ಸೈದಾಪುರ: ಯಾವುದೇ ಜಾತಿ, ಮತ ಪಂಥಗಳ ಭಿನ್ನತೆಯಿಲ್ಲದೆ ವಿವಿಧತೆಯಲ್ಲಿ ಏಕತೆ ಸಾರುವ ಭಾರತೀಯ ನೆಲದಲ್ಲಿ ಜನಿಸಿದ ನಾವುಗಳೇ ಧನ್ಯರು ಎಂದು ಖ್ಯಾತ ಪ್ರವಚನಕಾರ ಹಾಗೂ ಜಮಖಂಡಿಯ ಬಸವ ಜ್ಞಾನ ಗುರುಕುಲದ ಶರಣ ಡಾ| ಈಶ್ವರ ಮಂಟೂರ ಅಭಿಪ್ರಾಯಪಟ್ಟರು.
ಸಮೀಪದ ನೆರಡಗಂ ಪಶ್ಚಿಮಾದ್ರಿ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಲಿಂ| ಡಾ| ಸಂಗನಬಸವ ಶ್ರೀಗಳ ಸ್ಮರಣೋತ್ಸವ ಹಾಗೂ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೀಪಕ್ಕೆ ಯಾವುದೇ ಬೇಧವಿಲ್ಲ. ಅದು ನಮ್ಮ ಸಮಾಜದ ಶಾಂತಿ ಹಾಗೂ ಸಮಾನತೆಯ ಸಂಕೇತವಾಗಿದೆ ಎಂದರು.
ಮಠದ ಪೀಠಾಧ್ಯಕ್ಷ ಪಂಚಮ ಸಿದ್ಧಲಿಂಗ ಸ್ವಾಮಿಗಳು ಆಶೀರ್ವಚನ ನೀಡಿದರು. ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು, ಶಂಭುಲಿಂಗ ಸ್ವಾಮಿಗಳು ಕಲ್ಲೂರು, ಆದಿತ್ಯಪರಾಶ್ರೀ ಸ್ವಾಮಿಗಳು ಬಿಜ್ವಾರ, ಲಿಂಗಪ್ಪ ತಾತಾ ಗುರ್ಲಾಪಲ್ಲಿ, ಮಖ್ತಲ್ ಶಾಸಕ ಚಿಟ್ಟೆಂ ರಾಮಮೋಹನರೆಡ್ಡಿ, ಚಿಂತಕರಾದ ಅಪ್ಪಲ್ ಪ್ರಸಾದ, ಬಿ.ಕೊಂಡಯ್ಯ, ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ ಶಿವರಾಜ ಪಾಟೀಲ್ ಕೃಷ್ಣಾ, ಅಶೋಕಗೌಡ, ವಿದ್ಯಾಸಾಗರ, ಯಲ್ಲಾರೆಡ್ಡಿ, ಮಹಿಪಾಲರೆಡ್ಡಿ ಇದ್ದರು. ಇದೇ ವೇಳೆ ಸ್ಥಳೀಯ ಸಿದ್ಧಲಿಂಗ ದೇವಸ್ಥಾನದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಶರಣಕುಮಾರ ವಠಾರ ಸಂಗಡಿಗರು ಸಂಗೀತ ರಸದೌತಣ ಉಣ ಬಡಿಸಿದರು.
ಗುರುವನ್ನು ನೆನೆದು ಶ್ರೀಗಳು ಭಾವುಕ
ಮಣ್ಣಿನ ಮುದ್ದೆಯಂತಿದ್ದ ತಮಗೆ ವಿದ್ಯೆ ಬುದ್ಧಿ ಕಲಿಸಿದ್ದು ಲಿಂ| ಡಾ| ಸಂಗನಬಸವ ಮಹಾಸ್ವಾಮಿಗಳು. ಆರಂಭದಲ್ಲಿ ತಮಗೆ ಹಾಲಕೇರೆ ಶ್ರೀಮಠದ ನೇತೃತ್ವವ ನೀಡುವ ತಯಾರಿಯಲ್ಲಿದ್ದ ಪೂಜ್ಯರು ನೆರಡಗಂ ಭಕ್ತರು ಕೇಳಿಕೊಂಡಾಗ ಈ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಪೀಠಾಧಿಪತಿಯಾಗಿ ನೇಮಿಸಿ ಹತ್ತೂಂಬತ್ತನೇ ವಯಸ್ಸಿಗೆ ದೊಡ್ಡ ಜವಾಬ್ದಾರಿ ನೀಡಿದರು. ಅವರ ಆಶೀರ್ವಾದ, ಸಲಹೆ, ಸೂಚನೆ ಹಾಗೂ ಮಾರ್ಗದರ್ಶನದ ಜತೆಗೆ ಭಕ್ತರ ಸಹಕಾರದಿಂದ ಶ್ರೀಮಠದಲ್ಲಿ ನಾನಾ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮ ನಡೆಸುತ್ತ ಬಂದಿದ್ದೇವೆ. ಆದರೆ ಇದೀಗ ತಮ್ಮ ಆರಾಧ್ಯ ದೈವ ಲಿಂಗೈಕ್ಯರಾಗಿದ್ದು ಭೌತಿಕವಾಗಿ ದೂರವಾಗಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನತ್ತಲೇ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ಭಾವುಕರಾದರು.