Advertisement

ಎಚ್‌ಡಿಕೆ ಕಚೇರಿಯಿಂದ ಫೋನ್‌ ಕದ್ದಾಲಿಸಿ ಬ್ಲಾಕ್‌ಮೇಲ್‌

10:34 PM Aug 14, 2019 | Team Udayavani |

ಮೈಸೂರು: ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ, ಗೃಹ ಸಚಿವರಾಗಿದ್ದ ಎಂ.ಬಿ.ಪಾಟೀಲ್‌ ಸೇರಿದಂತೆ 17 ರೆಬೆಲ್‌ ಶಾಸಕರ ದೂರವಾಣಿ ಕದ್ದಾಲಿಸಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಎಚ್‌.ವಿಶ್ವನಾಥ್‌ ಒತ್ತಾಯಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರ ಕಚೇರಿಯಿಂದಲೇ ಅವರ ಆದೇಶದ ಮೇರೆಗೆ ನಮ್ಮೆಲ್ಲರ ದೂರವಾಣಿ ಕದ್ದಾಲಿಸಲಾಗಿದೆ. ದೂರವಾಣಿ ಕದ್ದಾಲಿಕೆ ನಂತರ ರೆಬೆಲ್‌ ಶಾಸಕರಿಗೆ ಕರೆ ಮಾಡಿ, ನಿಮ್ಮ ಹಗರಣ ಬಯಲು ಮಾಡುವುದಾಗಿ ಬ್ಲಾಕ್‌ಮೇಲ್‌ ಮಾಡುತ್ತಿದ್ದರು ಎಂದು ಆರೋಪಿಸಿದರು.

ಅಪರಾಧ: ದೂರವಾಣಿ ಕದ್ದಾಲಿಸುವುದು ಸಂವಿಧಾನದ ಪರಿಚ್ಛೇದ 21ರ ಉಲ್ಲಂಘನೆ. ಗಂಡ ಕೂಡ ಹೆಂಡತಿಯ ದೂರವಾಣಿ ಕದ್ದಾಲಿಸುವುದು ಅಪರಾಧ. ಸಂಶಯದ ಮೇಲೆ ಯಾರಾದರೊಬ್ಬರ ದೂರವಾಣಿ ಕದ್ದಾಲಿಕೆ ಮಾಡಬೇಕಾದರೆ ಕೇಂದ್ರ ಗೃಹ ಸಚಿವಾಲಯದ ಅನುಮತಿ ಪಡೆಯಬೇಕು. ಆದರೆ, ಹಿಂದಿನ ಮುಖ್ಯಮಂತ್ರಿ ಕಚೇರಿಯಿಂದ ಎಲ್ಲರ ದೂರವಾಣಿ ಕದ್ದಾಲಿಸಲಾಗಿದೆ.

ಬಹಳ ವರ್ಷಗಳಿಂದ ಸಿದ್ದರಾಮಯ್ಯ ಅವರ ಆಪ್ತ ಸಹಾಯಕನಾಗಿರುವ ವೆಂಕಟೇಶ್‌ ಎನ್ನುವ ಅಧಿಕಾರಿಯ ದೂರವಾಣಿ ಕದ್ದಾಲಿಸಿ, ಆತ ಕ್ರಿಮಿನಲ್‌ ಅನ್ನುವ ಕಾರಣ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ಸಹಾಯಕನ ದೂರವಾಣಿಯನ್ನೇ ಕದ್ದಾಲಿಸಲಾಗಿದೆ ಎಂದ ಮೇಲೆ ಸಿದ್ದರಾಮಯ್ಯ ಅವರ ದೂರವಾಣಿ ಕದ್ದಾಲಿಸಿರುವುದಿಲ್ಲವೇ ಎಂದು ಪ್ರಶ್ನಿಸಿದರು.

ವಿಶ್ವಾಸವಿರಲಿಲ್ಲ: ಜೆಡಿಎಸ್‌ನ ಮುಖ್ಯಮಂತ್ರಿ, ತಮ್ಮ ಪಕ್ಷದ ರಾಜ್ಯಾಧ್ಯಕ್ಷನ ದೂರವಾಣಿಯನ್ನೇ ಕದ್ದಾಲಿಸುತ್ತಾರೆಂದರೆ, ನಮ್ಮ ಮೇಲೆ ಅವರಿಗೆ ವಿಶ್ವಾಸವಿರಲಿಲ್ಲ ಎಂದಾಯ್ತು, ನಮ್ಮ ರಾಜೀನಾಮೆಗೆ ಇವೆಲ್ಲ ಕಾರಣಗಳಾಗಿವೆ ಎಂದರು.

Advertisement

ಸ್ವಾತಂತ್ರ್ಯ ಹಕ್ಕು: ವಿಶ್ವಾಸ ಮತಯಾಚನೆ ಮೇಲಿನ ಚರ್ಚೆ ಸಂದರ್ಭದಲ್ಲಿ ಎಚ್‌.ಡಿ.ಕುಮಾರಸ್ವಾಮಿಯವರೇ ನನ್ನ ಅನುಪಸ್ಥಿತಿಯಲ್ಲಿ ಸದನದಲ್ಲಿ ನನ್ನ ಬಗ್ಗೆ ಮಾತನಾಡಿದ್ದಲ್ಲದೇ, ಎಚ್‌.ವಿಶ್ವನಾಥ್‌ ಸಿಕ್ಕಿ ಹಾಕಿಕೊಂಡಿದ್ದಾರೆ, ಛೀ-ಛೀ ಕೇಳ್ಳೋಕ್ಕಾಗಲ್ಲ ಎಂದಿದ್ದರು. ದೂರವಾಣಿ ಇರುವುದು ಊಟ ಆಯ್ತ, ತಿಂಡಿ ಆಯ್ತ? ಇಷ್ಟು ಕೇಳುವುದಕ್ಕೇನಾ, ಏನು ಮಾತನಾಡಬೇಕೆಂಬುದು ನನ್ನ ಸ್ವಾತಂತ್ರ್ಯ ಮತ್ತು ಹಕ್ಕು, ಬೇಕಾದ್ದು ಮಾತನಾಡುತ್ತೇನೆ. ಹೀಗೇ ಮಾತನಾಡಬೇಕು ಎಂದು ಹೇಳ್ಳೋಕೆ ನೀವ್ಯಾರು ಎಂದು ಪ್ರಶ್ನಿಸಿದರು.

ದೂರವಾಣಿ ಕದ್ದಾಲಿಕೆ ಹೊಸದಲ್ಲ, ಪ್ರಧಾನಿ ರಾಜೀವ್‌ಗಾಂಧಿ, ರಾಷ್ಟ್ರಪತಿ ಜೇಲ್‌ಸಿಂಗ್‌ ಅವರ ದೂರವಾಣಿಯನ್ನೇ ಕದ್ದಾಲಿಕೆ ಮಾಡಿದ್ದರು. ರಾಜ್ಯದಲ್ಲೂ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಅವರು ರಾಜೀನಾಮೆ ನೀಡಿದ್ದರು. ಮುಖ್ಯಮಂತ್ರಿಯಾದವರಿಗೆ ಅಭದ್ರತೆ ಕಾಡುವಾಗ ಇವೆಲ್ಲ ನಡೆಯುತ್ತವೆ. ಆದರೆ, ಈಗ ನಾವು ಯಾರ ರಾಜೀನಾಮೆ ಕೇಳ್ಳೋಣ? ಮಾಡಿದ್ದುಣ್ಣೋ ಮಾರಾಯ ಎನ್ನುವಂತೆ ಮುಖ್ಯಮಂತ್ರಿಯಾಗಿದ್ದವರು ರಾಜೀನಾಮೆ ಕೊಟ್ಟು ಹೋಗಿದ್ದಾರೆ ಎಂದರು.

ಆರು ತಿಂಗಳ ಹಿಂದೆಯೇ ಅನುಮಾನವಿತ್ತು: ಆರು ತಿಂಗಳ ಹಿಂದೆಯೇ ಕಾಂಗ್ರೆಸ್‌ನ ಹಿರಿಯ ಶಾಸಕರಾದ ಎಚ್‌.ಕೆ.ಪಾಟೀಲ, ಬಿಜೆಪಿ ಶಾಸಕ ಆರ್‌.ಅಶೋಕ ಅವರು ದೂರವಾಣಿ ಕದ್ದಾಲಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ದೂರವಾಣಿಯನ್ನೇ ಕದ್ದಾಲಿಸುತ್ತಾರೆ ಎಂದರೆ ಮುಖ್ಯಮಂತ್ರಿಯಾಗಿ ಎಲ್ಲಾ ಕಾನೂನುಗಳನ್ನೂ ಉಲ್ಲಂ ಸಿದ್ದ ಎಚ್‌.ಡಿ.ಕುಮಾರಸ್ವಾಮಿ ಯಾವ ಮಟ್ಟಕ್ಕೆ ಇಳಿದಿದ್ದರು ಎಂಬುದು ಗೊತ್ತಾಗುತ್ತದೆ.

ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಯಾವ್ಯಾವ ಪೊಲೀಸ್‌ ಅಧಿಕಾರಿಗಳು ಭಾಗಿಯಾಗಿದ್ದಾರೆ? ಯಾರು, ಯಾರಿಗೆ ಕದ್ದಾಲಿಕೆಗೆ ಆದೇಶ ಕೊಟ್ಟರು ಎಂಬ ಬಗ್ಗೆ ಸಮಗ್ರ ತನಿಖೆ ನಡೆದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಗಮನಹರಿಸಿ, ದೂರಸಂಪರ್ಕ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಎಚ್‌.ವಿಶ್ವನಾಥ್‌ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next