ವಿಜಯಪುರ: ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ವಿವಿಧ ರೋಗಗಳಲ್ಲಿ ಪರಿಣಿತ ವೈದ್ಯರ 3 ತಂಡಗಳು ಪ್ರವಾಹ ಪೀಡಿತರ ಸೇವೆಗೆ ಧಾವಿಸಿದೆ.
ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎಂ.ಎಸ್. ಬಿರಾದಾರ ಅವರು ಗುರುವಾರ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಸಂಸ್ಥೆಯ ಅಧ್ಯಕ್ಷರಾಗಿರುವ ಮಾಜಿ ಸಚಿವ ಡಾ.ಎಂ.ಬಿ.ಪಾಟೀಲ ಅವರ ಸೂಚನೆ ಮೇರೆಗೆ ನಮ್ಮ ಆಸ್ಪತ್ರೆಯ ತಂಡ ನೆರೆ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಾಗಿರುವವರಿಗೆ ಅಗತ್ಯ ವೈದ್ಯಕೀಯ ನೆರವನ್ನು ನೀಡಲು ಧಾವಿಸಲಿದೆ ಎಂದು ಡಾ. ಬಿರಾದಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಉದ್ದೇಶಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ವೈದ್ಯಕೀಯ ತಂಡ, ಎಲುಬು ಮತ್ತು ಕೀಲು ತಜ್ಞರ ತಂಡ ಹಾಗೂ ಸ್ತ್ರೀ ರೋಗ ಹಾಗೂ ಮಕ್ಕಳ ಚಿಕಿತ್ಸಾ ತಜ್ಞರನ್ನು ಒಳಗೊಂಡ ತಂಡ ಇದಾಗಿರಲಿದೆ.
ಈ ಮೂರೂ ತಂಡಗಳಲ್ಲಿರುವ ವೈದ್ಯರು, ದಾದಿಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚರಿಸಿ ಅಗತ್ಯ ವೈದ್ಯಕೀಯ ನೆರವನ್ನು ಒದಗಿಸುವ ಕಾರ್ಯವನ್ನು ಮಾಡಲಿದೆ. ಮಾತ್ರವಲ್ಲದೇ ಗಂಬೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಅಂತವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಡುವ ನಿಟ್ಟಿನಲ್ಲಿ ಸಹ ಈ ತಂಡ ಕಾರ್ಯನಿರ್ವಹಿಸಲಿದೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲಾಡಳಿತಗಳನ್ನು ಈಗಾಗಲೇ ಸಂಪರ್ಕಿಸಿ ಈ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಯಾದಗಿರಿ, ರಾಯಚೂರು ಸೇರಿ ಪ್ರವಾಹ ಬಾಧಿತ ಜಿಲ್ಲಾಡಳಿತಗಳ ಜೊತೆ ಸಂಪರ್ಕಿಸಲು ಸಂಸ್ಥೆಯು ಮುಂದಾಗಿದೆ.
ಈಗಾಗಲೇ ಸ್ವತಂತ್ರ ತಂಡ ಆಂಬ್ಯು ಚಿಕ್ಕಪಡಸಲಗಿ, ಇಂಡಿ ತಾಲೂಕ ಸಂಚಾರಿ ತಂಡ ಸೇವೆ ಆರಂಭಿಸಿದೆ. 2009 ಪ್ರವಾಹ ಸಂದರ್ಭದಲ್ಲಿ ಕೂಡ ಬಿ.ಎಲ್.ಡಿ.ಇ. ಸಂಸ್ಥೆ ಸುಮಾರು 25 ಸಾವಿರ ರೋಗಿಗಳಿಗೆ ಆರೋಗ್ಯ ಸೇವೆಯನ್ನು ನೀಡುವ ಮೂಲಕ ತನ್ನ ಸಾಮಾಜಿಕ ಕಾಳಜಿ ಬದ್ಧತೆಯನ್ನು ಮೆರೆದಿತ್ತು.