ಡೊಂಬಿವಲಿ: ಜೈನಾಗಮ ದಲ್ಲಿ ಅನೇಕ ಸ್ತೋತ್ರಗಳು, ಪೂರ್ವಾಚಾ ರ್ಯರು ತಮಗಾದ ಉಪಸರ್ಗದ ಸಮಯದಲ್ಲಿ, ಭಗವಂತನ ಭಕ್ತಿ ಮಾಡಿ ರಚಿಸಲ್ಪಟ್ಟವುಗಳಾಗಿವೆ. ಭಕ್ತಿಯೆದುರು ಯಾವುದೇ ದ್ರವ್ಯ ಶಕ್ತಿಯು ತನ್ನ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ಶಬರಿಯ ಭಕ್ತಿಗೆ ರಾಮನ ದರ್ಶನವಾದಂತೆ, ಸಮಂತ ಭದ್ರಾಚಾರ್ಯರ ಭಕ್ತಿಗೆ ಚಂದ್ರನಾಥ ಸ್ವಾಮಿಯ ದರ್ಶನ ವಾದಂತೆ, ಮಾನ ತುಂಗಾಚಾರ್ಯರ ಭಕ್ತಿಗೆ ಆದಿನಾಥ ಸ್ವಾಮಿಯ ದರ್ಶನ ವಾದಂತೆ, ಭಗವಂತನ ಸ್ತುತಿ ಮಾಡುವುದರಿಂದ ನಮ್ಮ ಆತ್ಮನಲ್ಲಿಯೂ ಊರ್ಜಾಶಕ್ತಿಯು ಉತ್ಪನ್ನಗೊಳ್ಳುತ್ತದೆ. ಭಕ್ತಾಮರ ಪಠಣ ಮಾಡುತ್ತಿದ್ದರೂ ನಮ್ಮಲ್ಲಿ ಬದಲಾವಣೆ ಆಗುತ್ತಿಲ್ಲವೆಂದಾದರೆ, ನಮ್ಮಲ್ಲಿ ಭಾವ ಶುದ್ದಿ ಇಲ್ಲ ಎಂದರ್ಥ. ಭಾವ ಶುದ್ದಿ ಸಹಿತವಾದ ಭಕ್ತಿ, ನಮ್ಮ ಆತ್ಮನನ್ನು ಶುದ್ದಿಗೊಳಿಸಿ, ಮೋಕ್ಷಮಾರ್ಗದತ್ತ ಚಲಿಸುವಂತೆ ಮಾಡುತ್ತದೆ ಎಂದು ಆಚಾರ್ಯಶ್ರೀ 108 ಕುಶಾಗ್ರನಂದಿ ಮುನಿಮಹಾರಾಜರು ಅಭಿಪ್ರಾಯಿಸಿದರು.
ಜ. 27 ರಂದು ಡೊಂಬಿವಲಿಯ ಕೋರ್ಪಗಾಂವ್‌ನಲ್ಲಿರುವ, ಕಿಡ್ ಲ್ಯಾಂಡ್ ಸ್ಕೂಲ್‌ನ ಸಭಾಗೃಹದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ, ಕರ್ನಾಟಕದ ಶ್ರಾವಕರನ್ನು ಉದ್ದೇಶಿಸಿ ಮಾತನಾಡಿದ ಆಚಾರ್ಯ ಶ್ರೀಗಳು, ಕರ್ನಾಟಕದ ಜನರು ಮಧುರ ಭಾಷಿಗಳಾಗಿದ್ದು, ನಿಮ್ಮೆಲ್ಲರ ಭಕ್ತಿಯೇ ನನ್ನನ್ನು ಡೊಂಬಿವಿಲಿಗೆ ಬರುವಂತೆ ಮಾಡಿತು ಎಂದರು.
ಮುಂದೊಂದು ದಿನ ಡೊಂಬಿವಿಲಿ ನಗರದಲ್ಲಿಯೂ ಚಾತುರ್ಮಾಸ ಮಾಡುವ ಭಾವನೆ ಯಿದೆ. ಯಾರೇ ಮುನಿಗಳು ಬಂದರೂ ನಿಮ್ಮಲ್ಲಿಗೆ ಕರೆಸಿಕೊಂಡು, ಕಾರ್ಯಕ್ರಮವನ್ನು ಮಾಡಿ ಎಂದು ಕರೆಯಿತ್ತರು.
ಜ. 26 ರಂದು ಡೊಂಬಿವಲಿ ನಗರದ ಪುರ ಪ್ರವೇಶ ಮಾಡಿದ ಮುನಿ ಸಂಘವು ಡೊಂಬಿವಿಲಿ ಪೂರ್ವ ಮತ್ತು ಪಶ್ಚಿಮದಲ್ಲಿರುವ ದಿಗಂಬರ ಜಿನಮಂದಿರವನ್ನು ದರ್ಶಿಸಿತು. ಆಚಾರ್ಯಶ್ರೀ ಮುನಿಮಹಾ ರಾಜರು, ಮುನಿಶ್ರೀ ಅಜಯಋಷಿ ಮುನಿ ಮಹಾರಾಜರು ಹಾಗು ವಿಚಾರಪಟ್ಟ ಕ್ಷುಲ್ಲಕ ಅರಿಹಂತ ಋಷಿ ಸ್ವಾಮೀಜಿಯವರನ್ನು ಕರ್ನಾಟ ಕದ ಶ್ರಾವಕರು ಭಕ್ತಿಯಿಂದ ಸ್ವಾಗತಿಸಿದರು.
ಡೊಂಬಿವಲಿಯ ಶ್ರೀ ಅಜಿತ್ ಕುಮಾರ್ ಜೈನ್ ಅವರ ನೇತೃತ್ವದಲ್ಲಿ ಕಾರ್ಯಕ್ರಮವು ನಡೆಯಿತು. ಕೋಪರ್ ಪಶ್ಚಿಮದ ಕಿಡ್ಸ್‌ಲ್ಯಾಂಡ್ ಸ್ಕೂಲ್‌ನ ಸಭಾಗೃಹದಲ್ಲಿ ಧಾರ್ಮಿಕ ಸಭೆಯು ನಡೆಯಿತು. ಕರ್ನಾಟಕ ಜೈನ ಸಂಘದ ಶ್ರಾವಿಕೆಯರ ಮಂಗ ಲಾಚರಣೆಯೊಂದಿಗೆ, ಡೊಂಬಿವಿಲಿ ಪೂರ್ವ ಮತ್ತು ಪಶ್ಚಿಮದ ಬಸದಿಗಳ ಪದಾಧಿಕಾರಿಗಳು ಮತ್ತು ಅಖೀಲ ಕರ್ನಾಟಕ ಜೈನ ಸಂಘದ ಪದಾಧಿಕಾರಿಗಳು ದೀಪ ಪ್ರಜ್ಜಲಿಸು ವುದರ ಮೂಲಕ ಕಾರ್ಯಕ್ರಮವು ಆರಂಭಗೊಂಡಿತು.
ಮುನಿ ಸಂಘದ ವಿಹಾರದಲ್ಲಿ ಸಹಕರಿಸಿದ ಶ್ರಾವಕರನ್ನು ಕರ್ನಾಟಕ ಜೈನ ಸಂಘದ ವತಿಯಿಂದ ಗೌರವಿಸಲಾಯಿತು. ಆಚಾರ್ಯಶ್ರೀಯವರು ನೆರೆದ ನೂರಾರು ಶ್ರಾವಕರಿಗೆ ತಮ್ಮ ಮಂಗಲ ಆಶಿರ್ವಚನವನ್ನು ದಯಪಾಲಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಮುನಿಸಂಘಕ್ಕೆ ಶ್ರಾವಕರು ಮಂಗಳಾರತಿಯನ್ನು ಬೆಳಗಿದರು. ಆಜಿತ್ ಕುಮಾರ್ ಜೈನ್, ಅನಿತಾ ಅಜಿತ್ ಜೈನ್, ಪದ್ಮಜಾ ಜೈನ್, ಪದ್ಮಾವತಿ ಪದ್ಮಜಾ ಜೈನ್, ರತ್ನಾಕರ ಅತಿಕಾರಿ, ರಾಜವರ್ಮ ಜೈನ್ , ರತ್ನಾಕರ ಅಜ್ರಿ, ಅಖೀಲ ಕರ್ನಾಟಕ ಜೈನ ಸಂಘದ ಕಾರ್ಯದರ್ಶಿ ಪವನಂಜಯ ಬಲ್ಲಾಳ್, ಜೊತೆ ಕಾರ್ಯದರ್ಶಿ ರಘುವೀರ್ ಹೆಗ್ಡೆ, ಥಾಣೆ ಪದಾಧಿಕಾರಿಗಳಾದ ರಾಜೇಂದ್ರ ಹೆಗ್ಡೆ ವಡಾಲ, ಮಹಾವೀರ ಜೈನ್ ಡೊಂಬಿವಲಿ, ಪ್ರತಿಭಾ ವಾಣಿ ವೈದ್ಯ, ಪ್ರವೀಣ್ ಚಂದ್ರ ಜೈನ್ ಕಲ್ಯಾಣ್, ಮತ್ತಿತರ ಶ್ರಾವಕ ಶ್ರಾವಿಕೆಯರು ಸಹಕರಿಸಿದರು. ಭರತ್ ರಾಜ್ ಜೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಚಿತ್ರ-ವರದಿ : ರೋನಿಡಾ