Advertisement

ನಿವೃತ್ತವಾಗಿದೆ ಮಿಂಚಂತೆ ಎರಗೋ ಬ್ಲ್ಯಾಕ್‌ ಬರ್ಡ್‌!

05:51 PM Jul 28, 2020 | sudhir |

ಮಣಿಪಾಲ: ಎಸ್‌ಆರ್‌(ಸ್ಟ್ರಾಟೆಜಿಕ್‌ ರೆಕಾನೈಸನ್ಸ್‌)- 71 ಬ್ಲ್ಯಾಕ್‌ ಬರ್ಡ್‌ ಅಮೆರಿಕದ ಮಿಂಚಿನ ವೇಗದ ಮಾನವ ಚಾಲಿತ ಯುದ್ಧ ವಿಮಾನ. ಇದರ ವೇಗಕ್ಕೆ ಯಾವುದೂ ಸರಿಸಾಟಿಯಾಗಬಲ್ಲ ಮಾನವ ಚಾಲಿತ ಯುದ್ಧ ವಿಮಾನ ಇಂದಿನವರೆಗೂ ಅವಿಷ್ಕಾರವಾಗಿಲ್ಲ. ಶತ್ರು ಪಾಳಯಕ್ಕೆ ಬರ ಸಿಡಿಲಿನಂತೆ ಅಪ್ಪಳಿಸಿ ಅಷ್ಟೇ ನಾಜೂಕಾಗಿ ತಪ್ಪಿಸಿಕೊಳ್ಳಬಲ್ಲ ಜಗತ್ತಿನ ಬಲಾಡ್ಯ ಯುದ್ಧ ವಿಮಾನವಿದು. ಇದರ ಎತ್ತರಕ್ಕೆ ಬಿಡಿ ಇದರ ಹತ್ತಿರಕ್ಕೂ ಬರಲು ಶತ್ರುಗಳ ಯಾವ ವಿಮಾನದಿಂದಲೂ ಸಾಧ್ಯವಿಲ್ಲ. ಇದು ಗಂಟೆಗೆ ಸುಮಾರು 3,600 ಕಿ.ಮೀ. ವೇಗ, 85 ಸಾವಿರ ಅಡಿಗಳಿಗೂ ಹೆಚ್ಚು ಎತ್ತರದಲ್ಲಿ ಹಾರಬಲ್ಲದು. ರಾಕೆಟ್‌ ಇಂಜಿನ್‌ ಅಳವಡಿಸಿದ ಯುದ್ಧ ವಿಮಾನ(ನಾರ್ಥ್ ಅಮೆರಿಕನ್‌ ಎಕ್ಸ್‌-15)ಗಳನ್ನು ಹೊರತುಪಡಿಸಿ ವೇಗದಲ್ಲಿ ಪ್ರಪಂಚದ ಎಲ್ಲ ಯುದ್ಧ ವಿಮಾನಗಳಿಗೆ ಈ ಬ್ಲ್ಯಾಕ್‌ ಬರ್ಡ್ ಅನಭಿಶಿಕ್ತ ದೊರೆ. ಇಂತದ್ದೊಂದು ಯುದ್ಧ ವಿಮಾನಕ್ಕೆ ಅಮೆರಿಕ ನಿವೃತ್ತಿ ಘೋಷಿಸಿದ್ದೇಕೆ ಎಂಬುವುದೇ ಕುತೂಹಲ.

Advertisement

ಶೀತಲ ಸಮರದ ಸಮಯದಲ್ಲಿ ನಿರ್ಮಾಣಗೊಂಡ ಎಸ್‌ಆರ್‌-71 ಬ್ಲ್ಯಾಕ್‌ ಬರ್ಡ್‌ ಎತ್ತರದ ಹಾರಾಟದಲ್ಲಿ ಹಾಗೂ ವೇಗದಲ್ಲಿ ಇಂದಿಗೂ ಅದೇ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಮೀರಿಸುವ ಯುದ್ಧ ವಿಮಾನ 55 ವರ್ಷಗಳ ಬಳಿಕವೂ ಬಂದಿಲ್ಲ. ಇದು ಹಿಂದಿನಷ್ಟೇ ಕ್ಷಮತೆಯಿಂದ ಕಾರ್ಯ ನಿರ್ವಹಿಸಬಲ್ಲದು ಎಂದು ವಿಮಾನಯಾನ ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಯು-2 ಪತನ; ಎಸ್‌ಆರ್‌ ನಿರ್ಮಾಣಕ್ಕೆ ಮನ
1960ರಲ್ಲಿ ಅಮೆರಿಕದ ಯು-2 ಗೂಢಚಾರಿ ಯುದ್ಧವಿಮಾನ ಸೋವಿಯತ್‌ ವಾಯುನೆಲೆಯಲ್ಲಿ ವೈಮಾನಿಕ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದಾಗ ರಷ್ಯಾದ ಸೈನಿಕರು ಗುಂಡು ಹಾರಿಸಿ ನೆಲಕ್ಕೆ ಕೆಡವಿದರು. ಆರಂಭದಲ್ಲಿ ಇದು ದಾರಿತಪ್ಪಿ ಬಂದಿದ್ದ ಹವಾಮಾನ ಸಂಶೋಧನ ವಿಮಾನ ಎಂದು ಯುಎಸ್‌ಎ ಹೇಳಿತ್ತು. ಆದರೆ ರಷ್ಯಾ ವಶಪಡಿಸಿದ ಪೈಲೆಟ್‌ ಮತ್ತು ವಿಮಾನದ ಕಣ್ಗಾವಳು ಉಪಕರಣಗಳ ಫೊಟೋಗಳನ್ನು ಬಿಡುಗಡೆಗೊಳಿಸಿದಾಗ ನಿಜ ಸಂಗತಿ ತಿಳಿಯುವಂತಾಗಿತ್ತು. ಈ ಘಟನೆಯು ಶೀತಲ ಸಮರದ ಮೇಲೆ ರಾಜತಾಂತ್ರಿಕ ಪರಿಣಾಮಗಳನ್ನು ಬೀರಿತು. ಹೀಗಾಗಿ ವಿರೋಧಿ ಪಾಳಯಕ್ಕೆ ದಾಳಿ ಮಾಡಿ ಸುರಕ್ಷಿತವಾಗಿ ಹಿಂದಿರುಗಬಲ್ಲ ಸಾಮರ್ಥ್ಯವುಳ್ಳ, 90 ಸಾವಿರ ಅಡಿಗಳಿಗಿಂತಲೂ ಹೆಚ್ಚು ಎತ್ತರದಲ್ಲಿ ಹಾರಬಲ್ಲ, ಶತ್ರು ಪಾಳಯಗಳ ರಾಡಾರ್‌ಗಳಿಗೆ ಸಿಗದಷ್ಟು ವೇಗದ ಯುದ್ಧ ವಿಮಾನ ನಿರ್ಮಿಸುವ ಅಗತ್ಯವನ್ನು ಯುಸ್‌ ಸರಕಾರ ಮನಗಂಡಿತು. ಒಂದರ್ಥದಲ್ಲಿ ಯು2 ಯುದ್ಧ ವಿಮಾನದ ವೈಫ‌ಲ್ಯವೇ ಎಸ್‌ಆರ್‌ -71 ನಿರ್ಮಾಣಕ್ಕೆ ಮುನ್ನುಡಿಯಾಯಿತೆಂದು ಹೇಳಬಹುದು.

ನಿರ್ಮಾಣ ಯೋಜನೆ
ಈ ಯುದ್ಧ ವಿಮಾನದ ನಿರ್ಮಾಣಕ್ಕೆ 1960ರ ದಶಕದಲ್ಲಿ ಅಮೆರಿಕದ ಏರೋಸ್ಪೇಸ್‌ ಕಂಪೆನಿ ಲಾಕ್‌ಹೀಡ್‌ ಮುಂದಡಿಯಿಟ್ಟಿತು. ಇದರ ನಿರ್ಮಾಣ ಘಟಕಕ್ಕೆ 34 ಮಿಲಿಯನ್‌ ಡಾಲರ್‌ಗಳನ್ನು ಯುಎಸ್‌ಎ ಸರಕಾರವು ಮಿಲಿಟರಿ ಸಾಮರ್ಥ್ಯ ವೃದ್ಧಿಗಾಗಿ ಸುರಿಯಿತು. ಇದರ ನಿರ್ಮಾಣ ಯೋಜನೆಯನ್ನು ಸ್ಕಂಕ್‌ ವರ್ಕ್ಸ್ ಎಂದು ಕರೆಯುಲಾಗಿದೆ. ವಿನ್ಯಾಸ ಕಾರ್ಯವನ್ನು ಕ್ಲಾರೆನ್ಸ್‌ ಕೆಲ್ಲಿ ಜಾನ್ಸನ್‌ ಸಿದ್ಧ ಪಡಿಸಿದರು. ಎಸ್‌ಆರ್‌-71ರ ಆಕಾರವು ಎ-12 ಯುದ್ಧ ವಿಮಾನವನ್ನು ಆಧರಿಸಿ ಮಾಡಲಾಗಿದ್ದರೂ ಶತ್ರು ರಾಡರ್‌ನ ಸುಳಿಗೆ ಸಿಲುಕದೆ ತಪ್ಪಿಸಬಲ್ಲ ಸಾಮರ್ಥ್ಯ ಇದರಲ್ಲಿ ಅಡಕವಾಗಿದೆ. ಈ ಯುದ್ಧ ವಿಮಾನದಲ್ಲಿ ಕಣ್ಗಾವಳು ಸೆನ್ಸಾರ್‌ಗಳು ಮತ್ತು ಕೆಮರಾಗಳನ್ನು ಒಳಗೊಂಡಿದೆ. ಎಸ್‌ಆರ್‌ -71 ಎ-12ಗಿಂತ ಉದ್ದ ಮತ್ತು ಭಾರವಾಗಿರುತ್ತದೆ. ಇದು ಹೆಚ್ಚಿನ ಇಂಧನ ಮತ್ತು ಕಾಕ್‌ಪಿಟ್‌ಗಳನ್ನು ಹಿಡಿದಿಡಲು ಅನುವು ಮಾಡಿಕೊಡುತ್ತಿತ್ತು.

Advertisement

ಏನಿದು ಎಸ್‌ಆರ್‌-71 ಯುದ್ಧ ವಿಮಾನ
ಎಸ್‌ಆರ್‌-71 ಯುದ್ಧ ವಿಮಾನವನ್ನು 1960ರ ದಶಕದಲ್ಲಿ ಗೌಪ್ಯತೆವಾಗಿ ವಿನ್ಯಾಸಗೊಳಿಸಲಾಗಿತ್ತು. ಬಾಹ್ಯಾಕಾಶದ ಅಂಚಿಗೆ ಪ್ರಯಾಣಿಸಿ ಕ್ಷಿಪಣಿಯನ್ನು ಶತ್ರುವಿನತ್ತ ಹಾಕುವ ಉದ್ದೇಶದಿಂದ ಇದರ ನಿರ್ಮಾಣವಾಯಿತು. ರಾಕೆಟ್‌ ಇಂಜಿನ್‌ ಯುದ್ಧ ವಿಮಾನ ಹೊರತುಪಡಿಸಿ ಇಂದಿಗೂ ಇದು ಮಾನವ ಚಾಲಿತ ವಿಮಾನಗಳಲ್ಲೇ ಅತಿ ಎತ್ತರ ಮತ್ತು ವೇಗದ ಹಾರಾಟದ ದಾಖಲೆಗಳನ್ನು ಹೊಂದಿದೆ. ಇದು ಉಪಗ್ರಹ ಆಧಾರಿತ ರಾಡಾರ್‌ಮತ್ತು ಡ್ರೋನ್‌ಗಳ ಕಣ್ಣು ತಪ್ಪಿಸಿ ಶತ್ರು ವ್ಯಾಪ್ತಿಗೆ ನುಗ್ಗಿ ದಾಳಿ ನಡೆಸಿ ಬರುವ ಗೂಢಚರ್ಯ ಯುದ್ಧ ವಿಮಾನ. ಬಾಹ್ಯ ಶಾಖವನ್ನು ತಡೆದುಕೊಳ್ಳುವ ವಿಶೇಷ ಸಾಮರ್ಥ್ಯ ಎಲ್ಲ ಯುದ್ಧ ವಿಮಾನಗಳಿಗಿಂತ ಇದನ್ನು ಭಿನ್ನವಾಗಿರಿಸಿದೆ.

ಈ ಹಂತದಲ್ಲಿ ಒಟ್ಟು 32 ಎಸ್‌.ಆರ್‌. ಯುದ್ಧ ವಿಮಾನಗಳನ್ನು ನಿರ್ಮಿಸಲಾಗಿತ್ತು. 1960ರ ದಶಕದಲ್ಲಿ ನಿರ್ಮಾಣಗೊಂಡಿದ್ದರೂ ಇದು ಭವಿಷ್ಯದ ವಿಮಾನಗಳಿಗೆ ಸವಾಲಿನಂತಿದೆ. ಇದರ ಸಾಮರ್ಥ್ಯ ಈಗಿನ ವಿಮಾನಗಳಿಗೂ ಸಡ್ಡುಹೊಡೆಯುವಂತಿದೆ ಎಂದು ವಿಮಾನಯಾನ ಇತಿಹಾಸಕಾರ, ಲೇಖಕ ಪೀಟರ್‌ ಮೆರ್ಲಿನ್‌ ಅಭಿಪ್ರಾಯ ಪಡುತ್ತಾರೆ.

ಟೈಟಾನಿಯಂ ಹೊದಿಕೆ
ಈ ಲೋಹದ ಹಕ್ಕಿಯನ್ನು 3,500 ಕಿ.ಮೀ.ಗೂ ಅಧಿಕ ವೇಗವಾಗಿ ಹಾರಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ಈ ಅಧಿಕ ವೇಗಕ್ಕೆ ಘರ್ಷಣೆಯುಂಟಾಗಿ ಏರ್‌ ಫ್ರೇಮ್‌ ಕರಗುವ ಸಾಧ್ಯತೆ ಇರುವುದರಿಂದ ವಿಮಾನದ ಹೊರಪದರದ ನಿರ್ಮಾಣಕ್ಕೆ ಟೈಟಾನಿಯಂ ಲೋಹವನ್ನು ಬಳಸಲಾಗಿದೆ. ಇದು ಉಕ್ಕಿಗಿಂತ ಹಗುರವಾದ ಲೋಹವಾಗಿದ್ದರೂ ಹೆಚ್ಚಿನ ತಾಪಮಾನವನ್ನು ತಡೆಯಬಲ್ಲ ಸಾಮರ್ಥ್ಯ ಹೊಂದಿದೆ.

ಬ್ಲ್ಯಾಕ್‌ ಬರ್ಡ್‌: ಅಡ್ಡ ಹೆಸರು
ಶಾಖವನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಮತ್ತು ಹೊರಸೂಸಲು ವಿಮಾನಕ್ಕೆ ಕಪ್ಪು ಬಣ್ಣ ಬಳಿಯಲಾಗಿದ್ದು ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ಹಾರಾಟದ ವೇಳೆ ಮೋಡಗಳ ನಡುವೆ ಗೋಚರಕ್ಕೆ ಸಿಗದಿರುವುದರಿಂದ ಇದಕ್ಕೆ ಬ್ಲ್ಯಾಕ್‌ ಬರ್ಡ್‌ ಎಂಬ ಅಡ್ಡ ಹೆಸರಿನಿಂದ ಕರೆಯಲಾಯಿತು.

ಮೊದಲ ಕಾರ್ಯಾಚರಣೆ
ಎಸ್‌.ಆರ್‌ -71 ಯುದ್ಧ ವಿಮಾನವನ್ನು 1964ರ ಜುಲೈ 25ರಂದು ಅಮೆರಿಕ ಅಧ್ಯಕ್ಷರು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದರೂ, ಇದು ಅಂತಾರಾಷ್ಟ್ರೀಯ ಸೇವೆಗೆ ಪರಿಚಿತಗೊಂಡಿದ್ದು 1967ರಲ್ಲಿ.

ವಿಶೇಷತೆಗಳು
1. 1976ರ ಹಾರಾಟದಲ್ಲಿ ಅಧಿಕೃತ ವೇಗದ ದಾಖಲೆಯನ್ನು ನಿರ್ಮಿಸಿತು. (ಗಂಟೆಗೆ 3,529 ಕಿ.ಮೀ.)
2. ಇದು ಜಿಪಿಎಸ್‌ ಬದಲು ಆಕಾಶದಲ್ಲಿನ ನಕ್ಷತ್ರಗಳನ್ನು ಮ್ಯಾಪಿಂಗ್‌ ಮಾಡುವ ಮೂಲಕ ದಿಕ್ಕನ್ನು ಗ್ರಹಿಸುತ್ತದೆ.
3. ಇದರ 32 ವರ್ಷಗಳ ಕಾರ್ಯಾವಧಿಯಲ್ಲಿ 1,000ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಎದುರಿಸಿತು. ಆದರೆ ಒಂದೂ ಇದರ ಹತ್ತಿರಕ್ಕೆ, ಎತ್ತರಕ್ಕೆ ಬರಲಾಗಲಿಲ್ಲ.
4. ಪ್ರತಿ ವಿಮಾನದ ನಿರ್ವಹಣೆಗೆ 1970ರ ದಶಕದಲ್ಲಿ 31 ಮಿ. ಡಾಲರ್‌ ವೆಚ್ಚವಾಗಿತ್ತು.
5. ಒಟ್ಟು 32 ಬ್ಲ್ಯಾಕ್‌ಬರ್ಡ್‌ಗಳನ್ನು ನಿರ್ಮಿಸಲಾಗಿದ್ದು, ಪ್ರತಿ ವರ್ಷ ಒಂದರಂತೆ 32 ವರ್ಷ ಕಾರ್ಯ ನಿರ್ವಹಿಸಿದವು.
6. ಅಮೆರಿಕವೇ ಟೈಟಾನಿಯಂ ಲೋಹದ ಪೂರೈಕೆದಾರನಾಗಿದ್ದರೂ ಈ ಯುದ್ಧ ವಿಮಾನದ ರಚನೆ ಬಗ್ಗೆ ಯಾರಿಗೂ ಸಂಶಯ ಬರದಂತೆ ನಕಲಿ ಕಂಪೆನಿಗಳಿಂದ ಟೈಟಾನಿಯಂ ಖರೀದಿಯನ್ನು ಮಾಡಿತ್ತು.
7. ಈ ಯುದ್ಧ ವಿಮಾನದ ಪೈಲಟ್‌ ಬ್ರಿಯಾನ್‌ ಶುಲ್‌ ಸೆಲ್ಫಿ ತೆಗೆದಾಗ ಎಸ್‌ಆರ್‌-71 85,000 ಎತ್ತರದಲ್ಲಿ ಹಾರಾಡುತ್ತಿತ್ತು.
8. ಇದರ ಪೈಲೆಟ್‌ ಆಗಿ ಕಾರ್ಯ ನಿರ್ವಹಿಸುವುದು ಸುಲಭದ ಮಾತಲ್ಲ. 4 ಗಂಟೆಗಳ ಕಾರ್ಯಾಚರಣೆಯಲ್ಲಿ ಆತ 5 ಪೌಂಡ್‌ ತೂಕ ಕಳೆದುಕೊಳ್ಳುತ್ತಾನೆ.
9. ಮತ್ತೂಂದು ಆಶ್ಚರ್ಯಕರ ಸಂಗತಿಯೆಂದರೆ ಇದರ ವಿನ್ಯಾಸಕ್ಕೆ ಯಾವುದೇ ಕಂಪ್ಯೂಟರ್‌ ಬಳಸಿಲ್ಲ. ಬದಲಾಗಿ ಸ್ಲೆ„ಡ್‌ ನಿಯಮದನುಸಾರವಾಗಿ ವಿನ್ಯಾಸಗೊಳಿಸಲಾಗಿದೆ.
10. ಹಾರಾಟದ ಸಮಯದಲ್ಲಿ ಇದರ ಏರ್‌ ಫ್ರೇಮ್ ಗಳ ಘರ್ಷಣೆಯಿಂದ ಶಾಖದ ಮಟ್ಟ 900 ಡಿಗ್ರಿ ಸೆಲ್ಸಿಯಸ್‌ ಆಗಿರುತ್ತದೆ.

ಟೈಮ್‌ಲೈನ್‌
1 ಮೇ 1960: ಫ್ರಾನ್ಸಿಸ್‌ ಗ್ಯಾರಿ ಪವರ್ಸ್‌ ಅವರನ್ನು ಸೋವಿಯತ್‌ ಒಕ್ಕೂಟ ಅಮೆರಿಕದ ಲಾಕ್‌ಹೀಡ್‌ ಯು-2ಅನ್ನು ಹೊಡೆದುರುಳಿಸಿತು.

13 ಜೂನ್‌ 1962: ಎಸ್‌ಆರ್‌-71 ಅಣಕು ಪ್ರದರ್ಶನವನ್ನು ಅಮೆರಿಕ ವಾಯುಪಡೆ ಪರಿಶೀಲಿಸಿತು.

28 ಡಿಸೆಂಬರ್‌ 1962: ಲಾಕ್‌ಹೀಡ್‌ ಸಂಸ್ಥೆಯು ಮೊದಲಾಗಿ ಆರು ಎಸ್‌ಆರ್‌ -71 ವಿಮಾನಗಳನ್ನು ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಿತು.

25 ಜುಲೈ 1964: ಅಮೆರಿಕ ಅಧ್ಯಕ್ಷ ಜಾನ್ಸನ್‌ ಎಸ್‌ಆರ್‌ -71 ಬಗ್ಗೆ ಸಾರ್ವಜನಿಕ ಘೋಷಣೆ ಮಾಡಿದರು.

29 ಅಕ್ಟೋಬರ್‌ 1964: ಕ್ಯಾಲಿಫೋರ್ನಿಯಾದ ಪಾಮೆಲರ್‌ನಲ್ಲಿರುವ ವಾಯುಪಡೆಯ ಸ್ಥಾವರ 42ಕ್ಕೆ ಎಸ್‌ಆರ್‌ -71 ಕಳುಹಿಸಲಾಯಿತು.

22 ಡಿಸೆಂಬರ್‌ 1964: ಎಸ್‌ಆರ್‌ -71ರಲ್ಲಿ ಮೊದಲ ಹಾರಾಟವನ್ನು ಪರಿಕ್ಷಾರ್ಥವಾಗಿ ಪೈಲಟ್‌ ರಾಬರ್ಟ್‌ ಜೆ. ಬಾಬ… ಗಿಲ್ಲಿಲ್ಯಾಂಡ್‌ ನಡೆಸಿದರು.

21 ಜುಲೈ 1967: ಜಿಮ್‌ ವಾಟಿನ್ಸ್‌ಮತ್ತು ಡೇವ್‌ ಡೆಂಪ್ಸಟರ್‌ ಮೊದಲ ಅಂತಾರಾಷ್ಟ್ರೀಯ ಹಾರಾಟವನ್ನು ನಡೆಸಿದರು. ಆದರೆ ತರಬೇತಿ ಕಾರ್ಯಾಚರಣೆಯಲ್ಲಿ ವಿಫ‌ಲವಾಗಿ ಆಕಸ್ಮಿಕವಾಗಿ ಮೆಕ್ಸಿಕನ್‌ ವಾಯುಪ್ರದೇಶಕ್ಕೆ ಹಾರುತ್ತಾರೆ.

21 ಮಾರ್ಚ್‌ 1968: ಮೊದಲ ಕಾರ್ಯಾಚರಣೆಯನ್ನು ಎಸ್‌ಆರ್‌ -71 ವಿಯೆಟ್ನಾಂ ಮೇಲೆ ನಡೆಸಿತು.

ಜುಲೈ 27-28 1976: ಎಸ್‌ಆರ್‌ -71 ವೇಗ ಮತ್ತು ಎತ್ತರದ ದಾಖಲೆಗಳನ್ನು ದಾಖಲಿಸುತ್ತದೆ (ಸಮತಲ ಹಾರಾಟದ ಎತ್ತರ: 25,929.030 ಮೀ. ಮತ್ತು ಗಂಟೆಗೆ 3,529.560 ಕಿ.ಮೀ. ವೇಗ)

21 ಎಪ್ರಿಲ್‌ 1989: ಎಸ್‌ಆರ್‌ -71 ಟೇಕಾಫ್ ಆದ ಬಳಿಕ ಎಂಜಿನ್‌ ಸ್ಫೋಟಗೊಂಡು ನಾಶವಾಯಿತು.

22 ನವೆಂಬರ್‌ 1989: ಎಸ್‌ಆರ್‌ -71ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಲಾಯಿತು.

ರಾಜಕೀಯದಾಟದ ಕಾರಣಕ್ಕೆ ನಿವೃತ್ತಿ
ಸಾಮಾನ್ಯವಾಗಿ, ಯುದ್ಧ ವಿಮಾನಗಳು ನಿವೃತ್ತ ಹೊಂದಬೇಕೆಂದರೆ ಮೊದಲಾಗಿ ಅದಕ್ಕೂ ಮಿಗಿಲಾದ ತಂತ್ರಜ್ಞಾನಗಳನ್ನು ಒಳಗೊಂಡವುಗಳ ಆವಿಷ್ಕಾರವಾಗಬೇಕು. ಇಲ್ಲವೇ ಈ ಯುದ್ಧ ವಿಮಾನಗಳ ಸಾಮರ್ಥ್ಯ, ಕೌಶಲ ಸಂಪೂರ್ಣ ಇಳಿಕೆಯಾಗಬೇಕು. ಆದರೆ ಎಸ್‌ಆರ್‌ ನಿವೃತ್ತಿ ಬಿಡಿ ಈಗ ಚಾಲನೆ ಮಾಡಿದರೂ ಮೊದಲಿದ್ದ ಸಾಮರ್ಥ್ಯ ಒಳಗೊಂಡು ಅಷ್ಟೇ ವೇಗದಲ್ಲೇ ಹಾರಬಲ್ಲ ಸಾಮರ್ಥ್ಯ ಹೊಂದಿತ್ತು. ಇನ್ನೂ ಹೇಳಬೇಕೆಂದರೆ ಎಸ್‌ಆರ್‌ -71 ಕಾರ್ಯಾವಧಿಯ ಅದ್ಭುತ ಜೀವನದ ಅವಿಭಾಜ್ಯ ಸ್ಥಿತಿಯಲ್ಲಿತ್ತು. ರಷ್ಯನ್ನರ ಯಾವುದೇ ಯುದ್ಧ ವಿಮಾನಗಳನ್ನು ಮೀರಿಸುವ ಮತ್ತು ಅವರಿಗೆ ಅಂದಾಜೂ ಮಾಡದಂತೆ ಹೊಡೆತವಿಕ್ಕುವ ಸಾಮರ್ಥ್ಯವನ್ನೂ ಹೊಂದಿತ್ತು. ಆದರೆ ಈ ಯುದ್ಧ ವಿಮಾನಗಳ ನಿವೃತ್ತಿಯನ್ನು ತಡೆಯಲು ಇದು ಯಾವುದೂ ಪೂರಕವಾಗಲೇ ಇಲ್ಲ.

1990 ರಲ್ಲಿ ಬ್ಲ್ಯಾಕ್‌ ಬರ್ಡ್‌ಗೆ ನಿವೃತ್ತಿ ಘೋಷಿಸಿದಾಗ ವಾಯು ಪಡೆಯ ಸಿಬಂದಿಯೂ ಸೇರಿ ಇಡೀ ಅಮೆರಿಕ ಜನತೆ ಬೇಸರ ವ್ಯಕ್ತಪಡಿಸಿತು. ಆದರೆ ಆ ಬೇಸರಕ್ಕೆ ಸ್ಪಂದನೆ ದೊರಕಲೇ ಇಲ್ಲ. ಇದು ಗೊತ್ತು ಪಡಿಸಿದ ಕಾರ್ಯಾಚರಣೆಗೆ ದುಬಾರಿಯಾಗುತ್ತದೆ ಎಂದು ಆಡಳಿತ ಸರಕಾರ ಬಜೆಟ್‌ನಲ್ಲಿ ಪ್ರತಿಪಾದಿಸಿತು. ಇಂತಹ ಕಾರ್ಯಾಚರಣೆಗೆ ಸಾಧಾರಣ ಯುದ್ಧ ವಿಮಾನಗಳೇ ಸಾಕು. ಸುಮ್ಮನೆ ದುಂದುವೆಚ್ಚ ಮಾಡುವ ಅಗತ್ಯವಿಲ್ಲವೆಂದು ಹೇಳಿತು. ಅಷ್ಟೇ ಅಲ್ಲದೆ ಅಷ್ಟು ವೇಗದ ಯುದ್ಧ ವಿಮಾನಗಳನ್ನು ಮುನ್ನಡೆಸುವ ಸಮರ್ಥ ಪೈಲೆಟ್‌ಗಳನ್ನು ರೂಪಿಸುವಲ್ಲೂ ಸೈನ್ಯಾಡಳಿತ ಮನಸ್ಸು ಮಾಡಲಿಲ್ಲ.

ಈ ವೇಳೆಗಾಗಲೇ ವಾಯುಪಡೆಯ ಹಳೆಯ ಸಿಬಂದಿ ನಿವೃತ್ತರಾಗಿದ್ದರು. ಹೊಸ ಜನರಲ್‌ಗ‌ಳು ಈ ಯುದ್ಧ ವಿಮಾನವನ್ನು ಉಳಿಸಿಕೊಳ್ಳುವಲ್ಲಿ, ಬ್ಲ್ಯಾಕ್‌ ಬರ್ಡ್‌ನ ಕಾರ್ಯಾಚರಣೆಯನ್ನು ವಿವರಿಸುವಲ್ಲಿ ವಿಫ‌ಲರಾದರು.

ಐತಿಹಾಸಿಕ, ದಾಖಲೆಯ 1990ರ ಹಾರಾಟದ ಅನಂತರ ಸೆನೆಟ್‌ ಅನ್ನು ಉದ್ದೇಶಿಸಿ ಸೆನೆಟರ್‌ ಜಾನ್‌ ಗ್ಲೆನ್‌ ಬ್ಲ್ಯಾಕ್‌ ಬರ್ಡ್‌ ಹಾರಾಟವನ್ನು ಕಾರ್ಯತಂತ್ರದ ವೈಮಾನಿಕ ರಂಗದಲ್ಲಿ ನಮ್ಮ ದೂರದೃಷ್ಟಿ ನೀತಿಯ ದುಃಖದ ಸ್ಮಾರಕ ಎಂದು ನೆನಪಿಸಿಕೊಳ್ಳಲಾಗುವುದು ಎಂದು ಹೇಳಿದ್ದರು.

ನಿಜಕ್ಕಾದರೆ 1989ರ ಎಪ್ರಿಲ್‌ 21ರಂದು ಟೇಕಾಫ್ ಆದ ಯುದ್ಧವಿಮಾನ ಎಸ್‌ಆರ್‌-71 ವಿಮಾನವೊಂದು ಸ್ಫೋಟಗೊಂಡಿತ್ತು. ಆ ಕಾರಣಕ್ಕಾಗಿ ನಿವೃತ್ತಿ ಘೋಷಿಸಿದ್ದರೆ ಅದಕ್ಕೊಂದು ತೂಕವಿರುತ್ತಿತ್ತು. ಆದರೆ ವಿಶ್ವದ ದೊಡ್ಡಣ್ಣ ನಿವೃತ್ತಿ ಘೋಷಿಸಿದ್ದು ನಿರ್ವಹಣೆ ವೆಚ್ಚ ಜಾಸ್ತಿಯಾಗುತ್ತದೆ ಎಂದು.

-ಹನಿ ಕೈರಂಗಳ

Advertisement

Udayavani is now on Telegram. Click here to join our channel and stay updated with the latest news.

Next