ಕಾಬೂಲ್: ದಕ್ಷಿಣ ಪ್ರಾಂತ್ಯದ ಕಂದಾಹಾರ್ ನಗರ ಸಮೀಪದ ಇಮಾಮ್ ಬಾರ್ಘಾಹ್ ಮಸೀದಿಯಲ್ಲಿ ಶುಕ್ರವಾರ(ಅಕ್ಟೋಬರ್ 15) ಸ್ಫೋಟ ಸಂಭವಿಸಿದ್ದು, ಹಲವಾರು ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:ಪರ್ಸ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ: ಪೊಲೀಸ್ ಆಯುಕ್ತರಿಂದ ಸನ್ಮಾನ
ಅಧಿಕಾರಿಗಳ ಮಾಹಿತಿ ಪ್ರಕಾರ, ಕಂದಾಹಾರ್ ನಗರದ ಪೊಲೀಸ್ ಡಿಸ್ಟ್ರಿಕ್ಟ್ ಒನ್(ಪಿಡಿ-1) ಸಮೀಪದ ಮಸೀದಿಯೊಳಗೆ ಬಾಂಬ್ ಸ್ಫೋಟ ಸಂಭವಿಸಿದೆ. ಈ ಮಸೀದಿ ಶಿಯಾ ಸಮುದಾಯಕ್ಕೆ ಸೇರಿರುವುದಾಗಿ ಸ್ಥಳೀಯರು ಟೋಲೋ ನ್ಯೂಸ್ ಗೆ ತಿಳಿಸಿದ್ದಾರೆ.
ಮಸೀದಿಯೊಳಗೆ ಶಿಯಾ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿಯೇ ಈ ಸ್ಫೋಟ ಸಂಭವಿಸಿದ್ದು, ಸಾವಿನ ಪ್ರಮಾಣದ ಸಂಖ್ಯೆ ಅಧಿಕವಾಗಿರುವ ಸಾಧ್ಯತೆ ಇದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಎಷ್ಟು ಎಂಬುದು ಅಧಿಕೃತವಾಗಿ ತಿಳಿದುಬಂದಿಲ್ಲ. ಈವರೆಗೂ ಸ್ಫೋಟದ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿಲ್ಲ ಎಂದು ವರದಿ ತಿಳಿಸಿದೆ.
ಅಕ್ಟೋಬರ್ 8ರಂದು ಉತ್ತರ ಅಫ್ಘಾನಿಸ್ತಾನದ ಮಸೀದಿಯೊಂದರಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ನೂರು ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದರು. ಇಲ್ಲಿ ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿತ್ತು.