Advertisement

ನನ್ನಲ್ಲಿ ಗುರಿಯಿಲ್ಲ, ಆದರೆ ಬೆಟ್ಟದಷ್ಟು ಆಸೆಗಳಿವೆ: ಬ್ಲೇಡ್‌ ರನ್ನರ್‌ ಶಾಲಿನಿ ಸರಸ್ವತಿ

09:16 PM Nov 24, 2019 | Sriram |

ಉಡುಪಿ: ಅಂಗಛೇದದ ಬಳಿಕ 2 ವರ್ಷಗಳನ್ನು ನಾನು ಮೂರು ಗೋಡೆಗಳ ನಡುವೆ ವ್ಯಯಿಸಿದ್ದೇನೆ. ಇದು ನನ್ನ ಬದುಕಿಗೆ ಹೊಸ ತಿರುವು ನೀಡಿದೆ ಎಂದು ಬ್ಲೇಡ್‌ರನ್ನರ್‌ ಶಾಲಿನಿ ಸರಸ್ವತಿ ಹೇಳಿದರು.

Advertisement

ಮಣಿಪಾಲ ಮಾಹೆ ಹಾಗೂ “ಮಣಿಪಾಲ ಮ್ಯಾರಥಾನ್‌ 20′ ಸಹಯೋಗದಲ್ಲಿ ಶನಿವಾರ ಎಂಎಂಎಂಸಿ ಸಭಾಂಗಣದಲ್ಲಿ ಆಯೋಜಿಸಿದ್ದ “ಮೈ ಲೈಫ್-ಮೈ ಜರ್ನಿ’ ಸಂವಾದದಲ್ಲಿ ಮಾತನಾಡಿದರು.

ಪೋಷಕರು ನನಗೆ ಬಾಲ್ಯದಿಂದಲೇ ಸಾಕಷ್ಟು ಸ್ವಾತಂತ್ರ್ಯ ನೀಡಿದ್ದಾರೆ. ಆ ಕಾಲದಲ್ಲಿ “ಬಿಪಿಒ’ ರಾತ್ರಿಯ ಪಾಳಿಯಲ್ಲಿ ಕೆಲಸ ಮಾಡುವ ಹುಡುಗಿಯರನ್ನು ಸಮಾಜ ನೋಡುವ ದೃಷ್ಟಿ ಕುರಿತು ಪೋಷಕರಿಗೆ ಅರಿವಿತ್ತಾದರೂ ನನ್ನ ಮೇಲಿನ ವಿಶ್ವಾಸದಿಂದ ಕೆಲಸಕ್ಕೆ ಅನುಮತಿ ನೀಡಿದ್ದರು. ಆ ನಂಬಿಕೆ ನನ್ನನ್ನು ಇಲ್ಲಿಯ ವರೆಗೆ ಕರೆ ತಂದಿದೆ ಎಂದು ಹೇಳಿದರು.

ನಾನು ಹುಟ್ಟುತ್ತಲೇ ಕೈ ಕಾಲು ಕಳೆದುಕೊಂಡಿಲ್ಲ. ಕಾಂಬೋಡಿಯ ಪ್ರವಾಸದಿಂದ ಹಿಂದಿರುಗಿದ ಒಂದು ತಿಂಗಳ ಬಳಿಕ ನನಗೆ ಜ್ವರ ಕಾಣಿಸಿಕೊಂಡಿತ್ತು. ಆ ಸಂದರ್ಭ ನಾನು ಗರ್ಭಿಣಿಯಾಗಿದ್ದೆ. ವೈದ್ಯರು ಸಾಮಾನ್ಯ ಜ್ವರದ ಔಷಧಿ ನೀಡಿದರು. ಆದರೆ ಅದು ಸಾಮಾನ್ಯ ಜ್ವರವಾಗಿರಲಿಲ್ಲ. ಕಾಯಿಲೆ ಪತ್ತೆ ಹೆಚ್ಚುವಾಗ ಸಮಯ ಮೀರಿ ಹೋಗಿತ್ತು. ಮಹಾಮಾರಿ ಗ್ಯಾಂಗ್ರೀನ್‌ನಿಂದ ಎರಡು ಕೈ, ಕಾಲುಗಳ ಜತೆಗೆ ಜಗತ್ತನ್ನು ಕಾಣದ ಮಗುವನ್ನು ಸಹ ಕಳೆದುಕೊಂಡೆ ಎಂದು ಬದುಕಿನ ಹಾದಿ ವಿವರಿಸಿದರು.

ಜೀವನದಲ್ಲಿ ಆಸೆ ಇರಬೇಕು
ನನಗೆ ಜೀವನದಲ್ಲಿ ಗುರಿಯಿಲ್ಲ. ಆದರೆ ಬೆಟ್ಟದಷ್ಟು ಆಸೆಗಳಿವೆ. ಅದುವೇ ನನ್ನನ್ನು ಇಲ್ಲಿಯವರೆಗೆ ಜೀವಂತ ಇರಿಸಿದೆ. ನಾನು ಪ್ರತಿಯೊಂದು ಕೆಲಸಕ್ಕೆ ಬೇರೆ ಯವರನ್ನು ಅವಲಂಬಿಸಬೇಕಾಗಿದೆ. ಆದರೆ ಓಟದ ಗುರಿ ಮುಟ್ಟಲು ನನಗೆ ಯಾರ ಸಹಾಯ ಬೇಕಿಲ್ಲ. ಬ್ಲೇಡ್‌ ರನ್ನರ್‌ ಆಗಿ 10 ಕಿ.ಮೀ. ದೂರ ಕ್ರಮಿಸಿದ್ದೇನೆ. ಮುಂದೆ ನಡೆಯಲಿರುವ ಪ್ಯಾರಾ ಒಲಿಂಪಿಕ್ಸ್‌ 2020ರಲ್ಲಿ ಭಾಗವಹಿಸಬೇಕು ಎನ್ನುವ ಆಸೆ ಇದೆ ಎಂದು ಹೇಳಿದರು.

Advertisement

ಧನಾತ್ಮಕ ಶಕ್ತಿ ಇದೆ!
ಇಂದು ಹುಟ್ಟಿದ ಮಗುವಿಗೂ ಕ್ಯಾನ್ಸರ್‌ ಇರುತ್ತದೆ. ನನಗೆ ದೇವರು ಹಾಗೂ ಜಾತಿ ಕುರಿತು ನಂಬಿಕೆಯಿಲ್ಲ. ಜಗತ್ತಿನಲ್ಲಿ ಒಂದು ಧನಾತ್ಮಕ ಶಕ್ತಿ ಇದೆ. ಅದರಲ್ಲಿ ನಂಬಿಕೆ ಇದೆ. ಅದು ನಮಗೆ ಪ್ರಾಪ್ತಿಯಾದರೆ ಎಷ್ಟೇ ಕಷ್ಟದ ಕೆಲಸವಾದರೂ ಜಯಿಸಲು ಸಾಧ್ಯ ಎಂದರು.

ಸಮಾಜ ನೋಡುವ ರೀತಿ
ಸಮಾಜಕ್ಕೆ ಗಂಡ ಅನಾರೋಗ್ಯ ಪೀಡಿತರಾದರೆ ಹೆಂಡತಿ ನೋಡಿಕೊಳ್ಳುವುದು ಧರ್ಮ. ಆದರೆ ಹೆಂಡತಿ ಅನಾರೋಗ್ಯ ಪೀಡಿತಳಾದರೆ ಗಂಡ ಆಕೆಯನ್ನು ನೋಡಿಕೊಂಡರೆ ಅದು ತ್ಯಾಗವಾಗಿ ಕಾಣುತ್ತದೆ. ಆದರೆ ನನ್ನ ಪತಿ ಭಿನ್ನ. ನನ್ನ ಉಳಿವಿಗಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ ಎಂದು ಜೀವನದ ಕಷ್ಟದ ದಿನಗಳನ್ನು ಮೆಲಕು ಹಾಕಿದರು. ಅದಿತಿ ಶಾಸಿŒ ಉಪಸ್ಥಿತರಿದ್ದರು. ಡಾ| ಶೋಭಾ ಕಾರ್ಯಕ್ರಮ ನಿರ್ವಹಿಸಿದರು.

ಆಶಾ ಮನೋಭಾವ ಬೆಳೆಸಿಕೊಳ್ಳಿ
ನಾನು ನನ್ನ ಕೈ ಕಾಲು ಕಳೆದುಕೊಂಡ ಅನಂತರ ಸಾಧನೆ ಮಾಡಿರುವುದು ಹೆಚ್ಚು. ಬದುಕಿನ ಸಿಹಿ ಹಾಗೂ ಕಹಿ ಘಟನೆಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಜೀವನದಲ್ಲಿ ಸಾಧ್ಯವಾದಷ್ಟು ಉತ್ತಮವಾದ ಸ್ನೇಹಿತರನ್ನು ಸಂಪಾದಿಸಿ. ನಿಮ್ಮ ಕಷ್ಟ ಕಾಲದಲ್ಲಿ ಅವರು ಖಂಡಿತ ನೆರವಾಗುತ್ತಾರೆ. ಒಂದು ಕಹಿ ಘಟನೆಯಿಂದ ಬದುಕು ನಾಶವಾಗಿದೆ ನಿರಾಶಭಾವ ಬಿಟ್ಟು ಹೊಸ ಬದುಕಿನ ಮುನ್ನುಡಿ ಎನ್ನುವ ಆಶಾ ಮನೋಭಾವದೊಂದಿಗೆ ಜೀವನ ನಡೆಸಿ ಎಂದು ವಿದ್ಯಾರ್ಥಿಗಳಿಗೆ ಶಾಲಿನಿ ಸರಸ್ವತಿ ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next