Advertisement

ಕಪ್ಪುಹಣ ತಡೆ: ರಾಜಕೀಯ ಶುದ್ಧಿಯಾಗಬೇಕು

02:02 AM Jun 27, 2019 | mahesh |

ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಯ ವರದಿಯ ಪ್ರಕಾರ 30 ವರ್ಷಗಳಲ್ಲಿ ದೇಶದಿಂದ ಸುಮಾರು 34 ಲಕ್ಷ ಕೋಟಿ ರೂಪಾಯಿ ಕಪ್ಪುಹಣದ ರೂಪದಲ್ಲಿ ಅನ್ಯ ದೇಶಗಳಿಗೆ ಹೋಗಿದೆ. ಇದು ವಿದೇಶಗಳಲ್ಲಿರುವ ಕಪ್ಪುಹಣದ ಕುರಿತಾಗಿ ಒಂದು ಅಂದಾಜಿನ ಲೆಕ್ಕ. ಕಪ್ಪುಹಣದ ಕುರಿತು ದೇಶದಲ್ಲಿ ಲಾಗಾಯ್ತಿನಿಂದ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದರೂ ಯಾರಿಗೂ ದೇಶದೊಳಗೆ ಮತ್ತು ವಿದೇಶಗಳಲ್ಲಿ ಎಷ್ಟು ಕಪ್ಪು ಹಣ ಇದೆ ಎಂಬ ಅಂದಾಜು ಇರಲಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯ ಲೆಕ್ಕ ಹೇಳುತ್ತಿದ್ದರು.

Advertisement

ಇದೀಗ ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿ, ರಾಷ್ಟ್ರೀಯ ಹಣಕಾಸು ನಿರ್ವಹಣಾ ಸಂಸ್ಥೆ ಮತ್ತು ರಾಷ್ಟ್ರೀಯ ಸಾರ್ವಜನಿಕ ನೀತಿ ಹಾಗೂ ಹಣಕಾಸು ಸಂಸ್ಥೆಗಳು ನಡೆಸಿರುವ ಅಧ್ಯಯನದ ಆಧಾರದಲ್ಲಿ 1980ರಿಂದ 2010ರ ನಡುವೆ 15ರಿಂದ 34 ಲಕ್ಷ ಕೋಟಿ ವರೆಗಿನ ಮೊತ್ತ ಕಪ್ಪುಹಣದ ರೂಪದಲ್ಲಿ ವಿದೇಶಗಳಿಗೆ ಹೋಗಿರಬಹುದು ಎಂದು ಸ್ಥಾಯಿ ಸಮಿತಿ ಅಂದಾಜಿಸಿದೆ. ಎಲ್ಲ ಸಂಸ್ಥೆಗಳೂ ಸರಕಾರದ್ದೇ ಆಗಿರುವುದರಿಂದ ಇದು ಬಹುತೇಕ ನಿಖರ ಲೆಕ್ಕಾಚಾರ ಎಂದು ಹೇಳಬಹುದು. ಅಲ್ಲಿಗೆ ಕಪ್ಪುಹಣದ ಪ್ರಮಾಣ ನಾವು ಊಹಿಸಿರುವುದಕ್ಕಿಂತಲೂ ಹಲವು ಪಟ್ಟು ಹೆಚ್ಚಿಗೆ ಇದೆ ಎನ್ನುವುದು ಸ್ಪಷ್ಟವಾಗುತ್ತದೆ.

2014ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕಪ್ಪುಹಣವೂ ಚರ್ಚೆಯ ಒಂದು ಮುಖ್ಯ ವಿಷಯವಾಗಿತ್ತು. ವಿದೇಶಗಳಲ್ಲಿರುವ ಕಪ್ಪುಹಣವನ್ನು ವಾಪಸು ತರುವ ಕುರಿತು ಬಿಜೆಪಿ ವಾಗ್ಧಾನ ನೀಡಿತ್ತು. ಎಲ್ಲ ಕಪ್ಪುಹಣವನ್ನು ತಂದರೆ ಬಡವರ ಖಾತೆಗಳಿಗೆ ತಲಾ 15 ಲ. ರೂ.ಯಂತೆ ಹಾಕಬಹುದು ಎಂದು ಚುನಾವಣಾ ರ್ಯಾಲಿಯೊಂದರಲ್ಲಿ ಮೋದಿ ಹೇಳಿದ ಮಾತು ಅನಂತರ ಕಪ್ಪುಹಣಕ್ಕೆ ಸಂಬಂಧಿಸಿದಂತೆ ಸರಕಾರದ ಕಾಲೆಳೆಯಲು ವಿಪಕ್ಷಗಳ ಮುಖ್ಯ ಅಸ್ತ್ರವೂ ಆಗಿತ್ತು.

ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಸು ತರುವ ನಿಟ್ಟಿನಲ್ಲಿ ಮೋದಿ ಸರಕಾರ ಕೆಲವು ಪ್ರಯತ್ನಗಳನ್ನು ಮಾಡಿದ್ದರೂ ಅವುಗಳು ನಿರೀಕ್ಷಿತ ಫ‌ಲ ನೀಡಿಲ್ಲ ಎನ್ನುವುದು ವಾಸ್ತವ. ಕಪ್ಪುಹಣ ವಾಪಸು ತರುವ ಕುರಿತು ಸರಕಾರಕ್ಕಿರುವ ಬದ್ಧತೆಯ ಕುರಿತು ಅನುಮಾನಗಳು ಇಲ್ಲದಿದ್ದರೂ ಇನ್ನೂ ಈ ನಿಟ್ಟಿನಲ್ಲಿ ದೃಷ್ಟಿಗೋಚರವಾಗುವಂಥ ಯಶಸ್ಸು ಏಕೆ ಸಿಕ್ಕಿಲ್ಲ ಎನ್ನುವುದನ್ನು ಪ್ರಶ್ನಿಸಬೇಕಾಗುತ್ತದೆ. ಸುಮಾರು 10,000 ಕೋಟಿ. ರೂಪಾಯಿಯಷ್ಟು ಕಪ್ಪುಹಣವನ್ನು ವಾಪಸು ತರಲಾಗಿದೆ ಎಂದು ಸರಕಾರ ಹೇಳುತ್ತಿದ್ದರೂ 34 ಲಕ್ಷ ಕೋಟಿಯ ಎದುರು ಇದು ಜುಜುಬಿ ಮೊತ್ತವೇ ಸರಿ.

ಇದು ವಿದೇಶಗಳಲ್ಲಿರುವ ಕಪ್ಪುಹಣದ ವಿಚಾರವಾಯಿತು. ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ದೇಶದೊಳಗೆ ಕಪ್ಪುಹಣ ಹರಿದಾಡುತ್ತಿದೆ. ರಿಯಲ್ ಎಸ್ಟೇಟ್, ಗಣಿಗಾರಿಕೆ, ಫಾರ್ಮಾಸುಟಿಕಲ್, ಪಾನ್‌ ಮಸಾಲ, ಗುಟ್ಕಾ, ತಂಬಾಕು, ಸಿನೇಮಾ, ಶಿಕ್ಷಣ ಇವೆಲ್ಲ ಕಪ್ಪುಹಣ ಸೃಷ್ಟಿಯಾಗುವ ಮತ್ತು ಮರು ಹೂಡಿಕೆಯಾಗುವ ಕ್ಷೇತ್ರಗಳು. ವಾಸ್ತವ ವಿಚಾರ ಏನೆಂದರೆ ರಾಜಕೀಯ ವ್ಯವಸ್ಥೆಯೇ ಕಪ್ಪು ಹಣದ ಸೃಷ್ಟಿಗೆ ಪೂರಕವಾಗಿ ವರ್ತಿಸುತ್ತಿದೆ. ಯಾವ ರಾಜಕೀಯ ನಾಯಕನಿಗೆ ಅಥವಾ ರಾಜಕೀಯ ಪಕ್ಷಕ್ಕೆ ಕಪ್ಪುಹಣದ ಪಿಡುಗನ್ನು ನಿವಾರಿಸಬೇಕೆಂಬ ಪ್ರಾಮಾಣಿಕ ಕಾಳಜಿ ಇಲ್ಲ. ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಗೆ ಅನಧಿಕೃತವಾಗಿ 50,000 ಕೋ. ರೂ. ಮಿಕ್ಕಿ ಖರ್ಚಾಗಿದೆ ಎಂಬ ಲೆಕ್ಕವೇ ಇದಕ್ಕೊಂದು ತಾಜಾ ಉದಾಹರಣೆ. ಇಷ್ಟೂ ಮೊತ್ತವೂ ಕಪ್ಪುಹಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

Advertisement

ಚುನಾವಣೆ ಕಪ್ಪುಹಣ ಚಲಾವಣೆಯಾಗಲು ಸಿಗುವ ಉತ್ತಮ ಸಂದರ್ಭ. ಭಾರೀ ಮೊತ್ತದ ಕಪ್ಪುಹಣ ಸೃಷ್ಟಿಯಾಗುವುದು ಮತ್ತು ಹೂಡಿಕೆ ಆಗುತ್ತಿರುವುದು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ. ಇದರ ಬೆನ್ನಿಗೆ ಮನೋರಂಜನೆ, ಫಾರ್ಮಾಸುಟಿಕಲ್ ಮತ್ತು ತಂಬಾಕು ಮಾರುಕಟ್ಟೆಗಳು ಇವೆ. ಈ ಮಾರುಕಟ್ಟೆಯನ್ನು ನಿಯಂತ್ರಿಸಲು ಸಾಕಷ್ಟು ಪ್ರಬಲ ಕಾನೂನು ಇಲ್ಲ. ಜಿಎಸ್‌ಟಿ ಮೂಲಕ ತೆರಿಗೆಯಲ್ಲಿ ಪಾರದರ್ಶಕತೆ ತರುವ ಪ್ರಯತ್ನ ಮಾಡಲಾಗಿದ್ದರೂ ಕಪ್ಪುಕುಳಗಳು ರಂಗೋಲಿ ಕೆಳಗೆ ತೂರುವ ಪ್ರಯತ್ನ ನಡೆಸುತ್ತಿರುವುದರಿಂದ ಕಪ್ಪುಹಣ ಮಾರುಕಟ್ಟೆ ಬೆಳೆಯುತ್ತಲೇ ಇದೆ.

ಕಪ್ಪುಹಣವನ್ನು ವಾಪಸು ತರುವುದಕ್ಕಿಂತಲೂ ಕಪ್ಪುಹಣ ಸೃಷ್ಟಿ ಆಗುವುದನ್ನು ತಡೆಯುವುದೇ ಸರಕಾರದ ಎದುರು ಇರುವ ದೊಡ್ಡ ಸವಾಲು. ಇದು ಸಾಧ್ಯವಾಗಬೇಕಾದರೆ ರಾಜಕೀಯ ವ್ಯವಸ್ಥೆ ಮೊದಲು ಸ್ವಚ್ಛವಾಗಬೇಕು. ಆದರೆ ಇದನ್ನು ಮಾಡುವವರು ಯಾರು ಎನ್ನುವುದೇ ಪ್ರಶ್ನೆ.

Advertisement

Udayavani is now on Telegram. Click here to join our channel and stay updated with the latest news.

Next