ಮೈಸೂರು: ವಾರ ಪತ್ರಿಕೆ ಹೆಸರಿನಲ್ಲಿ ಶಾಸಕ ಎಸ್.ಎ.ರಾಮದಾಸ್ ಅವರನ್ನು ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಿದ್ದ ಪತ್ರಕರ್ತನನ್ನು ಕುವೆಂಪುನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪ್ರದೀಪ್ ಬಂಧಿತ ಆರೋಪಿ. ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ರಾಮದಾಸ್ ಮತ್ತು ಅವರ ಸಹೋದರನ ಬಗ್ಗೆ ಅವಹೇಳನಕಾರಿ ವರದಿ ಪ್ರಕಟಿಸಿದ್ದು, 25 ಲಕ್ಷ ರೂ. ಹಣ ನೀಡಿದರೆ ಪತ್ರಿಕೆಯನ್ನು ಜನರ ಕೈಗೆ ಸಿಗದಂತೆ ಸುಟ್ಟುಹಾಕುವುದಾಗಿ ತಿಳಿಸಿದ್ದಾನೆ.
ಆದರೆ, ರಾಮದಾಸ್, ಪ್ರದೀಪ್‌ನ ಬೇಡಿಕೆಗೆ ಸೊಪ್ಪು ಹಾಕದಿದ್ದಾಗ. ನಗರದ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರೊಬ್ಬರು ಮಧ್ಯಸ್ಥಿಕೆವಹಿಸಿ, ಡೀಲ್ ಕುದುರಿಸಲು ಶಾಸಕರನ್ನು ತಮ್ಮ ತೋಟದ ಮನೆಗೆ ಕರೆಸಿಕೊಂಡಿದ್ದಾರೆ. ಇದರಿಂದ ಎಚ್ಚೆತ್ತ ಶಾಸಕ ರಾಮದಾಸ್, ತಮ್ಮ ಆಪ್ತ ಸಹಾಯಕನ ಮೂಲಕ ಕುಟುಕು ಕಾರ್ಯಾಚರಣೆ ಮಾಡಿಸಿ ತಾವೇ ಪ್ರಕರಣವನ್ನು ದಾಖಲೆ ಸಮೇತ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಣ್ಣ ಹೆಣ್ಣು ಪ್ರಿಯ – ತಮ್ಮ ಮಣ್ಣು ಪ್ರಿಯ ಎಂಬ ಶೀರ್ಷಿಕೆಯಡಿ ರವೀಶ್ ಸಾರಥ್ಯದ ಹಾಯ್ ಬೆಂಗಳೂರು ಪಾಕ್ಷಿಕ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿ ಪತ್ರಿಕೆ ಹೆಸರಿನಲ್ಲಿ ಪ್ರದೀಪ್ ಹಾಗೂ ವೈದ್ಯ ಮಧು ಎಂಬುವವರು ಬ್ಲಾಕ್‌ಮೇಲ್ ಮಾಡಿ 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಬ್ಲಾಕ್‌ಮೇಲ್ ಮಾಡಿದ್ದ ಪ್ರದೀಪ್ ಬಂಧನವಾಗಿದ್ದು ಡಾ.ಮಧುಗೆ ಜಾಮೀನು ಸಿಕ್ಕಿದೆ. ಈ ಕುರಿತು ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ರಿಕೆಯ ಪ್ರಕಾಶಕ ರವೀಶ್, ಕಾರ್ಯನಿರ್ವಾಹಕ ಸಂಪಾದಕ ಶರತ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಎಸ್.ಎ.ರಾಮದಾಸ್, ಇಡೀ ಪ್ರಕರಣದ ಕುಟುಕು ಕಾರ್ಯಾಚರಣೆಯಲ್ಲಿ ಪತ್ರಕರ್ತ ರವಿ ಬೆಳಗೆರೆ ಹೆಸರು ಪದೇ ಪದೆ ಕೇಳಿಬಂದಿರುವುದರಿಂದ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ರವಿ ಬೆಳಗೆರೆಯವರಿಗೆ ಪತ್ರ ಬರೆದಿದ್ದೇನೆ.
ಇದು ಚುನಾವಣೆಯಲ್ಲಿ ನನ್ನನ್ನು ಕುಗ್ಗಿಸುವ ತಂತ್ರ. ಈ ಬಗ್ಗೆ ಮತ್ತಷ್ಟು ತನಿಖೆಯಾಗಬೇಕು. ಈ ಸಂಬಂಧ ನನ್ನ ಆಪ್ತ ಸಹಾಯಕ ಮುದ್ದು ಕೃಷ್ಣರಿಂದ ದೂರು ದಾಖಲಿಸಿದ್ದೇನೆ ಎಂದು ತಿಳಿಸಿದರು.