ಹೊಸದಿಲ್ಲಿ : ಕಪ್ಪು ಹಣ ವಿರುದ್ಧದ ಮಹತ್ತರ ಕಟ್ಟುನಿಟ್ಟಿನ ಕ್ರಮದ ಅಂಗವಾಗಿ ಸರಕಾರವು ಏಳು ಲಕ್ಷ ಖೊಟ್ಟಿ (ಶೆಲ್) ಕಂಪೆನಿಗಳನ್ನು ಮುಚ್ಚುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
ಕಪ್ಪು ಹಣ ಚಲಾವಣೆ, ನಿರ್ವಹಣೆ, ಅಕ್ರಮ ವ್ಯವಹಾರಗಳಲ್ಲಿ ತೊಡಗುವ ಆದರೂ ಮೇಲ್ನೋಟಕ್ಕೆ ನಿದ್ರಾಸ್ಥಿತಿಯಲ್ಲಿರುವಂತೆ ಕಂಡುಬರುವ ಖೊಟ್ಟಿ ಕಂಪೆನಿಗಳು ದೇಶದ ಹಣಕಾಸು ವಲಯದಲ್ಲಿ ಆರರಿಂದ ಏಳು ಲಕ್ಷ ಸಂಖ್ಯೆಯಲ್ಲಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಈ ಖೊಟ್ಟಿ ಕಂಪೆನಿಗಳಲ್ಲಿ ಆನೇಕ ಕಂಪೆನಿಗಳು ಅತ್ಯಧಿಕ ಮೌಲ್ಯದ ಅಕ್ರಮ ವ್ಯವಹಾರಗಳಲ್ಲಿ ತೊಡಗಿವೆ. ನೋಟು ನಿಷೇಧದ ಬಳಿಕದಲ್ಲಿ ಇವು ಗರಿಷ್ಠ ಪ್ರಮಾಣದ ನಗದನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿವೆ ಎಂದು ವರದಿ ಹೇಳಿದೆ.
ಈ ಖೊಟ್ಟಿ ಕಂಪೆನಿಗಳ ಗುಣಲಕ್ಷಣಗಳು ಹೇಗಿರುವತ್ತವೆ ಎಂದರೆ ಇವುಗಳ ಪಾವತಿ ಬಂಡವಾಳ ನಾಮ್‌ಕೇ ವಾಸ್ತೆ ಆಗಿರುತ್ತದೆ; ಅತ್ಯಧಿಕ ಪ್ರಮಾಣದ ಮೀಸಲು ಮತ್ತು ಮಿಗತೆ ನಿಧಿಯನ್ನು ಅವು ಹೊಂದಿರುತ್ತವೆ; ಗರಿಷ್ಠ ಶೇರು ಪ್ರೀಮಿಯಂ ಹೊಂದಿರುತ್ತವೆ; ಅನ್‌ಲಿಸ್ಟೆಡ್ ಕಂಪೆನಿಗಳಲ್ಲಿ ಇವು ಹೂಡಿಕೆ ಮಾಡುತ್ತವೆ; ಇವುಗಳಿಗೆ ಯಾವುದೇ ಲಾಭಾಂಶ ಆದಾಯ ಇರುವುದಿಲ್ಲ ಮತ್ತು ಅತ್ಯಂತ ಗರಿಷ್ಠ ಪ್ರಮಾಣದ ನಗದನ್ನು ಇವು ಕೈಯಲ್ಲಿ ಹೊಂದಿರುತ್ತವೆ.
ಇವುಗಳನ್ನು ಮಟ್ಟ ಹಾಕಲು ಇದೀಗ ಕೇಂದ್ರ ಸರಕಾರ ನೇರ ತೆರಿಗೆಗಳ ಕೇಂದ್ರ ಮಂಡಳಿಯೊಂದಿಗೆ ಹಲವಾರು ಸರಕಾರಿ ವಿಚಕ್ಷಣ ಸಂಸ್ಥೆಗಳನ್ನು ಕ್ರಿಯಾಶೀಲಗೊಳಿಸಿದೆ.
ಗಂಭೀರ ವಂಚನೆ ತನಿಖಾ ಕಾರ್ಯಾಲಯವು ಈಗಾಗಲೇ 49 ಖೊಟ್ಟಿ ಕಂಪೆನಿಗಳ ವಿರುದ್ದ ಕೇಸು ದಾಖಲಿಸಿದೆ. ಈ ಖೊಟ್ಟಿ ಕಂಪೆನಿಗಳು 54 ವೃತ್ತಿಪರರ ನೆರವಿನೊಂದಿಗೆ 559 ವ್ಯಕ್ತಿಗಳನ್ನು ಬಳಸಿಕೊಂಡು 3,900 ಕೋಟಿ ರೂ.ಗಳ ಅಕ್ರಮ ಬಳಕೆ ಮಾಡಿರುವುದು ಕಂಡುಬಂದಿದೆ.