ಬೆಂಗಳೂರು: ಹನ್ನೊಂದು ವರ್ಷಗಳ ಹಿಂದೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಸಿಟಿ ಸಿವಿಲ್ ಸೆಷನ್ಸ್ ಕೋರ್ಟ್‌ನ ವಿಶೇಷ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸದಸ್ಯರಾಗಿದ್ದ ಅಫ್ತಾಬ್ ಆಲಂ ಅಲಿಯಾಸ್ ಫಾರೂಕ್ ಹಾಗೂ ಅಹಮ್ಮದ್ ಜಮಾಲ್ ಶಿಕ್ಷೆಗೊಳಗಾದವರು.
ನಾಲ್ಕೈದು ವರ್ಷಗಳ ಹಿಂದೆ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ಇಬ್ಬರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿದ್ದ ಸಿಸಿಬಿ ಪರ ವಕೀಲರು, ಕೃತ್ಯದಲ್ಲಿ ಅಪರಾಧಿಗಳ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಅವರಿಗೆ ಹೆಚ್ಚಿನ ಶಿಕ್ಷೆ ವಿಧಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರಕರಣದ ಶಿಕ್ಷೆ ಪ್ರಮಾಣವನ್ನು ಮತ್ತೂಮ್ಮೆ ಪರಿಶೀಲಿಸುವಂತೆ ನಿರ್ದೇಶನ ನೀಡಿತ್ತು. ಅದರನ್ವಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಇಬ್ಬರೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಸಿಸಿಬಿ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಎ. ರವೀಂದ್ರ ವಾದ ಮಂಡಿಸಿದ್ದು, ಸುಧನ್ವ ಅವರು ಸಹಾಯಕರಾಗಿದ್ದರು.