ಹೊಸದಿಲ್ಲಿ:ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ಬಗ್ಗೆ ಜರ್ಮನಿ ನೀಡಿದ ಹೇಳಿಕೆಗಳನ್ನು ವಿರೋಧಿಸಿರುವ ಭಾರತವು ಶನಿವಾರ ಜರ್ಮನಿಯ ರಾಯಭಾರಿಯನ್ನು ಪ್ರತಿಕ್ರಿಯೆಗಾಗಿ ಕರೆಸಿದೆ.
ಜರ್ಮನಿಯ ವಿದೇಶಾಂಗ ಸಚಿವಾಲಯದ ವಕ್ತಾರರ ಹೇಳಿಕೆಗಳು, ಭಾರತದ ಆಂತರಿಕ ವಿಷಯಗಳಲ್ಲಿ ಸ್ಪಷ್ಟ ಹಸ್ತಕ್ಷೇಪ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಕ್ರೋಶ ಹೊರ ಹಾಕಿದೆ.
”ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ ಕೇಜ್ರಿವಾಲ್ ನ್ಯಾಯಯುತ ಮತ್ತು ನಿಷ್ಪಕ್ಷಪಾತ ವಿಚಾರಣೆಯನ್ನು ಪಡೆಯುತ್ತಾರೆ ಎಂದು ನಾವು ನಿರೀಕ್ಷಿಸಿದ್ದೇವೆ” ಎಂದು ಜರ್ಮನ್ ವಿದೇಶಾಂಗ ಸಚಿವಾಲಯ ಹೇಳಿರುವುದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ.
ಜರ್ಮನ್ ರಾಯಭಾರ ಕಚೇರಿಯ ಡೆಪ್ಯುಟಿ ಹೆಡ್ ಆಫ್ ಮಿಷನ್ ಜಾರ್ಜ್ ಎಂಜ್‌ವೀಲರ್ ರನ್ನು ಅಧಿಕೃತ ಪ್ರತಿಭಟನೆಯನ್ನು ಸಲ್ಲಿಸಲು ವಿದೇಶಾಂಗ ಸಚಿವಾಲಯ ಕರೆದಿದೆ. ಎಂಜ್‌ವೀಲರ್ ದೆಹಲಿಯ ಸೌತ್ ಬ್ಲಾಕ್‌ನಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಚೇರಿಯಿಂದ ಹೊರ ಬರುತ್ತಿರುವುದು ಕಂಡುಬಂದಿದೆ.
‘ಈ ರೀತಿಯ ಹೇಳಿಕೆಗಳನ್ನು ನಾವು ನಮ್ಮ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಿದಂತೆ, ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸಿದಂತೆ ಪರಿಗಣಿಸುತ್ತೇವೆ” ಎಂದು ಸಭೆಯ ನಂತರ ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
“ಭಾರತ ಕಾನೂನಿನ ಆಳ್ವಿಕೆಯೊಂದಿಗೆ ರೋಮಾಂಚಕ ಮತ್ತು ದೃಢವಾದ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ.ಇಲ್ಲಿ ಕಾನೂನು ತನ್ನದೇ ಆದ ಮಾರ್ಗ ಹೊಂದಿದೆ. ಈ ವಿಚಾರದಲ್ಲಿ ಮಾಡಿದ ಪಕ್ಷಪಾತದ ಊಹೆಗಳು ಅನಗತ್ಯವಾಗಿವೆ” ಎಂದು ಪ್ರತಿಕ್ರಿಯಿಸಿದೆ.