮಲೆನಾಡಿಗೆ ಹೆಮ್ಮೆ ತಂದಂತಾಗಿದೆ. ಪ್ರತಿಭೆ ಇದ್ದವರಿಗೆ ಮಾತ್ರ ನಾವು ಬೆನ್ನು ತಟ್ಟಿದರೆ ಸಾಲದು. ಎಲ್ಲರಿಗೂ ಪ್ರತಿಭೆ ಇರುತ್ತದೆ. ಅದನ್ನು ಪ್ರೋತ್ಸಾಹ ಎಂಬ ನೀರೆರೆದರೆ ಮಾತ್ರ ಅವರೂ ಸಾಧನೆ ಮಾಡಲು ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಎಲ್ಲರಿಗೂ ರಕ್ಷಿತಾ ಅವರ ಸಾಧನೆ  ಮಾದರಿಯಾಗಿದೆ ಎಂದರು.

ನಮ್ಮಲ್ಲಿ ಎಲ್ಲವೂ ಸರಿ ಇದ್ದರೂ ಸಾಧಿಸಲು ಹಿಂಜರಿಯುತ್ತೇವೆ. ಹಿಂಜರಿಕೆಯ ಮನೋಭಾವ ಬಿಟ್ಟು ಅಂಧತ್ವ ಹೊಂದಿದ ರಕ್ಷಿತಾರ ಆತ್ಮವಿಶ್ವಾಸ ಮೈಗೂಡಿಸಿ ತಂದೆ-ತಾಯಿ ಇಲ್ಲದ ಅಬಲೆಯಾದರೂ ಮಾತನಾಡಲು ಬರದ ಅಜ್ಜಿ ಲಲಿತಮ್ಮ ಅವರ ಪ್ರೋತ್ಸಾಹ ರಕ್ಷಿತಾಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗೆಲ್ಲಲು ಸಹಕಾರಿಯಾಗಿದೆ. ಪೋಷಕರು ಇವರ ಮಾರ್ಗದರ್ಶನ ತಮ್ಮಲ್ಲಿ ಅಳವಡಿಸಿಕೊಂಡು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸ ಬೇಕು’ಎಂದು ಹೇಳಿದರು.

Advertisement

ನಾಗರೀಕರ ವೇದಿಕೆಯ ಅಧ್ಯಕ್ಷ ಸೋಮೇಶ್ ಮರ್ಕಲ್ ಮಾತನಾಡಿ, ಅಂಗವಿಕಲೆ ರಕ್ಷಿತಾರಾಜು ಅವರ ಚಿನ್ನದ ಸಾಧನೆ ದೇಶಕ್ಕೆ ಮಾದರಿಯಾಗಿದೆ. ಅದರಲ್ಲೂ ಕಾಫಿನಾಡಿನ ಪ್ರತಿಭೆ ಚಿನ್ನದ ಪದಕ ಪಡೆದಿರುವುದು ಬಾಳೂರು ಗ್ರಾಮವನ್ನು ದೇಶದಲ್ಲೇ ಗುರುತಿಸುವಂತೆ ಮಾಡಿದೆ. ಇದು ನಮ್ಮ ಭಾಗ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ  ಬಾಳೂರು, ಗ್ರಾ.ಪಂ.ಅಧ್ಯಕ್ಷ ಬಿ.ಬಿ.ಮಂಜುನಾಥ್, ಸತೀಶ್ ಬಾಳೂರು, ಪಿಎಸ್ಐ ವಿ.ಶ್ರೀನಾಥ್ ರೆಡ್ಡಿ, ಕೆ.ಸಿ.ಮಹೇಂದ್ರ, ಮನೋಜ್  ಮಾತನಾಡಿದರು.

ಚಿನ್ನ ಪಡೆದ ಪ್ರತಿಭೆಗಳಾದ ರಕ್ಷಿತಾರಾಜು, ಕೋಚ್ ರಾಹುಲ್, ರಾಧಾ ವೆಂಕಟೇಶ್  ಅವರನ್ನು ಪ್ರಮುಖವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ವಾಟೇಕಾನ್, ಬಾಳೂರು ಹೊರಟ್ಟಿ ಸರ್ಕಾರಿ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸ್ಥಳೀಯ ಕ್ರೀಡಾಪಟುಗಳಾದ ಧೀಮಂತ್, ಹರ್ಷ, ತರುಣ್, ಅಪ್ಸರ, ಅರ್ಪಿತ, ಅಂಕಿತ, ಹೃತ್ವರಿತೋಷ್, ನಿಶ್ಮಿತಾ, ಶಿಕ್ಷಕಿಯರಾದ ಸಿಂತಿಯಾ ಪಾಯ್ಸ್, ಮಾರ್ಗರೇಟ್ ಡಿಸೋಜ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಸ್ಮರಣಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಗಣ್ಯರಾದ ಎಂ.ಪಿ.ಪ್ರದೀಪ್, ಧೀರಜ್ ಪ್ರಭು, ಅಶೋಕ್ ಬಿಳಗಲಿ, ಬಿ.ಜಿ.ಶ್ರೀನಾಥ್, ಎಂ.ಎಲ್.ವಿಜೇಂದ್ರ, ಶಿವಶರಣ್, ರಮೇಶ್ ಕೆಳಗೂರು, ರಘುಪತಿ, ಜಯಶ್ರೀ ರಮೇಶ್, ಕೆ.ಆರ್.ಗೀತಾ, ಪರೀಕ್ಷಿತ್ ಜಾವಳಿ, ಗುಲಾಬಿ, ಡಿ.ಟಿ.ಉಮೇಶ್, ಸುರೇಶ್ ಗೌಡ, ಡಿ.ವೈ.ಮಹೇಶ್, ಪ್ರಮೀಳ ಮಂಜಯ್ಯ, ಬಿ.ಎಂ.ಪ್ರಕಾಶ್, ಬಿ.ಎಸ್. ಲಕ್ಷ್ಮಣ್, ಟಿ.ಎಂ.ಆದರ್ಶ್ ಮತ್ತಿತರರು ಇದ್ದರು. ಮನೋಜ್ ಸ್ವಾಗತಿಸಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next