Advertisement

ಈ ಬಾರಿಯೂ ರೈತರ ಕೈ ಹಿಡಿಯದ ಕಪ್ಪು ಬಂಗಾರ!

02:56 PM Mar 16, 2020 | Naveen |

ಶೃಂಗೇರಿ: ರೈತರು ಅಡಿಕೆ ಮತ್ತು ಕಾಫಿಯಲ್ಲಿ ಆದ ನಷ್ಟವನ್ನು ಸರಿದೂಗಿಸಲು ಕಾಳುಮೆಣಸಿನ ಬೆಳೆಯತ್ತ ಚಿತ್ತ ಹರಿಸಿದ್ದಾರೆ. ಆದರೆ ಕಳೆದ 5 ವರ್ಷಗಳಿಂದ ಕರಿಮೆಣಸಿನ ಬೆಳೆಗೂ ಕರಿನೆರಳು ಬಿದ್ದಿದೆ.

Advertisement

ಉತ್ತಮ ಧಾರಣೆ ಇಲ್ಲದೆ ಬೆಳೆಗಾರರು ಸಮಸ್ಯೆಯ ಸುಳಿಯಲ್ಲಿ ಮುಳುಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಲೆನಾಡು ಭಾಗದಲ್ಲಿ ದಾಖಲೆ ಪ್ರಮಾಣದಲ್ಲಿ ಅತಿವೃಷ್ಟಿಯಾದ ಪರಿಣಾಮ ರೈತ ಸಾಕಷ್ಟು ಹೈರಣಾಗಿದ್ದಾನೆ. ಇಂತಹ ಸಂದರ್ಭದಲ್ಲಿ ಕೃಷಿಕನನ್ನು ಕೈ ಹಿಡಿದಿರುವುದು ಸಾಂಬಾರು ಬೆಳೆಯ ರಾಜ ಕಾಳುಮೆಣಸು.

ಇದೀಗ ತಾಲೂಕಿನಾದ್ಯಂತ ಕಾಳುಮೆಣಸಿನ ಕೊಯ್ಲಿನ ಭರಾಟೆ ಜೋರಾಗಿ ನಡೆಯುತ್ತಿದೆ. ಒಂದೆಡೆ ಕಾರ್ಮಿಕರ ಕೊರತೆ ಮತ್ತೂಂದೆಡೆ ಕಾಳುಮೆಣಸಿನ ಗೆರೆ ಬಿಡಿಸಲು ಅಲ್ಯುಮಿನಿಯಂ ಏಣಿಯನ್ನು ಅವಲಂಬಿಸಬೇಕಾಗಿದೆ. ಆದರೆ ಅಲ್ಯುಮಿನಿಯಂ ಏಣಿಯ ಬೆಲೆ ಗಗನಕ್ಕೇರಿದೆ. ನಂತರ ಗೆರೆಯಿಂದ ಕಾಳು ಬಿಡಿಸಲು ಯಂತ್ರದ ಅವಶ್ಯಕತೆ ಇದೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂಬುದು ರೈತರ ಅಭಿಪ್ರಾಯ.

ಕಾಳು ಮೆಣಸು ಕಪ್ಪು ಬಂಗಾರ ಎಂಬ ಹೆಸರು ಪಡೆದಿದ್ದು ಸ್ವಾತಂತ್ರ್ಯ  ಪೂರ್ವದಲ್ಲಿ ಪಾಶ್ಚಾತ್ಯರು ಮತ್ತು ಅರಬ್ಬರು ಭಾರತಕ್ಕೆ ಹಡಗುಗಳ ಮುಖಾಂತರ ಬಂದು ಕಪ್ಪು ಬಂಗಾರವನ್ನು ಖರೀದಿಸುತ್ತಿದ್ದರು ಎಂಬುದು ಐತಿಹ್ಯ. 1940-1945ರ ಆಸುಪಾಸಿನಲ್ಲಿ ಮನೆಗೆ ಸೀಮಿತವಾದ ಕರಿಮೆಣಸು ಮಾರುಕಟ್ಟೆಗೆ ಪ್ರವೇಶಿಸಿತ್ತು. ಮಲೆನಾಡಿನಲ್ಲಿ ಕಾಳುಮೆಣಸು ಹಲವು ಬಗೆಯ ತಳಿಗಳನ್ನು ಹೊಂದಿದೆ. ಕರಿಮುಂಡ, ಫಣಿಯೂರು, ಮಲ್ಲಿಸರ, ಉದ್ದಗೆರೆ ಮುಂತಾದ ತಳಿಗಳು ಪ್ರಚಲಿತದಲ್ಲಿದೆ. ದಶಕದ ಹಿಂದೆ 1
ಕೆ.ಜಿ ಕಾಳುಮೆಣಸು 500 ರೂ ನಿಂದ 700 ರವರೆಗೆ ಇತ್ತು. ಆದರೆ ಇಂದು 300 ರೂಗಳ ಆಸುಪಾಸಿನಲ್ಲಿದೆ. ಕಾಳುಮೆಣಸಿನ ಬೆಳೆ ಅತ್ಯಂತ ಲಾಭದಾಯಕ ಕೃಷಿ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ಕೆಂಪು ಮಿಶ್ರಿತ ಮಣ್ಣು ಹಾಗೂ ತೇವಾಂಶವಿರುವ ಜಾಗದಲ್ಲಿ ತೊಗಟೆ ಚೆನ್ನಾಗಿರುವ ಸಿಲ್ವರ್‌, ನೇರಳೆ, ಹಲಸು, ಹಾಲ್ವಾಣ ಮೊದಲಾದ ಮರಗಳಿಗೆ ಹಬ್ಬಿಸಿ ಬೆಳೆಗಳನ್ನು ತೆಗೆಯುವತ್ತ ಗಮನ ಹರಿಸಿದ್ದಾರೆ.

Advertisement

ಅಡಿಕೆ ತೋಟಕ್ಕೆ ಹಳದಿ ಎಲೆ ರೋಗ ಬಾಧಿ ಸಿರುವ ಹಿನ್ನೆಲೆಯಲ್ಲಿ ಕಾಡು ಮರಗಳಿಗೆ ಬಳ್ಳಿಗಳನ್ನು ಹಬ್ಬಿಸುತ್ತಿರುವುದು ಕಂಡು ಬರುತ್ತಿದೆ. ಆದರೆ ಕಾಳುಮೆಣಸಿಗೆ ಹಲವಾರು ಬಾಧಕಗಳಿವೆ. ಒಂದೆಡೆ ಸೊರಗು ರೋಗದಿಂದಾಗಿ ಬಳ್ಳಿಗಳು ಸಾಯುತ್ತಿದ್ದರೆ ಮತ್ತೂಂದೆಡೆ ಬೆಳೆದ ಪೈರನ್ನು ಮಂಗಗಳು, ಪಕ್ಷಿಗಳು ದಾಳಿ ಇಡುವುದರಿಂದ ಬೆಳೆದ ಫಸಲನ್ನು ಕೈಗೆ ತೆಗೆದುಕೊಳ್ಳುವುದು ಹರಸಾಹಸ ಪಡಬೇಕಿದೆ.

ಈ ವರ್ಷದ ಕುಂಭದ್ರೋಣ ಮಳೆಗೆ ಕಾಳುಮೆಣಸಿನ ಬಳ್ಳಿಗಳು ನಾಶವಾಗಿದ್ದು, ಅಲ್ಪಸ್ವಲ್ಪ ಬೆಳೆದ ಬೆಳೆಗೆ ಉತ್ತಮ ಧಾರಣೆಯು ಸಿಗದೆ ಬೆಳೆಗಾರ ಚಿಂತಾಕ್ರಾಂತನಾಗಿದ್ದಾನೆ.

ತಾಲೂಕಿನಲ್ಲಿ 800 ಹೆಕ್ಟೇರ್‌ ಪ್ರದೇಶದಲ್ಲಿ ಕಾಳು ಮೆಣಸು ಬೆಳೆಸಲಾಗುತ್ತದೆ. ಇಲಾಖೆಯಿಂದ ಕಾಳುಮೆಣಸು ಪುನಶ್ಚೇತನ, ಪ್ರದೇಶ ವಿಸ್ತರಣೆ ಹಾಗೂ ನರೇಗಾ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರ ನೀಡುವ ಅನುದಾನವನ್ನು ಸಮರ್ಪಕವಾಗಿ ನೀಡಲಾಗುತ್ತದೆ. ರೈತರು ಈ ಅವಕಾಶ ಬಳಸಿಕೊಳ್ಳಬೇಕು.
ಶ್ರೀಕೃಷ್ಣ,
ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ

ಮಲೆನಾಡಿನ ವಾತಾವರಣಕ್ಕೆ ಪೂರಕವಾದ ಬೆಳೆ ಎಂದರೆ ಕಾಳುಮೆಣಸು. ತಾಲೂಕಿನಲ್ಲಿ ಬೆಳೆದ ಕಾಳು ಮೆಣಸು ಉತ್ತಮ ಗುಣಮಟ್ಟವನ್ನು ಹೊಂದಿರುತ್ತದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದರೆ ಕಳೆದ 5 ವರ್ಷಗಳಿಂದ ರೈತರಿಗೆ ಉತ್ತಮ ಧಾರಣೆ ಸಿಗದೇ ನಷ್ಟ ಅನುಭವಿಸುವಂತಾಗಿದೆ.
ಕಲ್ಕುಳಿ ಚಂದ್ರಶೇಖರ್‌ ಹೆಗ್ಡೆ,
ಪ್ರಗತಿಪರ ಕೃಷಿಕ.

Advertisement

Udayavani is now on Telegram. Click here to join our channel and stay updated with the latest news.

Next