ಕಾಳು ಮೆಣಸು ಸಂಬಾರ ಪದಾರ್ಥಗಳ ರಾಜ. ಕಾಳು ಮೆಣಸಿಗೆ ಬರುವ ರೋಗ ಸೊರಗು ರೋಗ. ಈ ವರ್ಷ ಕಿಂಟ್ವಲ್ ಕಾಳು ಮೆಣಸು ಪಡೆದವನು ಮುಂದಿನ ವರ್ಷ ಒಂದು ಕಿಲೋ ಕಾಳು ಮೆಣಸೂ ಕೊಯ್ಯಲಾರ. ಇದಕ್ಕೆ ನಮ್ಮ ಕೃಷಿಕ ವಿಜ್ಞಾನಿಗಳು ಕಂಡುಕೊಂಡ ಉಪಾಯ ಹಿಪ್ಪಲಿ ಬಳ್ಳಿಗೆ ಕಾಳು ಮೆಣಸಿನ ತಳಿಯ ಕಸಿ. ಹಿಪ್ಪಲಿ ಬಳ್ಳಿಗೆ ಈ ಸೊರಗು ನಿರೋಧಕ ಶಕ್ತಿ ಇದೆ. ತೋಟದಲ್ಲಿ ಸಾವಿರಾರು ಬಳ್ಳಿಗಳಿಗೆ ಇಂತಹ ಕಸಿ ಮಾಡಿ ಕಾಳು ಮೆಣಸಿನ ಕೃಷಿಯಲ್ಲಿ ಗೆದ್ದವರು ಜಯಾನಂದ – ವೀಣಾ ಶರ್ಮಾ ದಂಪತಿ ಪಂಜಿಕಲ್ಲು.
ದ.ಕ. ಜಿಲ್ಲೆಯ ಅಡ್ಯನಡ್ಕ ಸಮೀಪದ ಪಂಜಿಕಲ್ಲು ಇವರ ಕೃಷಿ ಕಾರ್ಯ ಕ್ಷೇತ್ರ. ಹಿರಿಯರಿಂದ ಬಂದ ಅಡಿಕೆ ತೋಟ. ಹಾಲಿನ ಡೇರಿ ಉಪ ವೃತ್ತಿ. ಸಾವಯವ ಕೃಷಿ. ಅಡಿಕೆ ಜತೆಗೆ ಬಾಳೆ, ತೆಂಗು, ಕಾಳುಮೆಣಸು ಉಪ ಬೆಳೆಗಳು. ಕಾಳು ಮೆಣಸು ಬಳ್ಳಿಗೆ ಸೊರಗು ರೋಗ ಬಂದು ಸಾಯುತ್ತಿತ್ತು. ಇದಕ್ಕಾಗಿ ಇವರು ಕಂಡುಕೊಂಡ ಪರಿಹಾರ ಕಸಿ ಮೂಲಕ ಕಾಳು ಮೆಣಸಿನ ಬಳ್ಳಿ ಅಭಿವೃದ್ಧಿ.
ಕೃಷಿ ವಿಜ್ಞಾನಿ ಯದು ಕುಮಾರ್ ಪುತ್ತೂರು ಇವರಿಗೆ ಕಾಳು ಮೆಣಸಿನ ಕಸಿ ಕಲಿಸಿದವರು. 4 ವರ್ಷಗಳ ಹಿಂದೆ ಅವರ ನಿರ್ದೇಶನದಂತೆ ಹಿಪ್ಪಲಿ ತಾಯಿ ಬಳ್ಳಿಗೆ ಕಸಿ ಕಟ್ಟಿದ 30 ಕಾಳುಮೆಣಸಿ ಬಳ್ಳಿ ತಂದು ನೆಟ್ಟರು.
ಕಾಂಡವಾಗಿ ನೆಲಕ್ಕೆ ಬೇರಿಳಿಸುವ ತಾಯಿ ಹಿಪ್ಪಲ ಗಿಡದ ಕಸಿ ಭಾಗ ಎಳತಾಗಿರಬೇಕು. ಕಸಿ ಕಟ್ಟುವ ಸಯಾನ್ ಬೆಳೆದ ಉತ್ತಮ ಇಳುವರಿಯ ಕಾಳು ಮೆಣಸಿನ ಎರಡು ಗಂಟು ಇರುವ ಬೆಳೆದ ಕಾಂಡವಾಗಿರಬೇಕು ಎನ್ನುವುದು ಮುಖ್ಯ. ಇದು ಮೃದು ಕಾಂಡ ಕಸಿ ವಿಧಾನದ ಪ್ರಮುಖ ವಿಷಯ. ಅಡಿಕೆ ಮರದ ಬುಡದಲ್ಲೇ ನೆಟ್ಟು ಬೆಳೆಸಿದ ಹಿಪ್ಪಲಿ ತಾಯಿ ಗಿಡ ಕಸಿಗೆ ಅತ್ಯುತ್ತಮ.
ಕಸಿ ತಾಯಿ ಗಿಡಕ್ಕಾಗಿ ಹಿಪ್ಪಲಿ ಬಳ್ಳಿಯನ್ನು ಮರದ ಬುಡಕ್ಕೆ ಹತ್ತಿರವಾಗಿ ನೆಟ್ಟು ಬೆಳೆಸಬೇಕು ಎನ್ನುತ್ತಾರಿವರು. ದೂರ ನೆಟ್ಟು ಬಾಗಿಸಿದ್ದಲ್ಲಿ ಅತಿಯಾಗಿ ಹಿಪ್ಪಲಿ ಚಿಗುರೊಡನೆ ಕಸಿ ಕಟ್ಟುವ ಕಾಳು ಮೆಣಸಿನ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ. ಒಂದು ಮರದ ಬುಡದಲ್ಲಿ 2-3 ಹಿಪ್ಪಲ ಗಿಡವನ್ನು ತಾಯಿ ಗಿಡವಾಗಿ ಬೆಳೆಸಿ 1.5- 2 ಅಡಿ ಎತ್ತರದಲ್ಲಿ ಉತ್ತಮ ಇಳುವರಿ ನೀಡುವ ಕಾಳುಮೆಣಸಿನ ಬಳ್ಳಿಯನ್ನು ಕಸಿ ಕಟ್ಟಿ ಬೆಳೆಸಬೇಕು. ಈ ಕಸಿ ಬಳ್ಳಿ ಬೆಳೆಯುತ್ತಾ ಮೇಲೇರುವಾಗ ಚಿಗುರು ಚಿವುಟಿ ಟಿಸಿಲೊಡೆಯುವಂತೆ ಮಾಡಿ. ಮರ ತುಂಬಾ 5-6 ಬಳ್ಳಿಗಳು ಹರಡಿ ಮೇಲೇರುತ್ತವೆ. ಹೆಚ್ಚು ಇಳುವರಿ ಸಿಗುತ್ತದೆ.
ಶರ್ಮಾ ದಂಪತಿ ಕಸಿ ಕಟ್ಟುವುದರಲ್ಲಿ ನೈಪುಣ್ಯ ಸಾಧಿಸಿದ್ದಾರೆ. ಹಿಪ್ಪಲಿ ಗಿಡವನ್ನು ಅಡಕೆ ಮರದ ಬುಡದಲ್ಲಿ ನೆಟ್ಟು ಬೆಳೆಸುತ್ತಾ ಅದರ ಮೃದು ಕಾಂಡವನ್ನು ಆಯ್ದು, ದಿನಾಲೂ 10-15 ನಿಮಿಷ ಬಿಡುವು ಮಾಡಿಕೊಂಡು 4-5 ಹಿಪ್ಪಲಿ ಗಿಡಕ್ಕೆ ಕಸಿ ಕಟ್ಟುತ್ತಾರೆ. ಕಸಿ ಕಟ್ಟಿದ ಭಾಗ ಒಣಗಿ ಹೋಗದಂತೆ ಲಾಲಿಯ ಪ್ಲಾಸ್ಟಿಕ್ ತೊಟ್ಟೆಯನ್ನು ಕಟ್ಟಿ ರಕ್ಷಣೆ ಮಾಡುತ್ತಾರೆ. ಇವರು ಕಳೆದ 4 ವರ್ಷಗಳಲ್ಲಿ ಕಸಿ ಮಾಡಿದ ಗಿಡಗಳು ಸುಮಾರು 2 ಸಾವಿರಕ್ಕೂ ಮಿಕ್ಕಿವೆ. ಈ ವರ್ಷ ಇವರಿಗೆ ಉತ್ತಮ ಇಳುವರಿ ದೊರೆತಿದೆ.
– ಶಂಕರ್ ಸಾರಡ್ಕ