Advertisement

ಪೂಜ್ಯ ಭಾವನೆಯಿಂದ ದೇವರೊಲುಮೆ

11:01 PM Jan 26, 2020 | Sriram |

ಮನಸ್ಸು ಇದ್ದರೆ ಏನನ್ನೂ ಸಾಧಿಸಬಹುದು. ಅಲಾರಂ ಇಟ್ಟು ಅದು ಬೆಲ್‌ ಮಾಡುವ ಮೊದಲೇ ಎದ್ದುಬಿಟ್ಟರೆ ಮಹಾನ್‌ ಸಾಧಕನಾಗಬಹುದೇನೋ. ಅದೇ ತಡವಾಗಿ ಎದ್ದರೆ ಎಲ್ಲ ಕೆಲಸವೂ ನಿಧಾನವೇ. ಅದಕ್ಕೆಂದೇ ಅಂದರೆ ಹಾಗಾಗಬಾರದೆಂದೇ ಈ ಅಲಾರಂ.

Advertisement

ಈಗೀಗ ಬ್ರಾಹ್ಮೀ ಮುಹೂರ್ತದ ಹೊತ್ತಲ್ಲಿ ಚಳಿಗಾಲದಲ್ಲಿ ಏಳುವುದು ಕೊಂಚ ತಡವಾಗಿಯೇ. ಹಾಗೆಂದು ಎಲ್ಲರೂ ಹಾಗಲ್ಲ. ಅವರವರ ಅನುಕೂಲಕ್ಕೆ ತಕ್ಕಂತೆ ಎದ್ದು ತಮ್ಮೆಲ್ಲ ಕೆಲಸಗಳನ್ನು ಮುಗಿಸಿ ಬಳಿಕ ವೃತ್ತಿಗೆ ತೆರಳುವವರನೇಕರಿದ್ದಾರೆ. ವೃತ್ತಿಪರರೂ ಇದ್ದಾರೆ. ಆದರೆ ಒಂದು ವೃತ್ತಿಗೆ ಜೀವಮಾನವಿಡೀ ನಿವೃತ್ತಿಯೆಂಬ ಪದವೇ ಬರುವುದಿಲ್ಲ. ಅದಕ್ಕೆ ವಿರಾಮವೂ ಇಲ್ಲ. ಹೀಗಾಗಿ ಬಹುತೇಕರು ಆ ವೃತ್ತಿಯನ್ನು ಶ್ರದ್ಧಾಪೂರ್ವಕವಾಗಿ, ಇನ್ನು ಕೆಲವರು ಮಾಡಬೇಕಲ್ಲ ಎಂಬ ಒತ್ತಾಸೆಯಿಂದ ಅಲ್ಲದೆ ಇನ್ನುಳಿದವರು ಅದಲ್ಲದೆ ಬೇರೆ ನಿರ್ವಾಹವೇ ಇಲ್ಲವೆಂದು ಮಾಡುವವರಿರುತ್ತಾರೆ. ಏನೇ ಆಗಲಿ ಗೃಹಿಣಿಯ ಕೆಲಸಗಳಿಗೆ ಬೇರೆ ಯಾವ ಕೆಲಸವೂ ಸರಿಸಾಟಿಯಾಗಲು ಕೊಂಚ ಕಷ್ಟವೇ.
ಆದರೆ ಈಗೀಗ ಅದಕ್ಕೂ ಪರಿಹಾರ ಸಿಗತೊಡಗಿದೆ. ಮೊಬೈಲಲ್ಲಿ ಆ್ಯಪ್‌ ಡೌನೊÉàಡ್‌ ಮಾಡಿದರೆ ಆಯಿತು. ಬೇಕಾದಾಗ ತಿಂಡಿಗಾಗಿ ಅಥವಾ ಊಟಕ್ಕಾಗಿ ಆರ್ಡರ್‌ ಮಾಡಿದರೆ ಆಯಿತು ಅಷ್ಟೆ. ಅರ್ಧ ಗಂಟೆಯೊಳಗೆ ಮನೆಗೆ ತಂದು ತಲುಪಿಸಿಬಿಡುತ್ತಾರೆ. ಏನು ಉತ್ತಮವಾಗಿದೆಯೋ ಅಷ್ಟೇ ಹಾನಿಯೂ ಇರಬಹುದೇನೋ ಎಂದನ್ನಿಸುತ್ತಿದೆ. ಅದೀಗ ಒಂದು ಪಕ್ಕದಲ್ಲಿ ಇರಲಿ ಬಿಡಿ.

ಬಾಂಧವ್ಯ ಗಟ್ಟಿಗೊಳಿಸೋಣ
ದೈಹಿಕ ಶ್ರಮವೆಂಬುದು ಈಗ ಬಹಳ ಕಡಿಮೆಯಾಗುತ್ತಿದೆ. ಮಾನಸಿಕ ಶ್ರಮವೆಂಬುದು ಮಿತಿ ಮೀರಿದೆಯೇನೋ ಎಂದು ತೋರುತ್ತಿದೆ. ಮನಸ್ಸು ನಾಗಾಲೋಟದ ಕುದುರೆಯಂತೆ ಚಲಿಸುತ್ತಿದೆ. ಕಡಿವಾಣ ಹಾಕೋಣವೆಂದರೆ ಯಾರಲ್ಲಿ ಹೇಳುವುದು? ಕೂತು ತಿಂದು ಮನಸ್ಸು ಸ್ವಾರ್ಥದ ಗೂಡಾಗತೊಡಗಿದೆ. ಆಲೋಚನ ಶಕ್ತಿಯೇ ಕುಸಿಯುತ್ತಿದೆ. ಆಧ್ಯಾತ್ಮಿಕತೆಗೆ ಮನಸ್ಸು ಹೊರಳುತ್ತಿಲ್ಲ. ಬರೀ ಸುಖ, ಮೋಜು, ಮಸ್ತಿಗಾಗಿ ಬಾಳುವೆ ಎಂಬಂತಾಗಿದೆ. ಏನಿಲ್ಲ ಅಂದರೂ ದಿನದಲ್ಲಿ ಒಂದರ್ಧ ಗಂಟೆಯಾದರೂ ಪುಸ್ತಕ ಓದಬೇಕು. ಅರ್ಧ ಗಂಟೆ ಭಜನೆ ಮಾಡುವುದು, ಅರ್ಧ ಗಂಟೆ ಕುಟುಂಬದ ಹಿರಿಯರೊಡನೆ ಹಾಗೂ ಅತೀ ಕಿರಿಯರೊಡನೆ ಮಾತನಾಡಿ ಉತ್ತಮ ಬಾಂಧವ್ಯವಿರಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ಆದರೆ ಇಂದು ಪಂಜರದೊಳಗಿರುವ ಗಿಳಿಯಂತೆ ನಾವು ನಮ್ಮ ವರ್ತುಲವನ್ನು ಸಂಕೀರ್ಣಗೊಳಿಸುತ್ತಿದ್ದೇವೆ. ಹೀಗಾದರೆ ಮುಂದೊಂದು ದಿನ ಸಂಬಂಧದ ಎಳೆಯನ್ನೇ ಮರೆತು ವಿನಾಶದ ಅಂಚಿಗೆ ಬೀಳಲಿದ್ದೇವೆ.

ಪೂಜಾಕಾರ್ಯದಲ್ಲಿ ಪಾಲ್ಗೊಳ್ಳಿ
ದೇವಾಲಯಗಳಿಗೆ ವಾರಕ್ಕೊಮ್ಮೆಯಾದರೂ ಭೇಟಿ ನೀಡಿ ಪೂಜಾಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಆದಷ್ಟು ಸಂಬಂಧಿಕರಲ್ಲಿ ಗುರುತು ಹೇಳಿ ಮಾತನಾಡಿಸಬೇಕು. ಬಂಧು-ಮಿತ್ರರೊಡನೆ ಅಂಕಲ್‌, ಆಂಟಿಯನ್ನು ಬಿಟ್ಟು ಶುದ್ಧವಾಗಿ ಚಿಕ್ಕಪ್ಪ, ಮಾವ, ಚಿಕ್ಕಮ್ಮ, ಅತ್ತೆ ಎಂದು ಸಂಬೋಧಿಸಬೇಕು. ಅಪ್ಪ ಅಮ್ಮನಲ್ಲಿ ಪ್ರೀತಿಯಿಂದ ಮಾತನಾಡಬೇಕು. ಮಕ್ಕಳ ಒಳಿತಿಗಾಗಿ ತಾನೇ ಹೆತ್ತವರು ಶ್ರಮಿಸುವುದು. ಹಾಗಾಗಿ ಸದಾ ಅವರನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಆಗಲೇ ದೇವರೊಲುಮೆ ಸುಲಭ ಸಾಧ್ಯವಾಗುತ್ತದೆ.

 ಮಲ್ಲಿಕಾ ಜೆ. ರೈ, ಗುಂಡ್ಯಡ್ಕ, ದರ್ಬೆ – ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next