ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಅವಿವಾಹಿತ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿ ಅವರ ಖಾಸಗಿ ಫೋಟೋಗಳನ್ನು ತೆಗೆದುಕೊಂಡು ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಟೆಕ್ಕಿಯನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚತ್ತೀಸ್‌ಘಡ ಮೂಲದ ಅಭಿಷೇಕ ಅಲಿಯಾಸ್ ಸುಶಾಂತ್ ಜೈನ್ (33) ಬಂಧಿತ. ಆರೋಪಿಯಿಂದ 3.60 ಲಕ್ಷ ರೂ. ನಗದು, ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಆರೋಪಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ವಿವಾಹವಾಗಿದ್ದ ಈತ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಎಚ್‌ಎಸ್‌ಆರ್ ಲೇಔಟ್ ನಲ್ಲಿ ನೆಲೆಸಿದ್ದಾನೆ. ಟೆಂಡರ್ ಆ್ಯಪ್ ಮೂಲಕ ಅವಿವಾಹಿತ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಸಲುಗೆ ಬೆಳೆಸುತ್ತಿದ್ದ. ನಂತರ ಡೇಟಿಂಗ್ ಮಾಡುವ ನೆಪದಲ್ಲಿ ಅವರ ಮನೆಗೆ ತೆರಳುತ್ತಿದ್ದ. ಈ ವೇಳೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಆಕೆಯ ಖಾಸಗಿ ಫೋಟೊಗಳನ್ನು ಸಂಗ್ರಹಿಸಿಕೊಳ್ಳುತ್ತಿದ್ದ. ಕೆಲ ದಿನಗಳ ಬಳಿಕ ಮಹಿಳೆಯ ಮೊಬೈಲ್‌ಗಳಿಗೆ ಈ ರೀತಿ ಖಾಸಗಿ ಫೋಟೊಗಳನ್ನು ಕಳುಹಿಸಿ ಹಣ ಬೇಡಿಕೆ ಇಡುತ್ತಿದ್ದ. ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ಹೇಳಿದರು.
ಇತ್ತೀಚೆಗೆ ಫೆ.1ರಂದು ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದ ಮಹಿಳೆಯೊಬ್ಬರ ಮನೆಗೆ ಸುಶಾಂತ್ ಹೋಗಿದ್ದ. ಈ ವೇಳೆ ಇಬ್ಬರು ಬೆತ್ತಲಾಗಿದ್ದಾಗ ಆಕೆ ಫೋಟೊಗಳನ್ನು ಮೊಬೈಲ್‌ನಲ್ಲಿ ಸಂಗ್ರಹಿಸಿ, ನಂತರ ಆಕೆಗೆ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಈ ಸಂಬಂಧ ಸಂತ್ರಸ್ತೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.