ಬೆಂಗಳೂರು: ಸರ್ಕಾರಿ ಎಂಜಿನಿಯರ್‌ಗಳನ್ನೇ ಟಾರ್ಗೆಟ್ ಮಾಡಿ ದುಡ್ಡು ವಸೂಲಿಗಿಳಿದಿದ್ದ ನಕಲಿ ಲೋಕಾಯುಕ್ತ ಡಿವೈಎಸ್‌ಪಿಯ ಸಹಚರ ವಿಧಾನಸೌಧ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬೆಳಗಾವಿ ಮೂಲದ ಸಂತೋಷ್ ಕೊಪ್ಪದ್ (25) ಬಂಧಿತ. ಪ್ರಮುಖ ಆರೋಪಿ ವಿಶಾಲ್ ಪಾಟೀಲ್‌ಗಾಗಿ ಶೋಧ ನಡೆಯುತ್ತಿದೆ.
ನಾಪತ್ತೆಯಾಗಿರುವ ಆರೋಪಿ ವಿಶಾಲ್ 2020ರಿಂದಲೂ ಇದೇ ದಂಧೆ ನಡೆಸುತ್ತಿರುವ ಸಂಗತಿ ಗೊತ್ತಾಗಿದೆ. ಸದ್ಯ ರದ್ದಾಗಿರುವ ಎಸಿಬಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಎಸಿಬಿ ಡಿವೈಎಸ್‌ಪಿಯಂತೆ ಬಿಂಬಿಸಿಕೊಂಡು ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಎಂಜಿನಿಯರ್‌ಗಳ ನಂಬರ್ ಕಲೆ ಹಾಕುತ್ತಿದ್ದ. ಬಳಿಕ ಎಂಜಿನಿಯರ್ ಗಳಿಗೆ ಕರೆ ಮಾಡಿ ತನ್ನನ್ನು ಎಸಿಬಿ ಡಿವೈಎಸ್‌ಪಿ ಎಂದು ಪರಿಚಯಿಸಿಕೊಂಡು ನಿಮ್ಮ ವಿರುದ್ಧ ಎಸಿಬಿ ದಾಳಿ ನಡೆಯಲಿದೆ ಎಂದು ಹೆದರಿಸುತ್ತಿದ್ದ. ಇದನ್ನು ತಪ್ಪಿಸಬೇಕಾದರೆ ತನಗೆ 1 ಲಕ್ಷ ರೂ. ದುಡ್ಡು ಕೊಡುವಂತೆ ಸೂಚಿಸುತ್ತಿದ್ದ. ಡೀಲ್ ಕುದುರಿಸಿದ ಬಳಿಕ ತನ್ನ ಸಹಚರ ಸಂತೋಷ್ ಕೊಪ್ಪದನನ್ನು ಬೆಂಗಳೂರಿಗೆ ಕಳುಹಿಸಿ ದುಡ್ಡು ವಸೂಲಿ ಮಾಡಿಸುತ್ತಿದ್ದ. ಎಸಿಬಿ ರದ್ದಾಗಿ ಲೋಕಾಯುಕ್ತ ಪೊಲೀಸರಿಗೆ ಮತ್ತೆ ಅಧಿಕಾರ ಸಿಕ್ಕಿದ ಬಳಿಕ ಲೋಕಾಯುಕ್ತ ಡಿವೈಎಸ್‌ಪಿ ಎಂದು ಬಿಂಬಿಸಿಕೊಂಡು ಮತ್ತೆ ವಸೂಲಿಗೆ ಇಳಿದಿದ್ದ. ಸರ್ಕಾರಿ ಅಭಿಯಂತರಿಗೆ ಕರೆ ಮಾಡಿ ಭ್ರಷ್ಟಾಚಾರ ಎಸಗಿ ಅಕ್ರಮ ಆಸ್ತಿ ಗಳಿಸಿರುವುದಕ್ಕೆ ಸಾಕ್ಷ್ಯ ಸಿಕ್ಕಿದ್ದು, ಲೋಕಾಯುಕ್ತ ಪೊಲೀಸರು ಸದ್ಯದಲ್ಲೇ ನಿಮ್ಮ ಆಸ್ತಿ ಮೇಲೆ ದಾಳಿ ಮಾಡಲಿದ್ದಾರೆ ಎಂದು ಬೆದರಿಕೆ ಹಾಕುತ್ತಿದ್ದ.
ಆತಂಕಗೊಳ್ಳುತ್ತಿದ್ದ ಕೆಲ ಎಂಜಿನಿಯರ್‌ಗಳು ಆರೋಪಿಗೆ ದುಡ್ಡು ಕೊಡುತ್ತಿದ್ದರು. ಇತ್ತೀಚೆಗೆ ಲಿಂಗಸುಗೂರು, ಕುಷ್ಠಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಎಂಜಿನಿಯರ್‌ಗಳಿಗೆ ಹೆದರಿಸಿ ತನ್ನ ಮೇಲೆ ಅನುಮಾನ ಬಾರದಂತೆ ಬೆಂಗಳೂರಿನ ವಿಧಾನಸೌಧದ ಬಳಿ ಅವರನ್ನು ಕರೆಸಿಕೊಂಡು ಸಹಚರ ಸಂತೋಷ್‌ಗೆ ಹಣ ಕೊಡುವಂತೆ ಸೂಚಿಸುತ್ತಿದ್ದ. ಪ್ರಮುಖ ಆರೋಪಿ ವಿಶಾಲ್ ವಿರುದ್ಧ 2020ರಲ್ಲಿ ಇದೇ ಮಾದರಿಯ ವಂಚನೆ ಪ್ರಕರಣದಡಿ ಬೆಳಗಾವಿಯ ಬೈಲಹೊಂಗಲ ಪೊಲೀಸರು ಬಂಧಿಸಿದ್ದರು. ಜಾಮೀನು ಪಡೆದು ಹೊರಬಂದು ಮತ್ತೆ ಹಳೆ ಚಾಳಿ ಮುಂದುವ ರೆಸುತ್ತಿದ್ದ. ಹಣ ಸಂಗ್ರಹಿಸುವುದಾಕ್ಕಾಗಿಯೇ ತನ್ನನ್ನು ನೇಮಿಸಿಕೊಂಡಿರುವುದಾಗಿ ಸಂತೋಷ್ ಕೊಪ್ಪದ್ ವಿಚಾರಣೆ ವೇಳೆ ತಿಳಿಸಿದ್ದಾನೆ.
ಪ್ರಮುಖ ಆರೋಪಿ ಜಸ್ಟ್‌ಮಿಸ್: ಎಂಜಿನಿಯರ್‌ಗಳು ವಿಶಾಲ್ ಪಾಟೀಲ್ ಮೇಲೆ ಅನುಮಾನಗೊಂಡು ಲೋಕಾಯುಕ್ತ ಪೊಲೀಸರ ಬಳಿ ವಿಚಾರಿಸಿದ್ದರು. ಲೋಕಾಯುಕ್ತ ಪೊಲೀಸರು ತಮಗೆ ಈ ವಿಚಾರ ತಿಳಿದೇ ಇಲ್ಲ. ನಾವು ಕಾನೂನು ಪ್ರಕಾರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದಾಗ ವಿಶಾಲ್ ಪಾಟೀಲ್‌ನ ಅಸಲಿ ಬಣ್ಣ ಎಂಜಿನಿಯರ್‌ಗಳಿಗೆ ಗೊತ್ತಾಗಿದೆ. ಈ ಸಂಗತಿ ಅರಿತ ಲೋಕಾಯುಕ್ತ ಪೊಲೀಸರು 2022ರಲ್ಲಿ ಆರೋಪಿ ವಿರುದ್ಧ ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ವಿಧಾನ ಸೌಧ ಪೊಲೀಸರು ಆರೋಪಿಗೆ ಹುಡುಕಾಟ ನಡೆಸುತ್ತಿದ್ದರು. ವಿಶಾಲ್ ಎಂಜಿನಿಯರ್‌ವೊಬ್ಬನಿಂದ ದುಡ್ಡು ವಸೂಲಿ ಮಾಡುವ ವೇಳೆ ಬೆಳಗಾವಿಗೆ ತೆರಳಿ ಆತನ ಬಂಧನಕ್ಕೆ ವಿಫಲ ಪ್ರಯತ್ನ ಮಾಡಲಾಗಿತ್ತು. ಬಳಿಕ ತಾಂತ್ರಿಕ ಕಾರ್ಯಾಚರಣೆ ನಡೆಸಿ ಆ.29ರಂದು ಬೆಳಗಾವಿಯಲ್ಲಿ ಆತನನ್ನು ಪತ್ತೆ ಹಚ್ಚಲಾಗಿತ್ತು. ಆದರೆ, ವಿಶಾಲ್ ಪೊಲೀಸರು ಬರುತ್ತಿರುವುದನ್ನು ಅರಿತು ಪರಾರಿಯಾಗಿದ್ದ. ಇತ್ತ ಆತನ ಸಹಚರ ಸಂತೋಷ್‌ನನ್ನು ಬೆಳಗಾವಿಯಲ್ಲಿ ವಶಕ್ಕೆ ಪಡೆದು ನಗರಕ್ಕೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ.