ಹೊಸದಿಲ್ಲಿ/ಕಾಬೂಲ್: ಅಫ್ಘಾನ್ ರಾಜಧಾನಿ ಕಾಬೂಲ್‌ನ ವಿಮಾನ ನಿಲ್ದಾಣದಲ್ಲಿ ಗುರುವಾರ ಎರಡು ಪ್ರತ್ಯೇಕ ಸ್ಫೋಟಗಳು ಸಂಭವಿಸಿವೆ. ಅಮೆರಿಕದ ಯೋಧರು, ಮಕ್ಕಳ ಸಹಿತ 40 ಮಂದಿ ಅಸುನೀಗಿದ್ದು, 120ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕನಿಷ್ಠ 10 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆಗಳಿವೆ.
ಸ್ಫೋಟ ಸಂಭವಿಸಿದ ಬಳಿಕ ಅಪರಿಚಿತರು ಗುಂಡು ಹಾರಿಸಿದ್ದಾರೆ. ವಿಮಾನ ನಿಲ್ದಾಣದ ಸಮೀಪ ಇರುವ ಹೊಟೇಲ್‌ನಲ್ಲಿ ಮೊದಲು ಕಾರ್ ಬಾಂಬ್ ಸ್ಫೋಟ ನಡೆಯಿತು. ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ಈ ಕೃತ್ಯವೆಸಗಿದ್ದಾರೆ ಎಂಬ ಸಂಶಯಗಳಿವೆ. ಬೆನ್ನಲ್ಲೇ ಅಪರಿಚಿತರು ಮನಬಂದಂತೆ ಗುಂಡು ಹಾರಿಸಿದರು. ಇದಾದ ಬಳಿಕ ವಿಮಾನ ನಿಲ್ದಾಣದ ಬಳಿ ಮತ್ತೂಂದು ಸ್ಫೋಟ ಸಂಭವಿಸಿದೆ.
ಅಮೆರಿಕ, ಫ್ರಾನ್ಸ್ ಮತ್ತಿತರ ದೇಶಗಳು ಆತ್ಮಹತ್ಯಾ ದಾಳಿಯ ಮುನ್ನೆಚ್ಚರಿಕೆ ನೀಡಿದ್ದವು. “ಐಸಿಸ್-ಕೆ’ ಈ ಕೃತ್ಯ ನಡೆಸಿದೆ ಎನ್ನಲಾಗಿದೆ. ದಾಳಿಯ ಬಳಿಕ ವಾಷಿಂಗ್ಟನ್‌ನಲ್ಲಿ ಅಧ್ಯಕ್ಷ ಜೋ ಬೈಡೆನ್ ನೇತೃತ್ವದಲ್ಲಿ ಪರಿಸ್ಥಿತಿಯ ಬಗ್ಗೆ ತುರ್ತು ಸಭೆ ನಡೆದಿದೆ.
“ಸ್ಥಳಾಂತರವೇ ಆದ್ಯತೆ’ : ಅಫ್ಘಾನ್ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಎಲ್ಲ ಭಾರತೀಯರ ಸುರಕ್ಷಿತ ಸ್ಥಳಾಂತರವೇ ನಮ್ಮ ಆದ್ಯತೆ ಎಂದು ಕೇಂದ್ರ ಸರಕಾರ ಹೇಳಿದೆ. ಗುರುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಈ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿವರಣೆ ನೀಡಿದ್ದಾರೆ. ಅಫ್ಘಾನ್ ವಿಚಾರವಾಗಿ ಸರಕಾರ ಸದ್ಯ ಕಾದು ನೋಡುವ ನಿಲುವನ್ನು ಅನುಸರಿಸುತ್ತಿದೆ ಎಂದಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಸೇರಿದಂತೆ 31 ಪಕ್ಷಗಳ 37 ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.