ಉಡುಪಿ: ಭ್ರಷ್ಟಾಚಾರದಿಂದ ನಲುಗಿ ಅಭಿವೃದ್ಧಿ ಮರೀಚಿಕೆಯಾಗಿದ್ದ ಭಾರತದಲ್ಲಿ ಜನಪರ ಆಡಳಿತ ನೀಡುವ ಮೂಲಕ ಬಿಜೆಪಿ ಜನರ ಪಕ್ಷವಾಗಿ ಗುರುತಿಸಿಕೊಂಡಿದೆ. ಕೇಂದ್ರ, ರಾಜ್ಯದಲ್ಲಿ ಒಂದೆ ಪಕ್ಷದ ಆಡಳಿತದಿಂದ ಪ್ರಸ್ತುತ ಕರ್ನಾಟಕದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿವೆ. ಉಡುಪಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು, ವಿಕಾಸ ಮತ್ತು ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಸಹಕಾರ ಇಲಾಖೆ ರಾಜ್ಯ ಸಚಿವ ಬಿ.ಎಲ್. ವರ್ಮ ಹೇಳಿದರು.
ಸೋಮವಾರ ಸಂತೆಕಟ್ಟೆ ಜಂಕ್ಷನ್‌ನಲ್ಲಿ ಉಡುಪಿ ಬಿಜೆಪಿ ಅಭ್ಯರ್ಥಿಯ ಯಶ್‌ಪಾಲ್ ಸುವರ್ಣ ಅವರ ಪರವಾಗಿ ಬಿಜೆಪಿ ವತಿಯಿಂದ ಜರಗಿದ ರೋಡ್‌ಶೋದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಆಡಳಿತ ಚುಕ್ಕಾಣಿ ಹಿಡಿದ ಅನಂತರ ದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿತು. 60 ವರ್ಷ ದಲ್ಲಿ ಆಗದ ಅಭಿವೃದ್ಧಿ 8 ವರ್ಷ ದಲ್ಲಿ ಮೋದಿ ನಾಯಕತ್ವದಲ್ಲಿ ಮಾಡಿ ತೋರಿಸಿದ್ದೇವೆ. ರಾಜ್ಯದಲ್ಲಿ ಹಿಂದೆಂದೂ ಆಗಿರದ ಜನಪರ ಕಾರ್ಯಗಳು ಬಿಜೆಪಿ ಸರಕಾರದಲ್ಲಿ ನಡೆದಿದೆ ಎಂದರು. ಪಿಎಂ ವಸತಿ ಯೋಜನೆ, ಜನ್‌ಧನ್, ಆಯುಷ್ಮಾನ್ ಭಾರತ್, ಉಚಿತ ಪಡಿತರ ಮಹತ್ವದ ಯೋಜನೆಗಳನ್ನು ಬಡವರಿಗಾಗಿ ಜಾರಿಗೊಳಿಸಲಾಗಿದೆ. ದೇಶದ ಅರ್ಥ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ 10ನೇ ಸ್ಥಾನದಲ್ಲಿತ್ತು. ಮೋದಿ ದೃಷ್ಟಿಕೋನದಿಂದಾಗಿ ಪ್ರಸ್ತುತ ಜಾಗತಿಕ ಮಟ್ಟದಲ್ಲಿ 5ನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಶಾಸಕ ರಘುಪತಿ ಭಟ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರೂ ಏನನ್ನೂ ಯೋಚಿಸದೆ ಪಕ್ಷಕ್ಕಾಗಿ ತ್ಯಾಗ ಮನೋಭಾವದಿಂದ ಕೆಲಸ ಮಾಡು ತ್ತಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಪಕ್ಷ ನೀಡಲಿದೆ ಎಂದು ಹೇಳಿದರು.
ಭರ್ಜರಿ ರೋಡ್‌ಶೋ
ಸಂತೆಕಟ್ಟೆ ಆಶೀರ್ವಾದ ಚಿತ್ರಮಂದಿರ ಮುಂಭಾಗದಿಂದ ಸಂತೆಕಟ್ಟೆ ಜಂಕ್ಷನ್‌ವರೆಗೆ ರೋಡ್‌ಶೋ ನಡೆಸಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ಬಿಜೆಪಿ, ಮೋದಿ ಪರ ಘೋಷಣೆ ಕೂಗಿದರು. ಇದೇ ವೇಳೆ ಕಾಡೆಕಾರು ಗ್ರಾ.ಪಂ. ಸದಸ್ಯ, ಕಾಂಗ್ರೆಸ್ ಕಾರ್ಯಕರ್ತ ಸತೀಶ್ ಕೋಟ್ಯಾನ್ ಅವರು ಕೇಂದ್ರ ಸಚಿವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ಮುಂಬಯಿ ಉತ್ತರ ಕ್ಷೇತ್ರದ ಸಂಸದ ಗೋಪಾಲ ಶೆಟ್ಟಿ, ಪಕ್ಷದ ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ, ಮಹೇಶ್ ಠಾಕೂರ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ, ವಿಜಯ ಕೊಡವೂರು, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಜ್ಯೋತಿ ಶೇಟ್, ವೀಣಾ ನಾಯ್ಕ ಉಪಸ್ಥಿತರಿದ್ದರು.