ಚಿಕ್ಕನಾಯಕನಹಳ್ಳಿ: ಸಾಮಾನ್ಯ ದಿನಗಳಲ್ಲಿಯೇ ಕಂಬಳಿಗಳಿಗೆ ಡಿಮ್ಯಾಂಡ್ ಇಲ್ಲದೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕಂಬಳಿ ನೇಕಾರರು, ಲಾಕ್‌ಡೌನ್ ನಿಂದ ಉತ್ಪಾದನೆಯಾದ ಕಂಬಳಿ ಮಾರಾಟ ಮಾಡಲು ಸಾಧ್ಯವಾಗದೆ ತೀವ್ರ ಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್‌ಡೌನ್ ಎಲ್ಲಾ ವರ್ಗದ ಜನರ ಬದುಕನ್ನು ಅನಿರೀಕ್ಷಿತವಾಗಿ ತಲ್ಲಣಗೊಳಿಸಿದೆ. ಊಟಕ್ಕೂ ಪರದಾಡುವಂತೆ ಮಾಡಿದೆ.
ಅದರಲ್ಲೂ ಕುಲಕಸಬು ಎಂದು ನಂಬಿಕೊಂಡು ಜೀವನ ಕಟ್ಟಿಕೊಳ್ಳಲು, ಆಧುನಿಕತೆಯ ಜೊತೆ ಪೈಪೋಟಿ ನಡೆಸಿಕೊಂಡು ಬರುತ್ತಿರುವ ಕಂಬಳಿ ನೇಕಾರರ ಬದುಕು ನಿಜಕ್ಕೂ ಪಾತಾಳ ಸೇರುತ್ತಿದೆ. ವಾರಕ್ಕೆ ಒಂದು, ಎರಡು ಕಂಬಳಿ ಉತ್ಪಾದನೆ ಮಾಡಿ, ಅಲ್ಪ ಲಾಭ ಪಡೆದು ಮನೆ, ಮಕ್ಕಳ ಮುಖ ದಲ್ಲಿ ನಗುವಿಗೆ ದಾರಿಯಾಗಿದ್ದ ಕಂಬಳಿ, ಉತ್ಪಾದನೆ ಕೊರೊನಾ ಲಾಕ್‌ಡೌನ್ ನಿಂದ ನಿಂತು ಹೋಗಿ ಇದನ್ನು ನಂಬಿಕೊಂಡವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಮಕ್ಕಳ ವಿದ್ಯಾಭ್ಯಾಸ, ಸಾಲ, ಬಡ್ಡಿ, ಮನೆ, ಆರೋಗ್ಯದ ಖಚ್ಚು ನೆನೆಸಿಕೊಂಡು ಕಣ್ಣಿರಲ್ಲಿ ಕೈತೊಳೆಯುತ್ತಿದ್ದಾರೆ. ಹಲವಾರು ವರ್ಗಕ್ಕೆ ಘೋಷಣೆಯಾದ ಸಹಾಯ ಧನ ಇವರಿಗೆ ಯಾಕೆ ಇಲ್ಲ, ಕೊರೊನಾ ಲಾಕ್‌ಡೌನ್‌ನಲ್ಲಿ ಇವರು ಒಳಪಟ್ಟಿರಲಿಲ್ಲವೆ ಸರ್ಕಾರಕ್ಕೆ ಇವರ ಕಷ್ಟ ಇನ್ನೂ ತಿಳಿದಿಲ್ಲವೇ ಎಂಬ ಅನೇಕ ಪ್ರಶ್ನೆಗಳು ಮೂಡುತ್ತದೆ. ಸುಮಾರು 55 ದಿನಗಳ ಲಾಕ್‌ಡೌನ್‌ನಿಂದ ಕಂಬಳಿ ಉತ್ಪಾದನೆ, ಮಾರಾಟವಿಲ್ಲದೆ ಕೈಯಲ್ಲಿ ಹಣವಿಲ್ಲದೆ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ವಸಹಾಯ ಸಂಘಗಳು, ಧರ್ಮಸ್ಥಳ ಸಂಘ, ಮೈಕ್ರೋ ಪೈನಾನ್ಸ್ಗಳಲ್ಲಿ ಪಡೆದ ಸಾಲವನ್ನು ಹೇಗೆ ತೀರಿಸುವು ದು. ಹೀಗಾಗಲೇ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಸೇರಿದಂತೆ ನೂರಾರು ಸಮಸ್ಯೆಗಳ ಸುಳಿಯಲ್ಲಿ ಕಂಬಳಿ ನೇಕಾರರು ಸಿಲುಕಿಕೊಂಡಿದ್ದು ಸರ್ಕಾರ ಕೂಡಲೇ ಇವರ ನೆರವಿಗೆ ಧಾವಿಸಿ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಕಂಬಳಿ ಉತ್ಪಾದನ ಸೊಸೈಟಿ ಅಧ್ಯಕ್ಷ ಮಾಜಿ ಸಿ.ಡಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.
* ಚೇತನ್