Advertisement

ಕಾಂಗ್ರೆಸ್‌ ಅಧಿಕಾರಕ್ಕೆ ಕರಾವಳಿಯಲ್ಲಿ ಮುನ್ನುಡಿ: ಬಿ.ಕೆ. ಹರಿಪ್ರಸಾದ್‌

12:58 AM Feb 07, 2023 | Team Udayavani |

ಮೂಡುಬಿದಿರೆ: ಬಿಜೆಪಿಯ ಭ್ರಷ್ಟ ಆಡಳಿತದಿಂದ ರೋಸಿ ಹೋಗಿರುವ ಮತದಾರರು ಜನಪರ ಆಡಳಿತಕ್ಕಾಗಿ ಕಾಂಗ್ರೆಸ್‌ನತ್ತ ಮುಖ ಮಾಡುವಂತಾಗಿದೆ. ಕರಾವಳಿಯಲ್ಲಿ ಕಾಂಗ್ರೆಸ್‌ ಗೆಲುವು ಸಾಧ್ಯವಾದರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಆಡಳಿತ ಸೂತ್ರ ಹಿಡಿಯಲು ಮುನ್ನುಡಿ ಬರೆದಂತಾಗುವುದು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ, ಕರಾವಳಿ ಕರ್ನಾಟಕದ ಕಾಂಗ್ರೆಸ್‌ ಉಸ್ತುವಾರಿ ಬಿ.ಕೆ. ಹರಿಪ್ರಸಾದ್‌ ಅಭಿಪ್ರಾಯಪಟ್ಟರು.

Advertisement

ಮೂಡುಬಿದಿರೆ ಬ್ಲಾಕ್‌ ಕಾಂಗ್ರೆಸ್‌ ಆಶ್ರಯದಲ್ಲಿ ಕರಾವಳಿ ಪ್ರದೇಶ ಕಾಂಗ್ರೆಸ್‌ ಸಮಿತಿ ವತಿಯಿಂದ ಸೋಮವಾರ ಸಮಾಜ ಮಂದಿರದಲ್ಲಿ ನಡೆದ ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತಿಗೆ ಜಿ.ಪಂ. ಕ್ಷೇತ್ರದ ಕಾಂಗ್ರೆಸ್‌ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಜೆಪಿಯವರು ಶಿಕ್ಷಣ ರಂಗಕ್ಕೆ ಕೇಸರಿ ರಂಗು ಬಳಿಯಲು ಹೊರಟಿದ್ದಾರೆ. ಚಾಕು, ಚೂರಿ ಆಯುಧ ಸಂಸ್ಕೃತಿ ನಮಗೆ ಬೇಡ. ನಮ್ಮ ಮಕ್ಕಳು ಪೆನ್ನು ಹಿಡಿಯಬೇಕೇ ಹೊರತು ಗನ್ನು ಹಿಡಿಯುವುದಲ್ಲ. ನಾವ್ಯಾರೂ ಅದಕ್ಕೆ ಅವಕಾಶ ಕೊಡಬಾರದು ಎಂದರು.

ಭರವಸೆಗಳ ಅನುಷ್ಠಾನ
ಕಾಂಗ್ರೆಸ್‌ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ನನ್ನ ತಂದೆ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ರೈತರು, ಕೃಷಿಕರಿಗೆ ಒದಗಿಸಿದ್ದ ಸೌಲಭ್ಯಗಳನ್ನು ಇಂದಿಗೂ ಜನ ನೆನಪಿಸುತ್ತಿದ್ದಾರೆ. ಕಾಂಗ್ರೆಸ್‌ ಸರಕಾರಗಳು ನೀಡಿದ ಭರವಸೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಿವೆ ಎಂದು ಹೇಳಿದರು.

ಎಲ್ಲಿದೆ ಆಚ್ಛೇ ದಿನ್‌?
ದ.ಕ. ಜಿಲ್ಲೆಯ ಚುನಾವಣ ಉಸ್ತುವಾರಿ, ಕೇರಳದ ಶಾಸಕ ರೋಝಿ ಜಾನ್‌ ಮಾತನಾಡಿ, ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಆವಶ್ಯಕ ವಸ್ತುಗಳೆಲ್ಲ ದುಬಾರಿಯಾಗಿವೆ. ಮೋದಿ ಹೇಳಿರುವ ಅಚ್ಛೇ ದಿನ್‌ ಎಲ್ಲಿದೆ? ಎಂದು ಪ್ರಶ್ನಿಸಿದರು.

Advertisement

ಮಾಜಿ ಸಚಿವ ಕೆ. ಅಭಯಚಂದ್ರ ಮಾತನಾಡಿ, ಮನೆ ಮನೆಗೆ ಭೇಟಿ ನೀಡುವ ಕಾರ್ಯಕರ್ತರು ಕಾಂಗ್ರೆಸ್‌ ಆಡಳಿತದ, ಸಿದ್ದರಾಮಯ್ಯ ಅವರ ದೂರದೃಷ್ಟಿಯ, ಜನಹಿತ ಕಾಯ್ದುಕೊಂಡ ಯೋಜನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಬೇಕು ಎಂದರು.

ಕಾಂಗ್ರೆಸ್‌ ಕೊಡುಗೆಗಳು
ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಪ್ರತೀ ಮನೆಗೂ 200 ಯೂನಿಟ್‌ ಮಾಸಿಕ ಉಚಿತ ವಿದ್ಯುತ್‌, ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂ. ಕೊಡುಗೆ ಅಲ್ಲದೆ, ಕರಾವಳಿ ಪ್ರದೇಶದ ಅಭಿವೃದ್ಧಿಗೆ ಕಾಂಗ್ರೆಸ್‌ ಪಕ್ಷ ಘೋಷಿಸಿರುವ ಮಂಗಳೂರಿನಲ್ಲಿ ಐಟಿ ಮತ್ತು ಗಾರ್ಮೆಂಟ್‌ ಪಾರ್ಕ್‌, 1 ಲಕ್ಷ ಉದ್ಯೋಗ ಸೃಷ್ಟಿ ಇತ್ಯಾದಿ ಅಂಶಗಳ ಬಗ್ಗೆ ಮಾತನಾಡಿದರು.

ಜಿ.ಪಂ. ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ ಅವರು ಕಾಂಗ್ರೆಸ್‌ ಯಾವತ್ತೂ ಮಹಿಳಾ ಪರವಾಗಿರುವ ಪಕ್ಷ; ಭ್ರಷ್ಟವಾಗಿರುವ ಬಿಜೆಪಿಯ ಆಡಳಿತವನ್ನು ಕೊನೆಗಾಣಿಸೋಣ ಎಂದು ಕರೆ ನೀಡಿದರು.

ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಮೂಡುಬಿದಿರೆ ವಿಧಾನಸಭೆ ಕ್ಷೇತ್ರದ ಉಸ್ತುವಾರಿ ಮಿಥುನ್‌ ರೈ, ಯುವ ಕಾಂಗ್ರೆಸ್‌ ಅಧ್ಯಕ್ಷ ಜಯಕುಮಾರ್‌ ಶೆಟ್ಟಿ, ಲುಕಾ¾ನ್‌ ಬಂಟ್ವಾಳ, ಭರತ್‌ ಮುಂಡೋಡಿ, ಮುಖಂಡರಾದ ರಾಜಶೇಖರ ಕೋಟ್ಯಾನ್‌, ಕವಿತಾ ಸನಿಲ್‌, ಚಂದ್ರಹಾಸ ಸನಿಲ್‌, ಮನಪಾ ಕಾರ್ಪೊರೇಟರ್‌ ಅಪ್ಪಿ, ಮೂಡುಬಿದಿರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಲೇರಿಯನ್‌ ಸಿಕ್ವೇರಾ, ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ವಕ್ತಾರ ರಾಜೇಶ್‌ ಕಡಲಕೆರೆ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next