ಬೆಂಗಳೂರು: ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಯುವತಿಯ ಸ್ನೇಹ ಗಳಿಸಿ ಕೆಲಸ ಕೊಡುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ಆಗ್ನೇಯ ಸಿಇಎನ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಆಂಧ್ರಪ್ರದೇಶದ ಕನ್ನಂಪಲ್ಲಿ ಮೂಲದ ಕೋರಮಂಗಲದ ನಿವಾಸಿ ದಿಲ್ಲಿ ಪ್ರಸಾದ್ (26) ಬಂಧಿತ.
2018ರಿಂದ ದಿಲ್ಲಿ ಪ್ರಸಾದ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಕೆಲಸ ಮಾಡುತ್ತಿದ್ದ. ಸುಲಭವಾಗಿ ಹಣ ಸಂಪಾದಿಸುವುದು ಹಾಗೂ ಸುಂದರವಾದ ಯುವತಿಯರ ಜತೆಗೆ ಲೈಂಗಿಕ ಸಂಪರ್ಕ ಹೊಂದಲು ಅಡ್ಡದಾರಿ ಹಿಡಿದಿದ್ದ. ಅದರಂತೆ ಇನ್ ಸ್ಟಾಗ್ರಾಂನಲ್ಲಿ ಮೋನಿಕಾ, ಮ್ಯಾನೇಜರ್ ಸೇರಿದಂತೆ 5ಕ್ಕಿಂತ ಹೆಚ್ಚು ನಕಲಿ ಖಾತೆ ತೆರೆದಿದ್ದ. ನಂತರ ಹಲವಾರು ಯುವತಿ ಹಾಗೂ ಮಹಿಳೆಯರೊಂದಿಗೆ ಚಾಟ್ ಮಾಡುತ್ತಿದ್ದ. ಬೆಂಗಳೂರಿನ ಪ್ರತಿಷ್ಠಿತ ಎಂಎನ್‌ಸಿ ಸಂಸ್ಥೆಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ನನಗೆ ಗೊತ್ತಿರುವ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ಯುವತಿಯರನ್ನು ನಂಬಿಸುತ್ತಿದ್ದ. ಆತನ ಮಾತಿಗೆ ಮರುಳಾಗುತ್ತಿದ್ದ ಯುವತಿಯರು ಆತನ ಸೂಚನೆಯಂತೆ ತಮ್ಮ ಊರಿನಿಂದ ಆರೋಪಿ ತಿಳಿಸಿದ ಜಾಗಕ್ಕೆ ಬರುತ್ತಿದ್ದರು. ಪೂರ್ವಸಂಚಿನಂತೆ ಮಡಿವಾಳದ ಓಯೊ ರೂಮ್‌ವೊಂದನ್ನು ಬುಕ್ ಮಾಡಿ ರೂಮ್‌ನಲ್ಲಿ ಸಂದರ್ಶನ ನಡೆಯಲಿದೆ ಎಂದು ಒಳಗೆ ಕರೆಸಿಕೊಳ್ಳುತ್ತಿದ್ದ.
ಯುವತಿಯರು ರೂಂಗೆ ಎಂಟ್ರಿ ಕೊಡುತ್ತಿದ್ದಂತೆ ವರಸೆ ಬದಲಿಸುತ್ತಿದ್ದ ದಿಲ್ಲಿ ಪ್ರಸಾದ್, ಲೈಂಗಿಕವಾಗಿ ಸಹಕರಿಸಿದರೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದ. ಒಂದು ವೇಳೆ ಯುವತಿ ಯರು ಇದಕ್ಕೆ ಒಪ್ಪದಿದ್ದರೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಯುವತಿಯರ ಜತೆಗೆ ಕಳೆದ ಖಾಸಗಿ ದೃಶ್ಯವನ್ನು ಅವರಿಗೆ ತಿಳಿಯದಂತೆ ರಹಸ್ಯವಾಗಿ ಮೊಬೈಲ್‌ನಲ್ಲಿ ಸೆರೆಹಿಡಿದುಕೊಳ್ಳುತ್ತಿದ್ದ. ಅದೇ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಕೂಡ ಮಾಡುತ್ತಿದ್ದ. ಇದೇ ಮಾದರಿಯಲ್ಲಿ 10ಕ್ಕೂ ಅಧಿಕ ಯುವತಿಯರಿಗೆ ಕೆಲಸ ಕೊಡಿಸುವುದಾಗಿ ವಂಚಿಸಿ ದುರ್ಬಳಕೆ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಕ್ಕಿ ಬಿದ್ದಿದ್ದು ಹೇಗೆ?: ಇತ್ತೀಚೆಗೆ ಯುವತಿ ಯೊಬ್ಬಳಿಗೆ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾದ ಆರೋಪಿಯು ಕೆಲಸ ಕೊಡುವುದಾಗಿ ನಂಬಿಸಿದ್ದ. ವಿವಿಧ ಕಾರಣಗಳನ್ನು ನೀಡಿ ಯುವತಿಯ ನಗ್ನ ಫೋಟೊಗಳನ್ನು ಇನ್‌ಸ್ಟಾಗ್ರಾಂ ಖಾತೆಯ ಮೂಲಕ ತರಿಸಿಕೊಂಡಿದ್ದ. ಇದಾದ ಬಳಿಕ ತಾನು ಹೇಳುವ ವ್ಯಕ್ತಿಯ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ಸಹಕರಿಸಬೇಕು. ಇಲ್ಲದಿದ್ದರೆ ಈ ಫೋಟೋಗಳನ್ನು ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದ. ನಂತರ ಆಕೆಯನ್ನು ಮಡಿವಾಳದಲ್ಲಿ ಓಯೋ ರೂಂಗೆ ಕರೆಸಿಕೊಂಡು ಲೈಂಗಿಕವಾಗಿ ಬಳಸಿ ಆ ದೃಶ್ಯವನ್ನು ಸೆರೆಹಿಡಿದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ನೊಂದ ಯುವತಿಯು ಆಗ್ನೇಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಳು.
ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತನ ಮೊಬೈಲ್ ಪರಿಶೀಲಿಸಿದಾಗ ಆರೋಪಿ ಕಳೆದ ಎರಡೂವರೆ ವರ್ಷಗಳಿಂದ ಈ ಜಾಲದಲ್ಲಿ ತೊಡಗಿಸಿಕೊಂಡಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.