ಲಂಡನ್: ವರ್ಣಭೇದ ನೀತಿ ವಿರೋಧಿಸಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಲಂಡನ್‌ನಲ್ಲಿ ಪ್ರತಿಭಟನೆ ವೇಳೆ ಗಾಯಗೊಂಡ ಬಿಳಿ ವರ್ಣದ ವ್ಯಕ್ತಿಯೊಬ್ಬನನ್ನು ಕಪ್ಪು ವರ್ಣೀಯ ಸಮುದಾಯದ ವ್ಯಕ್ತಿ ಚಿಕಿತ್ಸೆಗಾಗಿ ಹೊತ್ತೂಯ್ಯುತ್ತಿರುವ ಫೋಟೊ ವೈರಲ್ ಆಗಿದೆ.
ಲಂಡನ್‌ನಲ್ಲಿ ಸಾವಿರಾರು ಮಂದಿ ಪ್ರತಿಭಟನೆ ನಡೆಸುವಾಗ ಗಾಯಗೊಂಡಾತನನ್ನು ಹೊತ್ತುಕೊಂಡ ಕಪ್ಪು ವರ್ಣೀಯ ವ್ಯಕ್ತಿ ಜನರ ನಡುವಿನಿಂದ ನುಗ್ಗಿ ಬರುತ್ತಿರುವ ಫೋಟೋವನ್ನು ರಾಯಿಟರ್ಸ್ ಫೋಟೋಗ್ರಾಫರ್ ಡೈಲನ್ ಮಾರ್ಟಿನೆಜ್ ಕ್ಲಿಕ್ಕಿಸಿದ್ದಾರೆ.
ಈ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ಜತೆಗೆ ಜಗತ್ತಿನಾದ್ಯಂತ ಸುದ್ದಿವಾಹಿನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಘಟನೆ ನಡೆದಾಗ ‘ಗಾಯಗೊಂಡಿರುವ ವ್ಯಕ್ತಿ ಬಲಪಂಥೀಯ. ಆತನಿಗೆ ಸಹಾಯ ಮಾಡಬೇಡ’ ಎಂದು ಗುಂಪಿನಲ್ಲಿದ್ದ ಕೆಲವರು ಕೂಗಿದ್ದಾಗಿ ಮಾರ್ಟಿನೆಜ್ ತಿಳಿಸಿದ್ದಾರೆ.
ಭಾರತ ಮೂಲದ ಮಹಿಳೆ ನೇತೃತ್ವ: ವರ್ಣಭೇದ ನೀತಿ ವಿರೋಧಿಸಿ ಅಮೆರಿಕದ ಸಿಯಾಟಲ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ಭಾರತ ಮೂಲದ ಅಮೆರಿಕ ಪ್ರಜೆ ಕ್ಷಮಾ ಸಾವಂತ್ ಎಂಬವರು ವಹಿಸಿದ್ದಾರೆ.
ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ 46 ವರ್ಷದ ಕ್ಷಮಾ, ಸಾಮಾಜಿಕ ಕಾರ್ಯಕರ್ತೆಯಾಗಿ ಬದಲಾಗಿದ್ದಾರೆ. ಈ ನಡುವೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವರ್ಣಭೇದ ನೀತಿ ವಿರೋಧಿಸಿ ಬೀದಿಗಿಳಿದಿದ್ದ ಪ್ರತಿಭಟನಾಕಾರರು ಬ್ರಿಟಿಷ್ ಅನ್ವೇಷಕ ಜೇಮ್ಸ್ ಕುಕ್‌ರ ಎರಡು ಪ್ರತಿಮೆಗಳನ್ನು ಧ್ವಂಸ ಮಾಡಿದ್ದಾರೆ.