Advertisement

ನನ್ನ ಗೆಲುವಿಗೆ ಶಾಸಕ ಮುನಿಯಪ್ಪ ಆಶೀರ್ವಾದ

09:54 PM Aug 20, 2019 | Team Udayavani |

ಶಿಡ್ಲಘಟ್ಟ: ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿರುವ ಎಸ್‌.ಮುನಿಸ್ವಾಮಿ ಅವರು ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಗ್ರಾಮದಲ್ಲಿ ನಾಡ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದರು.

Advertisement

ಸಂಸದ ಎಸ್‌.ಮುನಿಸ್ವಾಮಿ ಚುನಾಯಿತರಾದ ಬಳಿಕ ಇದೇ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೋಲಾರ ಲೋಕಸಭಾ ಕ್ಷೇತ್ರದ ಜನರ ಮತ್ತು ಅಪ್ಪಾಜೀ( ಶಾಸಕ ವಿ.ಮುನಿಯಪ್ಪ) ಅವರ ಆಶೀರ್ವಾದ ಮತ್ತು ನೆರಳಿನಲ್ಲಿ ಸಂಸದನಾಗಿ ಆಯ್ಕೆಯಾಗಿದ್ದಾನೆ ಎಂದು ಹೇಳುವ ಮೂಲಕ ಸಭಿಕರನ್ನು ಕೆಲಕಾಲ ನಿಶ್ಯದ್ಧವಾಗುವಂತೆ ಮಾಡಿದರು.

ರಾಜಕೀಯವಾಗಿ ನಾವು ಬೇರೆ ಬೇರೆ ಪಕ್ಷಗಳೊಂದಿಗೆ ಗುರುತಿಸಿಕೊಂಡರೂ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡದೆ ಜಿಲ್ಲೆಗೆ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಶ್ರಮಿಸುವುದಾಗಿ ಹೇಳಿದರು.

ಶಾಶ್ವತ ಅಭಿವೃದ್ಧಿ ಕಾಮಗಾರಿ: ಅಧಿಕಾರ ಶಾಶ್ವತವಲ್ಲ ಜನರ ವಿಶ್ವಾಸವನ್ನು ಗಳಿಸುವ ಕೆಲಸ ಮಾಡುತ್ತೇನೆ. ಹಿರಿಯ ಶಾಸಕರ ಮಾರ್ಗದರ್ಶನದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳ ಅನುದಾನ ಪಡೆದು ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದಾಗಿ ಭರವಸೆ ನೀಡಿದರು.

ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಕಾಮಗಾರಿಗಳಿಗೆ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಅನುದಾನ ನೀಡುವುದನ್ನು ನಿಲ್ಲಿಸಿ ಪ್ರತಿಯೊಂದು ತಾಲೂಕಿನಲ್ಲಿ ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡಲು ಆದ್ಯತೆ ನೀಡಿ 50 ಲಕ್ಷ ರೂ. ಅಥವಾ ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ಅಗತ್ಯ ಕಾಮಗಾರಿ ನಡೆಸುವುದಾಗಿ ಹೇಳಿದರು.

Advertisement

ಸಹಾಯ ಮಾಡಿಲ್ಲ: ಶಾಸಕ ವಿ.ಮುನಿಯಪ್ಪ ಮಾತನಾಡಿ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಎಸ್‌.ಮುನಿಸ್ವಾಮಿ ಸಂಸದರಾಗಲು ಜನ ಆಶೀರ್ವಾದ ಮಾಡಿದ್ದಾರೆ. ಈ ವಿಚಾರದಲ್ಲಿ ನಾವೇನು ಸಹಾಯ ಮಾಡಿಲ್ಲವೆಂದು ವೇದಿಕೆಯಲ್ಲಿ ಸ್ಪಷ್ಟಪಡಿಸಿದರಲ್ಲದೆ ಕೇವಲ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮುನಿಸ್ವಾಮಿ ಮಾತ್ರವಲ್ಲದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಹ ಸಂಸದರಾಗಿ ಪ್ರಧಾನಮಂತ್ರಿಯಾಗಿದ್ದಾರೆ.

ಕರ್ನಾಟಕ ಮಾತ್ರವಲ್ಲ ದೇಶಾದ್ಯಂತ ಬಿಜೆಪಿಗೆ ಮತದಾರರು ಆಶೀರ್ವದಿಸಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಗೊಂದಲ ಸೃಷ್ಟಿಸಿ ರಾಜಕಾರಣ ಮಾಡುವವರಿಗೆ ಸೂಕ್ತ ವೇದಿಕೆಯಲ್ಲಿ ತಾನು ಮತ್ತು ಮಾಜಿ ಸಭಾಧ್ಯಕ್ಷ ರಮೇಶ್‌ಕುಮಾರ್‌ ಉತ್ತರ ನೀಡುತ್ತೇವೆ ಎಂದು ಪರೋಕ್ಷವಾಗಿ ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಉತ್ತಮವಾಗಿ ಸೇವೆ ಸಲ್ಲಿಸಿ: ಮತದಾರರ ಆಶೀರ್ವಾದದಿಂದ ಸಂಸದರಾಗಿ ಸುಖವಾಗಿರಲು ಬಯಸದೆ ಕ್ಷೇತ್ರದಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಸಂಸದ ಮುನಿಸ್ವಾಮಿಗೆ ಸಲಹೆ ನೀಡಿದ ಶಾಸಕರು, ಅಧಿಕಾರ ಶಾಶ್ವತವಲ್ಲ ಜನಸೇವಕರಾಗಿ ಸೇವೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಜನ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಜಂಗಮಕೋಟೆ ನಾಡ ಕಚೇರಿಗೆ ಕಾಂಪೌಂಡ್‌ ನಿರ್ಮಿಸಲು ಅನುದಾನ ನೀಡಬೇಕೆಂದು ಶಾಸಕರ ಬೇಡಿಕೆಗೆ ಸ್ಪಂದಿಸಿದ ಸಂಸದರು, ಒಂದು ಸುಸಜ್ಜಿತ ನೀರು ಶುದ್ಧೀಕರಣ ಘಟಕ ಮತ್ತು ಕಾಂಪೌಂಡ್‌ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಸಾರ್ವಜನಿಕವಾಗಿ ಭರವಸೆ ನೀಡಿ ಕುತೂಹಲ ಮೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next