ಗದಗ: ಜಿಲ್ಲೆಯಲ್ಲಿ ಎಸಿಬಿ ಅಧಿಕಾರಿಗಳ ಹೆಸರು ಬಳಸಿಕೊಂಡು ಸರಕಾರಿ ನೌಕರರನ್ನು ಬೆದರಿಸುವ ಜಾಲ ಹಗಲು ದರೋಡೆಗೆ ನಿಂತಿದೆ. ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಚುರುಕಾಗಿದೆ. ಕಳೆದ ಕೆಲ ತಿಂಗಳಿಂದ ಜಿಲ್ಲೆಯ ವಿವಿಧೆಡೆ ಆದಾಯ ಮೀರಿ ಆಸ್ತಿ ಗಳಿಸಿದ ಅಧಿಕಾರಿಗಳ ಮನೆ-ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಮೈಚಳಿ ಬಿಡಿಸಿದೆ.
ಸರಕಾರ ವಿವಿಧ ಯೋಜನೆಗಳ ಸಹಾಯಧನ ಬಿಡುಗಡೆ ಮತ್ತು ಸೇವೆ ಒದಗಿಸಲು ಲಂಚ ಸ್ವೀಕರಿಸುವ ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸುವ ಮೂಲಕ ಲಂಚಬಾಕರ ಬೆವರಿಳಿಸುತ್ತಿದೆ. ತಮ್ಮ ಕಾರ್ಯವೈಖರಿ ಮೂಲಕ ಜಿಲ್ಲೆಯಲ್ಲಿ ಮನೆ ಮಾತಾಗಿರುವ ಎಸಿಬಿ ಅಧಿ ಕಾರಿಗಳನ್ನೇ ಬಂಡವಾಳ ಮಾಡಿಕೊಳ್ಳಲು ಖದೀಮರು ಯತ್ನಿಸುತ್ತಿರುವುದು ಆತಂಕಕಾರಿ ಬೆಳವಣಿಗೆ.
ತಹಶೀಲ್ದಾರ್‌ಗೆ 1.30 ಲಕ್ಷ ಬೇಡಿಕೆ: ಮೇ 4ರಂದು ಮಧ್ಯಾಹ್ನ 3.30ಕ್ಕೆ ರೋಣ ತಹಶೀಲ್ದಾರ್ ಜೆ.ಬಿ.ಜಕ್ಕನಗೌಡರ್ ಅವರ ಮೊಬೈಲ್‌ಗೆ 9096458739 ಸಂಖ್ಯೆಯಿಂದ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತಾನು ಗದಗ ಎಸಿಬಿ ಡಿಎಸ್ಪಿ ಮಲ್ಲಾಪೂರ ಎಂದು ಪರಿಚಯಿಸಿಕೊಂಡಿದ್ದಾನೆ. “ನೀವು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದೀರಿ. ನಿಮ್ಮ ಮೇಲೆ ಕೇಸ್ ದಾಖಲಾಗಿದೆ. ನೀವು ಇರುವ ಜಾಗೆಯಿಂದ ಬೇರೆ ಕಡೆಗೆ ಹೋಗಿ. ಸಂಜೆ 5 ಗಂಟೆಯೊಳಗೆ ನಿಮ್ಮ ಮೇಲಿನ ಪ್ರಕರಣವನ್ನು ಸಿ ರಿಪೋರ್ಟ್ ಮಾಡಿ ಮುಕ್ತಾಯ ಮಾಡುತ್ತೇನೆ. ನಮ್ಮ ಇಲಾಖೆಯ ಬೆಂಗಳೂರಿನ ಐಜಿಪಿ ಸಾಹೇಬರು ತಮ್ಮ ಗೆಳೆಯನೊಂದಿಗೆ ವಿದೇಶಕ್ಕೆ ತೆರಳುತ್ತಿದ್ದಾರೆ. ಅವರು ಎರಡು ಟಿಕೆಟ್ ಬುಕ್ ಮಾಡಿದ್ದು, ಒಂದು ಟಿಕೇಟ್ ಬೆಲೆ 65 ಸಾವಿರ ರೂ. ಆಗುತ್ತದೆ. ಎರಡೂ ಟಿಕೆಟ್ ಮೊತ್ತ 1.30 ಲಕ್ಷ ರೂ.ಅನ್ನು ಮೊ.9021170752 ಮತ್ತು 9699700770ಗೆ ಫೋನ್ ಪೇ ಮಾಡುವಂತೆ ತಿಳಿಸಿದ್ದಾನೆ’ ಎಂದು ತಹಶೀಲ್ದಾರ್ ದೂರಿದ್ದಾರೆ.
ಅಲ್ಲದೇ ಹಣಕ್ಕಾಗಿ ಮೇಲಿಂದ ಮೇಲೆ ಫೋನ್ ಮಾಡಿದ್ದಾನೆ. ಮೋಸ ಮಾಡುವ ಉದ್ದೇಶದೊಂದಿಗೆ ಪದೇ ಪದೆ ಫೋನ್ ಮಾಡಿ ಕಿರಿಕಿರಿ ಉಂಟು ಮಾಡುತ್ತಿದ್ದಾನೆ. ತಮ್ಮ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು ರೋಣ ತಹಶೀಲ್ದಾರ್ ಜೆ.ಬಿ.ಜಕ್ಕನಗೌಡರ ನೀಡಿದ ದೂರಿನ ಮೇರೆಗೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯಾದ್ಯಂತ 26 ಪ್ರಕರಣ ದಾಖಲು: ನಕಲಿ ಎಸಿಬಿ ಅಧಿಕಾರಿಗಳ ಹೆಸರಲ್ಲಿ ಸಾರ್ವಜನಿಕ ನೌಕರರು, ಸಿಬ್ಬಂದಿಯಿಂದ ಹಣ ವಸೂಲಿ ಮಾಡುತ್ತಿರುವ ದೂರುಗಳು ಆಗಾಗ ಕೇಳಿ ಬರುತ್ತಿವೆ. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಹೆಸರಲ್ಲಿ ಸಾರ್ವಜನಿಕ ಅಧಿಕಾರಿ, ಸಿಬ್ಬಂದಿಯಿಂದ ಹಣ ವಸೂಲಿಗೆ ಯತ್ನಿಸುವವರ ವಿರುದ್ಧ ರಾಜ್ಯಾದ್ಯಂತ ಒಟ್ಟು 26 ಪ್ರಕರಣಗಳು ದಾಖಲಾಗಿವೆ. ಆ ಪೈಕಿ 6 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು, 20 ಪ್ರಕರಣಗಳು ತನಿಖಾ ಹಂತದಲ್ಲಿವೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ವ್ಯಕ್ತಿ, ನೌಕರ ಮತ್ತು ಅಧಿಕಾರಿಗಳಿಗೆ ಹಣ, ಉಡುಗೊರೆಗಾಗಿ ಬೇಡಿಕೆ ಇಡಲ್ಲ. ಯಾವುದೇ ವ್ಯಕ್ತಿ, ಜನರು ಅಂತಹ ಬೇಡಿಕೆಯೊಂದಿಗೆ ಎಸಿಬಿ ಅಧಿಕಾರಿಗಳ ಸೋಗಿನಲ್ಲಿ ಬಂದಲ್ಲಿ ಅಥವಾ ಫೋನ್ ಕರೆ ಮಾಡಿದಲ್ಲಿ ತಕ್ಷಣ ಎಸಿಬಿ ಠಾಣೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬೇಕು. ವಂಚಕರ ಬಗ್ಗೆ ಎಚ್ಚರ ವಹಿಸಬೇಕು. –
ಎಂ.ವಿ. ಮಲ್ಲಾಪುರ, ಡಿಎಸ್ಪಿ, ಎಸಿಬಿ ಠಾಣೆ.