Advertisement

ಬಿಜೆಪಿ ನಿರ್ಣಯಗಳಲ್ಲಿ ಬಿ.ಎಲ್.ಸಂತೋಷ್ ಮತ್ತೆ ಮೇಲುಗೈ

03:39 PM May 30, 2022 | Team Udayavani |

ಬೆಂಗಳೂರು : ರಾಜ್ಯಸಭೆಯ ಅಭ್ಯರ್ಥಿಯಾಗಿ ಜಗ್ಗೇಶ್ ಅಚ್ಚರಿ ಆಯ್ಕೆ, ವಿಧಾನಪರಿಷತ್ ಚುನಾವಣೆಯಲ್ಲಿ ” ವಂಶವಾದ” ಕ್ಕೆ ಅವಕಾಶವಿಲ್ಲ ಎಂಬ ಪಕ್ಷದ ಸಿದ್ಧಾಂತ ಅನುಷ್ಠಾನಕ್ಕೆ ಪಟ್ಟು ಸೇರಿದಂತೆ ರಾಜ್ಯ ಬಿಜೆಪಿಯ ಪ್ರಭಾ ವಲಯದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ನಿರ್ಧಾರಗಳೇ ಈಗ ಮೇಲುಗೈ ಪಡೆದುಕೊಂಡಿದೆ.

Advertisement

ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ರಾಜ್ಯ ಬಿಜೆಪಿ ವಲಯದಲ್ಲಿ ಒಂದು ವಿಚಾರದ ಚರ್ಚೆ ಪ್ರಾರಂಭಗೊಂಡಿತ್ತು. ಅದರಲ್ಲೂ ವಿಶೇಷವಾಗಿ ಜಗನ್ನಾಥ ಭವನದ ಸುತ್ತಮುತ್ತ ಪಿಸುಮಾತಿನಲ್ಲಿ ಕಾಲಕಳೆಯುವ ಗುಂಪಿನ ಮಧ್ಯೆ ಈ ಸಂಗತಿ ಕೆಲ ದಿನಗಳ ಕಾಲ ಹಾಟ್ ಟಾಪಿಕ್ ಆಗಿ ಚಾಲ್ತಿಯಲ್ಲಿತ್ತು. “ಈ ಬಾರಿ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎಂಬುದು ಸಂತೋಷ್ ಜಿ ಹಾಗೂ ಹೈಕಮಾಂಡ್ ನಡುವಿನ ವಿಶ್ವಾಸದ ಮಟ್ಟದ ಅಳತೆಗೋಲಾಗಲಿದೆ. ದಿಲ್ಲಿ ಮೂಲಗಳ ಪ್ರಕಾರ ಸಂತೋಷ್ ಜಿ ಬಗ್ಗೆ ಮೋದಿ ಹಾಗೂ ಅಮಿತ್ ಶಾ ಅವರಿಗೆ ಹಳೆಯ ವಿಶ್ವಾಸ ಉಳಿದಿಲ್ಲ. ಹೀಗಾಗಿ ಸಂತೋಷ್ ಜಿ ಅವರ ಶಿಫಾರಸ್ಸಿಗೆ ಈ ಬಾರಿ ಒಪ್ಪಿಗೆ ಸಿಗುವುದು ಅನುಮಾನ” ಎಂಬ ವ್ಯಾಖ್ಯಾನಗಳು ಈ ಗುಂಪು ಚರ್ಚೆಯಲ್ಲಿ ವ್ಯಕ್ತವಾಗುತ್ತಿತ್ತು. ಆದರೆ ವಾಸ್ತವಕ್ಕೂ, ಪಕ್ಷದ ವಲಯದಲ್ಲಿ ಸುಳಿಯುವ ಗಾಳಿ ಸುದ್ದಿಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ ಎಂಬುದು ಈಗ ಮತ್ತೆ ಸಾಬೀತಾಗಿದೆ.

ಇದನ್ನೂ ಓದಿ : ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಖಾನ್

ರಾಜ್ಯಸಭೆಗೆ ಜಗ್ಗೇಶ್ ಹೆಸರು ಅಂತಿಮಗೊಂಡಾಗ ಬಿಜೆಪಿಯ ಬಹುತೇಕರಿಗೆ ಅಚ್ಚರಿ ಕಾದಿತ್ತು. ಏಕೆಂದರೆ ಮಾಧ್ಯಮದಲ್ಲಿ ಚರ್ಚೆಯಾದ ಹೆಸರುಗಳಲ್ಲಿ ಜಗ್ಗೇಶ್ ಪ್ರಸ್ತಾಪವೇ ಇರಲಿಲ್ಲ. ಅಷ್ಟಕ್ಕೂ ಕೋರ್ ಕಮಿಟಿ ಸಭೆಯಲ್ಲಿ ಜಗ್ಗೇಶ್ ಹೆಸರನ್ನು ಪ್ರಸ್ತಾಪಿಸಲಾಗಿತ್ತೇ ? ಎಂಬುದರ ಬಗ್ಗೆ ಯೂ ಸ್ಪಷ್ಟತೆ ಇಲ್ಲ. ಆದರೆ ಕೋರ್ ಕಮಿಟಿ ಸಭೆ ನಡೆದ ದಿನ ಜಗ್ಗೇಶ್ ಪಕ್ಷದ ಕಚೇರಿಯಲ್ಲಿದ್ದರು ! ಆದರೆ ಹಳೆ ಮೈಸೂರು ಭಾಗದಲ್ಲಿ ರಾಜಕೀಯ ಸಮೀಕರಣ ದೃಷ್ಟಿಯಿಂದ ಜಗ್ಗೇಶ್ ನೇಮಕ ಸೂಕ್ತ ಎಂದು ಖುದ್ದು ಬಿ.ಎಲ್.ಸಂತೋಷ್ ಅವರೇ ವರಿಷ್ಠರಿಗೆ ಮನದಟ್ಟು ಮಾಡಿದ್ದರಿಂದ ಈ ನೇಮಕವಾಗಿದೆ ಎಂದು ಹೇಳಲಾಗುತ್ತಿದೆ. ಅದೇ ರೀತಿ ಪರಿಷತ್ ಆಭ್ಯರ್ಥಿಗಳಾದ ಕೇಶವ ಪ್ರಸಾದ್, ಹೇಮಲತಾ ನಾಯಕ್, ಲಕ್ಷ್ಮಣ ಸವದಿ, ಛಲವಾದಿ ನಾರಾಯಣಸ್ವಾಮಿ ಹೆಸರು ಅಂತಿಮಗೊಳ್ಳುವುದಕ್ಕೂ ಸಂತೋಷ್ ಅವರೇ ಕಾರಣ.

ಮರುಜೀವ
ಈ ನೇಮಕದಿಂದ ಜಗ್ಗೇಶ್ ಅವರಿಗೆ ರಾಜಕೀಯ ದಲ್ಲಿ ಮರುಜೀವ ದೊರೆತಂತಾಗಿದೆ. ತುರುವೆಕೆರೆಯಲ್ಲಿ ಆಪರೇಷನ್ ಕಮಲದ ಬಳಿಕ ನಡೆದ ಚುನಾವಣೆಯಲ್ಲಿ ಸೋತಿದ್ದ ಜಗ್ಗೇಶ್ ಮತ್ತೆ ಗೆಲುವಿನ ಮುಖ ನೋಡಿಲ್ಲ. ವಿಧಾನಪರಿಷತ್ ಗೆ ನೇಮಕಗೊಂಡರೂ ರಾಜಕೀಯ ಏಳಿಗೆ ಸಾಧ್ಯವಾಗಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರದಿಂದ ಸ್ಪರ್ಧಿಸಿದ್ದರೂ ಗೆಲುವು ಸಿಕ್ಕಿರಲಿಲ್ಲ. ಆದರೆ ರಾಜಕೀಯ ಹಿನ್ನಡೆಯ ಬಗ್ಗೆ ಎಲ್ಲಿಯೂ ತುಟಿ ಬಿಚ್ಚದ ಜಗ್ಗೇಶ್ ಮೌನಕ್ಕೆ ಶರಣಾಗಿದ್ದರು. ಆದರೆ ಈ ಹೊಸ ಅವಕಾಶ ಜಗ್ಗೇಶ್ ಅವರ ವ್ಯಾಪ್ತಿಯನ್ನು ಬದಲಾಯಿಸಿದೆ ಎಂದು ಪಕ್ಷದ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next