ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಸೋಂಕು ಕಡಿಮೆ ಆಗುತ್ತಿದೆ ಎಂದು ಜನರು ನಿಟ್ಟುಸಿರು ಬಿಡುವ ಮುನ್ನವೇ ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂದ್ರ) ಕಾಯಿಲೆ ದಿನದಿಂದ ದಿನಕ್ಕೆ ಭೀತಿ ಹುಟ್ಟಿಸುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ಬ್ಲಾÂಕ್ ಫಂಗಸ್ ಸಂಬಂಧಿ ಒಟ್ಟಾರೆ 104 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಎಂಟು ಜನರಿಗೆ ಈ ಸೋಂಕು ಖಚಿತವಾಗಿದ್ದು, ಇಬ್ಬರು ಸೋಂಕಿತ ವ್ಯಕ್ತಿಗಳು ಮೃತಪಟ್ಟಿದ್ದಾರೆ.
ಕೊರೊನಾ ಸೋಂಕಿಗೆ ಎರಡನೇ ಅಲೆಯು ಜಿಲ್ಲೆಯನ್ನು ಅತಿ ಹೆಚ್ಚು ಬಾಧಿಸಿದೆ. ಈ ನಡುವೆ ಕೊರೊನಾಗೆ ನೀಡುವ ಚಿಕಿತ್ಸೆಯಲ್ಲಿ ಅಧಿಕವಾಗಿ ಸ್ಟೇರಾಯ್ಡ ಉಪಯೋಗಿಸುತ್ತಿರುವ ಕಾರಣ ಕಪ್ಪು ಶಿಲೀಂದ್ರ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಹೆಚ್ಚಾಗಿ ಈ ಕಾಯಿಲೆ ಪತ್ತೆಯಾಗುತ್ತಿದೆ. ಅದರಲ್ಲೂ, ಸಕ್ಕರೆ ಕಾಯಿಲೆ ಹೊಂದಿದವರಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ಜಿಲ್ಲೆಯಲ್ಲಿ ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೆ, ಇದರ ಬೆನ್ನಲ್ಲೆ ಬ್ಲ್ಯಾಕ್ ಫಂಗಸ್ ಕಾಯಿಲೆ ಶುರುವಾಗಿದೆ. ಕಳೆದ 20 ದಿನಗಳ ಅಂತರದಲ್ಲಿ ಬ್ಲ್ಯಾಕ್ ಫಂಗಸ್ ಸಂಬಂಧಿ ನೂರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಈಗಾಗಲೇ ಬ್ಲ್ಯಾಕ್ ಫಂಗಸ್ ಖಚಿತಪಟ್ಟ ಇಬ್ಬರು ರೋಗಿಗಳು ಮತ್ತು ಮೂವರು ಶಂಕಿತ ರೋಗಿಗಳು ಮೃತಪಟ್ಟಿದ್ದಾರೆ.
ಹೊರ ಜಿಲ್ಲೆಯ 20 ಜನ: ಜಿಲ್ಲೆಯಲ್ಲಿ ಪತ್ತೆಯಾದ 104 ಜನರಲ್ಲಿ 80ಕ್ಕೂ ಹೆಚ್ಚು ಜನ ಕಲಬುರಗಿ ಜಿಲ್ಲೆಯವರೇ ಆಗಿದ್ದಾರೆ. ಸುಮಾರು 20 ಮಂದಿ ಹೊರ ಜಿಲ್ಲೆಗಳಿಗೆ ಸೇರಿದ್ದಾರೆ. ಪಕ್ಕದ ರಾಯಚೂರು, ಯಾದಗಿರಿ, ಬೀದರ್ ಜಿಲ್ಲೆಗಳ ರೋಗಿಗಳು ಇಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಸಮಾಧನದ ಸಂಗತಿ ಎಂದರೆ ಬ್ಲಾÂಕ್ ಫಂಗಸ್ ದೃಢಪಟ್ಟವರು ಮತ್ತು ಶಂಕಿತರು ಸೇರಿ ಈಗಾಗಲೇ 12 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇನ್ನು 87 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದರಲ್ಲಿ ಜಿಮ್ಸ್ ಆಸ್ಪತ್ರೆಯಲ್ಲಿ 22 ಜನರು ದಾಖಲಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶರಣಬಸಪ್ಪ ಗಣಜಲಖೇಡ್ ಹೇಳಿದರು.
ವರದಿಗೆ ಬೇಕು ಮೂರು ದಿನ: ಬ್ಲ್ಯಾಕ್ ಫಂಗಸ್ ಪತ್ತೆ ವರದಿ ಪ್ರಾಯೋಗಾಲಯದಿಂದ ಬರಲು ಮೂರ್‍ನಾಲ್ಕು ದಿನಗಳ ಸಮಯ ಹಿಡಿಯುತ್ತಿದೆ. ಆದ್ದರಿಂದಲೇ ಸಾಕಷ್ಟು ಜನರಿಗೆ ಶಂಕಿತರೆಂದೇ ಪರಿಣಿಸಲಾಗುತ್ತಿದೆ. ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್ ಮಾಡಿದರೂ ಕಾಯಿಲೆ ಪತ್ತೆ ಆಗುತ್ತದೆ. ಆದರೆ, ಯಾವ ಮ್ಯೂಕರ್ ಮೈಕೋಸಿಸ್ ಎಂದು ತಿಳಿಯಬೇಕಾದರೆ ಕಲ್ಚರ್ ಟೆಸ್ಟ್ ಮಾಡಲೇಬೇಕಾಗುತ್ತಿದೆ. ಇದಕ್ಕೆ ಗರಿಷ್ಠ ನಾಲ್ಕು ದಿನಗಳ ಬೇಕಾಗುತ್ತದೆ ಎಂದು ಜಿಮ್ಸ್ ನಿರ್ದೇಶಕಿ ಡಾ| ಕವಿತಾ ಪಾಟೀಲ “ಉದಯವಾಣಿ’ಗೆ ತಿಳಿಸಿದರು.