Advertisement

ರಾಜ್ಯದಲ್ಲಿ ಅಂಧಾ ದರ್ಬಾರ್‌: ಶ್ರೀರಾಮುಲು

12:32 PM Dec 05, 2017 | Team Udayavani |

ಬಸವಕಲ್ಯಾಣ: ರಾಜ್ಯದಲ್ಲಿ ರೈತರು ಕಷ್ಟದಲ್ಲಿದ್ದಾರೆ. ಯುವಕರು ನಿರುದ್ಯೋಗಿಗಳಾಗಿದ್ದಾರೆ. ಜನರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರಕ್ಕೆಕಣ್ಣು ಕಾಣಿಸುತ್ತಿಲ್ಲ, ಕಿವಿ ಕೇಳುತ್ತಿಲ್ಲ. ಬಾಯಿ ಮಾತನಾಡುತ್ತಿಲ್ಲ. ಇದೊಂದು ಅಂಧಾ ದರ್ಬಾರ್‌ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಂಸದ ಬಿ. ಶ್ರೀರಾಮುಲು ವಾಗ್ಧಾಳಿ ನಡೆಸಿದರು.

Advertisement

ನಗರದ ಅಕ್ಕ ಮಹಾದೇವಿ ಕಾಲೇಜು ಮೈದಾನದಲ್ಲಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ
ನಿಮಿತ್ತ ಬಿಜೆಪಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದ್ದ ಸರ್ಕಾರ ಜಾತಿ, ಧರ್ಮಗಳ ಮಧ್ಯೆ ಗೊಂದಲ ಸೃಷ್ಟಿಸುವ ಮೂಲಕ ಒಡೆದಾಳು ನೀತಿ ಅನುಸರಿಸುತ್ತಿದೆ ಎಂದರು. 

ರಾಜ್ಯ ಕಾಂಗ್ರೆಸ್‌ ಸರ್ಕಾರದ ಹಲವು ಸಚಿವರು ಭ್ರಷ್ಟಾಚಾರದ ಹಗರಣಗಳಲ್ಲಿ ಸಿಲುಕಿದ್ದಾರೆ. ಸಚಿವ ಜಾರ್ಜ್‌,
ಅಂಜನೇಯ ಅನೇಕ ಹಗರಣಗಳಲ್ಲಿ ಸಿಲುಕಿದ್ದಾರೆ. ಆದರೆ ಅವರಿಂದ ರಾಜೀನಾಮೆ ಪಡೆಯುತ್ತಿಲ್ಲ. ನೀರಾವರಿ
ಮಂತ್ರಿ ಕಳಪೆ ಕಾಮಗಾರಿ ಮಾಡಿ, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರಾಜ್ಯದ ಸಂಪತ್ತು ಲೂಟಿ ಹೊಡೆಯಲಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಭ್ರಷ್ಟರನ್ನು ಜೈಲಿಗೆ ಕಳಿಸಲಾಗುವುದು ಎಂದು ಹೇಳಿದರು.

ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಸ್ವತಂತ್ರ ಭಾರತದ 69 ವರ್ಷಗಳಲ್ಲಿ 57 ವರ್ಷ
ಕಾಂಗ್ರೆಸ್‌ ಸರ್ಕಾರವೇ ಆಡಳಿತ ನಡೆಸಿದೆ. ಆದರೆ ದೇಶ ಮಾತ್ರ ಅಭಿವೃದ್ಧಿ ಕಂಡಿಲ್ಲ. ದಲಿತರನ್ನು ಓಟ್‌ ಬ್ಯಾಂಕ್‌
ಆಗಿ ಮಾಡಿಕೊಂಡ ಕಾಂಗ್ರೆಸ್‌ ಪಕ್ಷವೇ ಡಾ| ಬಾಬಾ ಸಾಹೇಬ ಅಂಬೇಡ್ಕರ್‌ ಅವರನ್ನು ಹಿಂದೆ ಚುನಾವಣೆಯಲ್ಲಿ ಸೋಲಿಸಿತ್ತು. ಇಂಥ ಪಕ್ಷದಲ್ಲಿ ದಲಿತ ನಾಯಕರೆಂದು ಹೇಳಿಕೊಳ್ಳುವ ಮಲ್ಲಿಕಾರ್ಜುನ ಖರ್ಗೆ ಅವರು ಹೇಗೆ
ಇದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ.

ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ ಕಾಂಗ್ರೆಸ್‌ ಪಕ್ಷದಲ್ಲಿ ದಲಿತರು ಇರಬಾರದು. ಖರ್ಗೆ ಅವರಿಗೇನಾದರೂ
ಸ್ವಾಭಿಮಾನ ಇದ್ದಲ್ಲಿ ತಕ್ಷಣವೇ ಕಾಂಗ್ರೆಸ್‌ ನಿಂದ ಹೊರ ಬರಲಿ ಎಂದರು. 

Advertisement

ದೇಶದ 20 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಬರುವ 2018ರ ಚುನಾವಣೆಯಲ್ಲಿ ಕರ್ನಾಟಕ ಕಾಂಗ್ರೆಸ್‌ ಮುಕ್ತವಾಗಲಿದೆ. ಬಿ.ಎಸ್‌. ಯಡಿಯೂರಪ್ಪನವರು ಮುಂದಿನ ಮುಖ್ಯಮಂತ್ರಿ ಆಗುವುದು ಸೂರ್ಯ ಚಂದ್ರರು ಇರುವಷ್ಟೇ ಸತ್ಯ ಎಂದರು.

ಸಂದಸ ಭಗವಂತ ಖೂಬಾ ಮಾತನಾಡಿ, ಬಿ.ಎಸ್‌. ಯಡಿಯೂರಪ್ಪನವರು ಹಿಂದೆ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಜನಪರ ಯೋಜನೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಯೋಜನೆಗಳನ್ನು ಮನೆ-ಮನೆಗೆ ಮುಟ್ಟಿಸುವ ಕೆಲಸ ಕಾರ್ಯಕರ್ತರಿಂದ ಪರಿಣಾಮಕಾರಿಯಾಗಿ ನಡೆಯಬೇಕು ಎಂದರು.

ಶಾಸಕರಾದ ಪ್ರಭು ಚವ್ಹಾಣ, ರಘುನಾಥ ಮಲ್ಕಾಪುರೆ, ಮಾಜಿ ಸಚಿವರಾದ ಬಸವರಾಜ ಪಾಟೀಲ್‌ ಅಟ್ಟೂರ್‌, ಅರವಿಂದ ಲಿಂಬಾವಳಿ, ರೇವುನಾಯಕ ಬೆಳಮಗಿ, ಬಾಬುರಾವ್‌ ಚವ್ಹಾಣ, ಮಾಜಿ ಶಾಸಕರಾದ ಮಾಜಿ ಶಾಸಕ
ಎಂ.ಜಿ. ಮುಳೆ, ರಾಜೇಂದ್ರ ವರ್ಮಾ, ಸುಭಾಷ ಕಲ್ಲೂರ, ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಪಕ್ಷದ
ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಮುಖಂಡರಾದ ಸಂಜಯ ಪಟವಾರಿ, ಸುನೀಲ ಪಾಟೀಲ, ಲಿಂಗರಾಜ ಪಾಟೀಲ ಅಟ್ಟೂರ, ಅನೀಲ ಭೂಸಾರೆ, ಪ್ರದೀಪ ವಾತಾಡೆ, ಶಕುಂತಲಾ ಹೊಳಕೂಂದೆ, ವಿಜಯಕುಮಾರ ಮಂಠಾಳೆ, ಸೂರ್ಯಕಾಂತ ನಾಗಮಾರಪಳ್ಳಿ, ಈಶ್ವರಸಿಂಗ ಠಾಕೂರ, ಶಿವಪುತ್ರ ಗೌರ, ರವಿ ಚಂದನಕೆರೆ, ಸೂರ್ಯಕಾಂತ ಚಿಲ್ಲಾಬಟ್ಟೆ, ಅರವಿಂದ ಮುತ್ತೆ, ದೀಪಕ ಗಾಯಕವಾಡ, ಸುಧೀರ ಕಾಡಾದಿ, ಗುಂಡುರೆಡ್ಡಿ, ಅಣ್ಣಾರಾವ್‌ ರಾಠೊಡ, ರಾಜಕುಮಾರ ಸಿರಗಾಪೂರ, ಜಗನ್ನಾಥ ಚಿಲ್ಲಾಬಟ್ಟೆ, ರವಿ ಕೊಳಕೂರ, ರಮೇಶ ಧಬಾಲೆ, ಅಮಿರೋದ್ದಿನ್‌, ದಿಗಂಬರ ಜಲೆ, ವಿಜಯಲಕ್ಷ್ಮೀ ಹೂಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ತಾಲೂಕು ಅಧ್ಯಕ್ಷ ಶಂಕರ ನಾಗದೆ ಸ್ವಾಗತಿಸಿದರು. ಬಸವರಾಜ ಸ್ವಾಮಿ ನಿರೂಪಿಸಿದರು. 

ಕೃಷ್ಣಾ ಗೋಣೆ ವಂದಿಸಿದರು. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಕಾರ್ಯಕರ್ತರು
ಭಾಗವಹಿಸಿದ್ದರು. ರ್ಯಾಲಿಗೂ ಮುನ್ನ ತಾಲೂಕಿಗೆ ಪ್ರವೇಶಿಸಿದ ಬಿ.ಎಸ್‌. ಯಡಿಯೂರಪ್ಪ ಅವರನ್ನು ಕಲಖೋರಾ ಗ್ರಾಮದ ಬಳಿ ಸ್ವಾಗತಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next