ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಹಗಲು ರಾತ್ರಿ ಟಿಪ್ಪು ಜಪ ನಡೆಯುತ್ತೆ ಮತ್ತು ಮುಂದಿನ ಜನ್ಮದಲ್ಲಿ ಮುಸಲ್ಮಾನ್ ಆಗುವ ವ್ಯಕ್ತಿಗಳು ಬಹಳಷ್ಟು ಜನ ಹುಟ್ಟಿಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವ್ಯಂಗ್ಯವಾಡಿದರು.
ನಗರದ ಹೊರವಲಯದ ಕೃಷ್ಣ ಕನ್ವೆನ್‌ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ನವರು ನಿದ್ದೆಯಲ್ಲಿ ಮತ್ತು ಎದ್ದೇಳುವಾಗ ಟಿಪ್ಪು ಜಪ ಮಾಡುತ್ತಾರೆ. ಎಂದಿಗೂ ಅವರು ಸ್ವಾತಂತ್ರ್ಯ ಹೋರಾಟಗಾರ ಮದಕರಿ ನಾಯಕರ ಬಗ್ಗೆ ಜಪ ಮಾಡಿಲ್ಲ. ಸರ್ವ ಜನಾಂಗದ ಅಭಿವೃದ್ಧಿಗಾಗಿ ಯಾವುದೇ ರೀತಿಯ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಿಲ್ಲ. ನಿರ್ದಿಷ್ಟ ಸಮುದಾಯವನ್ನು ಓಲೈಕೆ ಮಾಡುವ ರಾಜಕಾರಣ ಮಾಡುತ್ತಾ ಬಂದಿದೆ ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವಾಜಪೇಯಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಸಹಿತ ಹಲವರು ಸೋಲು ಕಂಡಿದ್ದಾರೆ. ಆದರೆ ಕ್ಷೇತ್ರ ಬದಲಾವಣೆ ಮಾಡಿಲ್ಲ. ಹೊಸ ಕ್ಷೇತ್ರ ಹುಡುಕಾಟ ನಡೆಸಿಲ್ಲ. ಜನರ ವಿಶ್ವಾಸ ಉಳಿಸಿಕೊಂಡರೆ ಕ್ಷೇತ್ರ ಹುಡುಕಾಟದ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದರು.
ದಕ್ಷಿಣ ಕನ್ನಡದ ಸುಳ್ಯದಲ್ಲಿ ವಿದ್ಯುತ್ ಬಗ್ಗೆ ಪ್ರಶ್ನೆ ಮಾಡಿದ್ದ ವ್ಯಕ್ತಿಗೆ ಹಲ್ಲೆ ನಡೆಸಿ, ಲಾಕಪ್‌ನಲ್ಲಿ ಹಾಕಿದವರು ಇವತ್ತು ಉಚಿತ ವಿದ್ಯುತ್ ಕೊಡುವ ಆಶ್ವಾಸನೆ ನೀಡುತ್ತಿದ್ದಾರೆ. ಮಹಿಳೆಯರ ಕಲ್ಯಾಣದ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಮೊದಲು ಅಧಿಕಾರಕ್ಕೆ ಬನ್ನಿ ನೋಡೋಣ ಎಂದು ಸವಾಲು ಹಾಕಿದರು.
ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಉಸ್ತುವಾರಿ ಸಚಿವ ಎನ್. ನಾಗರಾಜ್ (ಎಂಟಿಬಿ) ಮಾತನಾಡಿದರು.
ಮತ್ತೂಂದು ಪಕ್ಷದ ಮುಖಂಡರನ್ನು ಏಕವಚನದಲ್ಲಿ ಸಂಬೋಧಿಸುವ ಸಿದ್ದರಾಮಯ್ಯ ಅವರದ್ದು ಕಾಂಗ್ರೆಸ್ ಸಂಸ್ಕೃತಿ. ಅವರು ಹಾಗೆಯೇ ಮಾತನಾಡಲಿ. ಜನ ತಕ್ಕ ಪಾಠ ಕಲಿಸುತ್ತಾರೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಿ, ಪಕ್ಷಕ್ಕಾಗಿ ಕೆಲಸ ಮಾಡಿ.
–ಬಿ.ಎಲ್.ಸಂತೋಷ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ