ಹೈದರಾಬಾದ್: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ರಿಯಾಕ್ಟರ್ ಸ್ಫೋಟಗೊಂಡು ಕಂಪೆನಿಯ ನಿರ್ದೇಶಕ ಸೇರಿದಂತೆ ಐವರು ಮೃತಪಟ್ಟಿದ್ದು ಹಲವಾರು ಮಂದಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಘಟನೆಯಲ್ಲಿ ಫ್ಯಾಕ್ಟರಿ ಒಳಗೆ ಇನ್ನೂ ಎಂಟರಿಂದ 10 ಮಂದಿ ಸಿಲುಕಿದ್ದಾರೆ ಎನ್ನಲಾಗಿದ್ದು ಅರವನ್ನು ರಕ್ಷಿಸುವ ಕೆಲಸ ರಕ್ಷಣಾ ತಂಡ ನಡೆಸುತ್ತಿದೆ. ಹಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಫೋಟದ ವೇಳೆ ಕಟ್ಟಡದಲ್ಲಿ ಸುಮಾರು 50 ಮಂದಿ ಇದ್ದರು ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ಅವಘಡದಲ್ಲಿ ಮೃತಪಟ್ಟವರನ್ನು ಕಂಪನಿಯ ನಿರ್ದೇಶಕ ರವಿ ಶರ್ಮಾ, ಪ್ರೊಡಕ್ಷನ್ ಇನ್‌ಚಾರ್ಜ್‌ಗಳಾದ ಸುಬ್ರಹ್ಮಣ್ಯಂ, ದಯಾನಂದ್ ಮತ್ತು ನಿರ್ವಹಣಾ ಉಸ್ತುವಾರಿ ಸುರೇಶ್ ಪಾಲ್ ಎಂದು ಗುರುತಿಸಲಾಗಿದೆ.
ಪೊಲೀಸರು, ಅಗ್ನಿಶಾಮಕ ಸಿಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಗಾಯಾಳುಗಳನ್ನು ಸಂಗಾರೆಡ್ಡಿಯಲ್ಲಿರುವ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಪೋಟದ ತೀವ್ರತೆಗೆ ಮೃತ ದೇಹಗಳು ಕೆಲ ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದೆ ಎನ್ನಲಾಗಿದ್ದು, ರಿಯಾಕ್ಟರ್ ಸ್ಫೋಟದಿಂದಾಗಿ ಮೂರು ಕಟ್ಟಡಗಳು ಕುಸಿದಿವೆ ಅಲ್ಲದೆ ಕಾರ್ಖಾನೆಯಲ್ಲಿದ್ದ ಮತ್ತೊಂದು ರಿಯಾಕ್ಟರ್‌ಗೂ ಬೆಂಕಿ ವ್ಯಾಪಿಸಿದೆ. ಇದರೊಂದಿಗೆ ಮತ್ತೊಂದು ರಿಯಾಕ್ಟರ್ ಸ್ಫೋಟಗೊಳ್ಳುವ ಸಾಧ್ಯತೆ ಇದ್ದು, ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಪೊಲೀಸರು ಕಾರ್ಖಾನೆಯ ಸುತ್ತಮುತ್ತಲಿನ ಜನರನ್ನು ಸ್ಥಳಾಂತರಿಸುತ್ತಿದ್ದಾರೆ.
ಇದನ್ನೂ ಓದಿ: Vijayapura: ಜಮೀನಿನಲ್ಲಿ ಆಡಲು ಹೋಗಿ ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಮಗು